

ಬೆಂಗಳೂರು: ಮುಂಬರುವ 2027ರ ಐಪಿಎಲ್ ಟೂರ್ನಿಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಿನಿ ಹರಾಜಿಗೂ ಮುನ್ನ ಇಂಗ್ಲೆಂಡ್‌ನ ಯುವ ಬ್ಯಾಟರ್ ಜೇಕಬ್ ಬೆಥೆಲ್, ಯುವ ವೇಗಿ ಮಂಗೇಶ್ ಯಾದವ್ ಸೇರಿದಂತೆ ಒಟ್ಟು ಆರು ಆಟಗಾರರಿಗೆ ಗೇಟ್ ಪಾಸ್ ನೀಡಿದೆ.
ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆರ್‌ಸಿಬಿ, ಮುಂಬರುವ ಆವೃತ್ತಿಯಲ್ಲೂ ತನ್ನ ಬಲಿಷ್ಠ ತಂಡವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. ಇಂಗ್ಲೆಂಡ್‌ನ ಪ್ರತಿಭಾವಂತ ಆಲ್‌ರೌಂಡರ್ ಜೇಕಬ್ ಬೆಥೆಲ್ ಅವರನ್ನು ರಿಲೀಸ್ ಮಾಡಲಾಗಿದೆ.
ಕಳೆದ ಹರಾಜಿನಲ್ಲಿ ಅವರನ್ನು 2.6 ಕೋಟಿ ರೂ. ನೀಡಿ ಖರೀದಿಸಲಾಗಿತ್ತು. 2026ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡುವ ಅವರ ನಿರ್ಧಾರವೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ 2027ರ ಆವೃತ್ತಿಗೂ ಮುನ್ನ ಅವರನ್ನು ಬಿಡುಗಡೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ.
ಇನ್ನು ಯುವ ವೇಗಿ ಮಂಗೇಶ್ ಯಾದವ್ ಅವರನ್ನು ಬಿಡುಗಡೆ ಮಾಡಿರುವುದು ಆರ್‌ಸಿಬಿಯ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಕಳೆದ ಹರಾಜಿನಲ್ಲಿ ಬರೋಬ್ಬರಿ 5.2 ಕೋಟಿ ರು ನೀಡಿ ಅವರನ್ನು ತಂಡಕ್ಕೆ ಖರೀದಿಸಲಾಗಿತ್ತು. ಆರ್‌ಸಿಬಿ ಬಿಡುಗಡೆ ಮಾಡಿರುವ ಐವರು ಆಟಗಾರರ ವಿವರ ಹಾಗೂ ಅವರ ಹಿಂದಿನ ಖರೀದಿ ಮೊತ್ತ ಈ ಕೆಳಗಿನಂತಿದೆ.
ಮಂಗೇಶ್ ಯಾದವ್: 5.2 ಕೋಟಿ ರೂ
ಜೇಕಬ್ ಬೆಥೆಲ್: 2.6 ಕೋಟಿ ರೂ
ರಿಚರ್ಡ್ ಗ್ಲೀಸನ್: 1.6 ಕೋಟಿ ರೂ
ಸಾತ್ವಿಕ್ ದೇಸ್ವಾಲ್: 30 ಲಕ್ಷ ರೂ
ವಿಹಾನ್ ಮಲ್ಹೋತ್ರಾ: 30 ಲಕ್ಷ ರೂ
ಸ್ವಪ್ನಿಲ್ ಸಿಂಗ್: 50 ಲಕ್ಷ ರೂ
ಈ ಆರು ಮಂದಿಯನ್ನು ಬಿಡುಗಡೆ ಮಾಡುವ ಮೂಲಕ ಆರ್‌ಸಿಬಿ ತಂಡ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಂಡಿದೆ.
ಆರ್‌ಸಿಬಿ ಬಳಿ ಉಳಿದಿರುವ ಹಣವೆಷ್ಟು? 2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡದ ಬಳಿ 14.15 ಕೋಟಿ ರು. ಹಣ ಉಳಿದಿದೆ. ತಂಡದಲ್ಲಿ ಇನ್ನೂ ಐದು ಆಟಗಾರರ ಸ್ಥಾನಗಳು ಖಾಲಿಯಿದ್ದು, ಈ ಪೈಕಿ ಒಬ್ಬ ವಿದೇಶಿ ಆಟಗಾರನನ್ನು ಖರೀದಿಸಬಹುದಾಗಿದೆ.
ಆರ್‌ಸಿಬಿಯಲ್ಲಿ ಉಳಿದ ಆಟಗಾರರು: ರಜತ್ ಪಾಟೀದರ್ (ನಾಯಕ), ವಿರಾಟ್ ಕೊಹ್ಲಿ, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ, ಜಾಶ್ ಹೇಝಲ್‌ವುಡ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್,ಫಿಲ್ ಸಾಲ್ಟ್, ರೊಮ್ಯಾರಿಯೊ ಶೆಫರ್ಡ್, ನುವಾನ್ ತುಷಾರ, ವೆಂಕಟೇಶ್ ಅಯ್ಯರ್, ಜೇಕಬ್ ಡಫಿ, ಜೋರ್ಡನ್ ಕಾಕ್ಸ್, ರಸಿಖ್ ದಾರ್ ಸಲಾಮ್, ಸುಯಾಶ್ ಶರ್ಮಾ, ವಿಕ್ಕಿ ಒಸ್ತ್ವಾಲ್, ಅಭಿನಂದನ್ ಸಿಂಗ್, ಕಾನಿಷ್ಕ್ ಚೌವ್ಹಾಣ್, ಯಶ್ ದಯಾಳ್