

ಮುಂಬೈ: ಕ್ರಿಕೆಟ್ ಮೈದಾನದಿಂದ ಕಿರುತೆರೆಯತ್ತ ಹೆಜ್ಜೆ ಇಡುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಟೀಶರ್ಟ್ ಮೂಲಕವೂ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ‘ಫ್ಯಾಮಿಲಿ ಫುಲ್ ಹೌಸ್’ ಗೇಮ್ ಶೋ ಮೂಲಕ ನಿರೂಪಕರಾಗಿ ಕಿರುತೆರೆಗೆ ಎಂಟ್ರಿ ಕೊಡುತ್ತಿರುವ ರೋಹಿತ್, ಶೂಟಿಂಗ್ ಸೆಟ್‌ನಲ್ಲಿ ಧರಿಸಿದ್ದ ಟೀ-ಶರ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿರುವುದು ಕಂಡುಬಂದಿದೆ. ಅದರ ಮೇಲೆ ‘Non-committal?’ ಎಂಬ ಪದ ಮುದ್ರಿಸಲಾಗಿದೆ. ಇದೇ ಪದ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಕೆಲ ಅಭಿಮಾನಿಗಳು ರೋಹಿತ್ ಅವರ ಟೀ-ಶರ್ಟ್ ಅನ್ನು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಹಿಂದಿನ ಹೇಳಿಕೆಗೆ ತಳುಕು ಹಾಕಿದ್ದಾರೆ.
ಅಗರ್ಕರ್ ಗೂ ರೋಹಿತ್ ಟೀಶರ್ಟ್ ಗೂ ಏನು ಸಂಬಂಧ?
2025ರ ಅಕ್ಟೋಬರ್‌ನಲ್ಲಿ 2027ರ ಏಕದಿನ ವಿಶ್ವಕಪ್ ಕುರಿತ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಯೋಜನೆಗಳ ಬಗ್ಗೆ ಮಾತನಾಡಿದ್ದ ಅಗರ್ಕರ್, ಇಬ್ಬರೂ ಆಟಗಾರರು ತಮ್ಮ ಭವಿಷ್ಯದ ಬಗ್ಗೆ ‘non-committal’ ಆಗಿದ್ದಾರೆ ಎಂದು ಹೇಳಿದ್ದರು.
ಹೀಗಾಗಿ ರೋಹಿತ್ ಇದೀಗ ಅದೇ ಪದವಿರುವ ಟೀ-ಶರ್ಟ್ ಧರಿಸಿರುವುದು ಹಲವು ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ ಈ ಟೀ-ಶರ್ಟ್ ಅನ್ನು ಅಜಿತ್ ಅಗರ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರೋಹಿತ್ ಧರಿಸಿದ್ದಾರೆಯೇ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ಎಂಬುದು ಮಾತ್ರ ಸದ್ಯಕ್ಕೆ ಕುತೂಹಲ ಮೂಡಿಸಿದೆ.
ಕಿರುತೆರೆಗೆ ರೋಹಿತ್ ಭರ್ಜರಿ ಎಂಟ್ರಿ
ಇದೀಗ ರೋಹಿತ್ ಶರ್ಮಾ ಕ್ರಿಕೆಟ್‌ನಿಂದ ಹೊರತಾಗಿ ಮನರಂಜನಾ ಕ್ಷೇತ್ರದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ‘ಫ್ಯಾಮಿಲಿ ಫುಲ್ ಹೌಸ್’ ಕಾರ್ಯಕ್ರಮ ಸೆಪ್ಟೆಂಬರ್ 19, 2026ರಿಂದ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮತ್ತು ಸೋನಿ LIVನಲ್ಲಿ ಪ್ರಸಾರವಾಗಲಿದೆ.
ಕ್ರಿಕೆಟ್ ಮೈದಾನದಲ್ಲಿ ಬೌಲರ್‌ಗಳ ತಂತ್ರಗಳನ್ನು ಅರ್ಥೈಸಿ, ಇನ್ನಿಂಗ್ಸ್ ರೂಪಿಸುತ್ತಿದ್ದ ರೋಹಿತ್ ಇನ್ನು ಮುಂದೆ ಸ್ಪರ್ಧಿಗಳು ಹಾಗೂ ಅತಿಥಿಗಳೊಂದಿಗೆ ಸಂವಾದ ನಡೆಸುತ್ತಾ ಕಾರ್ಯಕ್ರಮದ ಉತ್ಸಾಹ ಹೆಚ್ಚಿಸುವ ಜವಾಬ್ದಾರಿ ಹೊತ್ತಿದ್ದಾರೆ. ಅವರ ಸಹಜ ಹಾಸ್ಯಪ್ರಜ್ಞೆ ಮತ್ತು ಕೂಲ್ ವ್ಯಕ್ತಿತ್ವ ನಿರೂಪಕನ ಪಾತ್ರದಲ್ಲಿ ಅವರಿಗೆ ನೆರವಾಗುವ ಸಾಧ್ಯತೆಯಿದೆ.
ಕಾರ್ಯಕ್ರಮದ ಶೂಟಿಂಗ್ ಸೆಟ್‌ನಲ್ಲಿರುವ ರೋಹಿತ್ ಅವರ ವೈಯಕ್ತಿಕ ಸ್ಥಳದಲ್ಲೂ ಅವರ ಕ್ರಿಕೆಟ್ ಬದುಕಿನ ಛಾಪು ಕಾಣಿಸುತ್ತದೆ. ಅವರ ಐಕಾನಿಕ್ ಜೆರ್ಸಿಯನ್ನು ಗೋಡೆಯ ಮೇಲೆ ಫ್ರೇಮ್ ಮಾಡಿ ಹಾಕಲಾಗಿದ್ದು, ‘ಹಿಟ್‌ಮ್ಯಾನ್’ ಎಂಬ ಕೆತ್ತನೆಯೂ ಇದೆ. ಕ್ರಿಕೆಟ್ ಹೆಲ್ಮೆಟ್ ಮತ್ತು ಬ್ಯಾಟ್‌ಗೂ ಅಲ್ಲಿ ಜಾಗ ಕಲ್ಪಿಸಲಾಗಿದೆ.
ನೀಲಿ ಬಣ್ಣದ ಛಾಯೆಗಳು ಹೆಚ್ಚಾಗಿ ಕಾಣುವ ಈ ಲಾಂಜ್, ರೋಹಿತ್ ಅವರ ಕ್ರಿಕೆಟ್ ಹಿನ್ನೆಲೆಯನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಮತ್ತೊಂದು ಇನ್ನಿಂಗ್ಸ್
ಕ್ರಿಕೆಟ್‌ನಲ್ಲಿ ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಹಾಗೂ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯದಿಂದಲೇ ರೋಹಿತ್ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆದರೆ ಕಿರುತೆರೆ ಅವರಿಗೆ ವಿಭಿನ್ನ ಸವಾಲು ಒಡ್ಡಲಿದೆ. ಸಂಭಾಷಣೆ, ಹಾಸ್ಯ, ತಕ್ಷಣದ ಪ್ರತಿಕ್ರಿಯೆ ಹಾಗೂ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯದ ಮೂಲಕ ಇಲ್ಲಿ ಅವರ ‘ಟೈಮಿಂಗ್’ ಪರೀಕ್ಷೆಗೆ ಒಳಗಾಗಲಿದೆ.
ಶೋನ ಆರಂಭಿಕ ದೃಶ್ಯಗಳು ರೋಹಿತ್ ಹೊಸ ಕ್ಷೇತ್ರಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿರುವುದನ್ನು ತೋರಿಸುತ್ತಿವೆ. ಕ್ರಿಕೆಟ್ ಅಭಿಮಾನಿಗಳು ಅವರ ಶಾಂತ ಸ್ವಭಾವ ಮತ್ತು ಸೂಕ್ಷ್ಮ ಹಾಸ್ಯಪ್ರಜ್ಞೆಯನ್ನು ಚೆನ್ನಾಗಿ ಬಲ್ಲರು. ಇದೀಗ ಅದೇ ಗುಣಗಳನ್ನು ಮನರಂಜನಾ ಕ್ಷೇತ್ರದಲ್ಲಿ ತೋರಿಸಲು ಅವರಿಗೆ ಅವಕಾಶ ಸಿಕ್ಕಿದೆ.
ಕ್ರಿಕೆಟ್ ಮೈದಾನದಿಂದ ಕಿರುತೆರೆಯ ವೇದಿಕೆಗೆ ರೋಹಿತ್ ಅವರ ಹೊಸ ಇನ್ನಿಂಗ್ಸ್ ಆರಂಭವಾಗುತ್ತಿದೆ. ಈ ಬಾರಿ ಕೈಯಲ್ಲಿ ಬ್ಯಾಟ್ ಇಲ್ಲ, ಎದುರು ಕ್ರಿಕೆಟ್ ಪಿಚ್ ಇಲ್ಲ. ಆದರೆ ‘ಹಿಟ್‌ಮ್ಯಾನ್’ ಮನರಂಜನಾ ಲೋಕದಲ್ಲಿ ಹೇಗೆ ಬ್ಯಾಟ್ ಬೀಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.