'ಕ್ರಿಕೆಟಿಗ ಎನ್ನುವುದಕ್ಕಿಂತಲೂ ವೈಭವ್ ಸೂರ್ಯವಂಶಿ ದೊಡ್ಡ ಬ್ರಾಂಡ್ ಆಗಿದ್ದಾರೆ': ಸರಿಯಾದ ಮಾರ್ಗದರ್ಶನ ಅಗತ್ಯ; ದಿನೇಶ್ ಕಾರ್ತಿಕ್

'ಇಂತಹ ಪ್ರತಿಭೆ ಎಲ್ಲರಿಗೂ ಸಿಗುವುದಿಲ್ಲ. ನನ್ನ ಪ್ರಕಾರ, ಈ ಹಿಂದೆ ಇಷ್ಟೊಂದು ಚರ್ಚಿಸಲ್ಪಟ್ಟ ಮತ್ತು ಪ್ರತಿಭೆಯ ವಿಷಯದಲ್ಲಿ ಇಷ್ಟೊಂದು ಗಮನ ಸೆಳೆದ ವ್ಯಕ್ತಿ ಎಂದರೆ, ಅದು ಇದೇ ನೆಲದ ಸಚಿನ್ ತೆಂಡೂಲ್ಕರ್. ವೈಭವ್ ಸೂರ್ಯವಂಶಿ ಕೂಡ ಅಂತಹ ಪ್ರತಿಭೆ ಎಂದು ನನಗೆ ಅನಿಸುತ್ತದೆ' ಎಂದರು.
Dinesh Karthik
ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್
Updated on: 

ಮುಂಬೈ: ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಈಗಾಗಲೇ 'ತಮ್ಮ ಕ್ರಿಕೆಟಿಗ ವ್ಯಕ್ತಿತ್ವಕ್ಕಿಂತಲೂ ದೊಡ್ಡ ಬ್ರಾಂಡ್ ಆಗಿ ಬೆಳೆದಿದ್ದಾರೆ. ಇಂದಿನ ಆಧುನಿಕ ಕ್ರಿಕೆಟ್‌ನ ಸವಾಲುಗಳನ್ನು ಎದುರಿಸಲು ಅವರಿಗೆ ಬಲವಾದ ಬೆಂಬಲ ವ್ಯವಸ್ಥೆಯ ಅಗತ್ಯವಿದೆ ಎಂದು ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಮಂಗಳವಾರ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಭಾರತಕ್ಕಾಗಿ ಆಡಿದ ಅತ್ಯಂತ ಕಿರಿಯ ಆಟಗಾರನೆನಿಸಿಕೊಂಡಿರುವ 15 ವರ್ಷದ ಸೂರ್ಯವಂಶಿ, ದಂತಕಥೆ ಸಚಿನ್ ತೆಂಡೂಲ್ಕರ್ ಅವರಂತೆಯೇ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಕಾರ್ತಿಕ್ ಬಣ್ಣಿಸಿದ್ದಾರೆ.

'ಇತ್ತೀಚೆಗೆ ನಾನು ಎಲ್ಲಿಗೆ ಹೋದರೂ, ಅವರ (ಸೂರ್ಯವಂಶಿ) ಬಗ್ಗೆಯೇ ಪ್ರಶ್ನೆ ಎದುರಾಗುತ್ತದೆ. ಇದು ಬಹಳ ಕುತೂಹಲಕಾರಿ ವಿಷಯ, ಅಲ್ಲವೇ? ನಾನು 14ನೇ ವಯಸ್ಸಿನಲ್ಲಿ ಗಣಿತದ ಹೋಮ್‌ವರ್ಕ್ ಹೇಗೆ ಮುಗಿಸುವುದು ಎಂದು ಯೋಚಿಸುತ್ತಿದ್ದೆ, ಆದರೆ ಇಲ್ಲೊಬ್ಬ ಬಾಲಕ ಇದ್ದಾನೆ, ಅವನು ಈಗ ಇಡೀ ಜಗತ್ತನ್ನೇ ಆಳುತ್ತಿದ್ದಾನೆ' ಎಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಲಾಂಜ್‌ನಲ್ಲಿ ನಡೆದ 'ಸಸ್ಟೈನಬಲ್ ಮಾರ್ಕೆಟ್ಸ್ ಇನಿಶಿಯೇಟಿವ್' (Sustainable Markets Initiative) ಕಾರ್ಯಕ್ರಮದಲ್ಲಿ ಕಾರ್ತಿಕ್ ಹೇಳಿದರು.

'ಇಂತಹ ಪ್ರತಿಭೆ ಎಲ್ಲರಿಗೂ ಸಿಗುವುದಿಲ್ಲ. ನನ್ನ ಪ್ರಕಾರ, ಈ ಹಿಂದೆ ಇಷ್ಟೊಂದು ಚರ್ಚಿಸಲ್ಪಟ್ಟ ಮತ್ತು ಪ್ರತಿಭೆಯ ವಿಷಯದಲ್ಲಿ ಇಷ್ಟೊಂದು ಗಮನ ಸೆಳೆದ ವ್ಯಕ್ತಿ ಎಂದರೆ, ಅದು ಇದೇ ನೆಲದ ಸಚಿನ್ ತೆಂಡೂಲ್ಕರ್. ಅವರು ಈ ಕ್ರೀಡೆಯನ್ನು ಆಡಿದವರ ಪೈಕಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದರು. ವೈಭವ್ ಸೂರ್ಯವಂಶಿ ಕೂಡ ಅಂತಹ ಪ್ರತಿಭೆ ಎಂದು ನನಗೆ ಅನಿಸುತ್ತದೆ' ಎಂದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಸೂರ್ಯವಂಶಿಗೆ ಬಲವಾದ ಬೆಂಬಲದ ಅಗತ್ಯವಿರುತ್ತದೆ; ಏಕೆಂದರೆ, ಎರಡು ದಶಕಗಳ ಹಿಂದಿನ ಸವಾಲುಗಳಿಗಿಂತ ಇಂದಿನ ಸವಾಲುಗಳು ಭಿನ್ನವಾಗಿವೆ ಎಂದು ದಿನೇಸ್ ಕಾರ್ತಿಕ್ ಹೇಳಿದರು.

Dinesh Karthik
'ಸಚಿನ್ ತೆಂಡೂಲ್ಕರ್ ಅಥವಾ ವಿನೋದ್ ಕಾಂಬ್ಳಿ': ವೈಭವ್ ಸೂರ್ಯವಂಶಿ ವೃತ್ತಿಜೀವನ ಯಾರಂತಾಗುತ್ತದೆ? ಕಪಿಲ್ ದೇವ್ ಪ್ರಶ್ನೆ

'ನಮ್ಮಲ್ಲಿ ಉಳಿದವರು, ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ನಾನು ಹೇಳುತ್ತೇನೆ. ಒಬ್ಬ ಕ್ರಿಕೆಟಿಗನಾಗಿ ಆತ ಬೆಳೆಯಲು ಮತ್ತು ಕಲಿಯಲು ಅವಕಾಶ ನೀಡಿ; ಏಕೆಂದರೆ ಇಂದಿನ ದಿನಗಳಲ್ಲಿರುವ ಒತ್ತಡಗಳು ಎರಡು ದಶಕಗಳ ಹಿಂದಿನ ಪರಿಸ್ಥಿತಿಗಿಂತ ಬಹಳ ಭಿನ್ನವಾಗಿವೆ' ಎಂದು ಅವರು ಹೇಳಿದರು.

'ಆತ ಅವನು ಅಸಾಧಾರಣ ಪ್ರತಿಭೆ. 14 (ಅಥವಾ 15) ವರ್ಷದ ವಯಸ್ಸಿನಲ್ಲಿ ಇಂತಹ ಪ್ರತಿಭೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆತ ಎಷ್ಟು ಪ್ರತಿಭಾವಂತನೆಂದರೆ, ಟಿ20 ಮಾದರಿಯಲ್ಲಿ ಆಡುವ ಅವಕಾಶವನ್ನು ತಾನಾಗಿಯೇ ಗಿಟ್ಟಿಸಿಕೊಳ್ಳುತ್ತಿದ್ದಾನೆ. ಟಿ20 ಮಾದರಿಯಲ್ಲಿ ಸ್ಥಾನ ಪಡೆಯುವುದು ಅತ್ಯಂತ ಕಠಿಣವಾದ ಸಂಗತಿಗಳಲ್ಲಿ ಒಂದಾಗಿದೆ, ಆದರೆ ಆತನ ಪ್ರತಿಭೆ ಅಂತಹದ್ದು. ಆತನ ಸುತ್ತಲಿರುವ ಸಹಾಯಕ ಸಿಬ್ಬಂದಿ (support staff) ಅತ್ಯಂತ ಬಲವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ' ಎಂದರು.

'ಸದ್ಯ ಅವರು ಒಬ್ಬ ಕ್ರಿಕೆಟಿಗರಾಗಿದ್ದರೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಹೊಸಬರು. ಆದರೆ, ಒಬ್ಬ ಕ್ರಿಕೆಟಿಗನಾಗಿರುವುದಕ್ಕಿಂತ ಹೆಚ್ಚಾಗಿ ಅವರು ಒಂದು ದೊಡ್ಡ 'ಬ್ರಾಂಡ್' ಆಗಿ ಬೆಳೆದಿದ್ದಾರೆ; ನಾವು ಇಂದಿನ ಜಗತ್ತಿನಲ್ಲಿ ಹೀಗೆಯೇ ಬದುಕುತ್ತಿದ್ದೇವೆ. ಮೈದಾನದ ಹೊರಗೆ ವಿವಿಧ ಕೆಲಸಗಳನ್ನು ಮಾಡಲು ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆ ಎಂಬುದು ನನಗೆ ಗೊತ್ತು. ಇಂತಹ ಸಂದರ್ಭದಲ್ಲಿ, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಉತ್ತಮ ಸಲಹೆಗಾರರ ​​ತಂಡದ ಅಗತ್ಯವಿದೆ' ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಹೇಳಿದರು.

'ಅಸಾಧಾರಣ ಪ್ರತಿಭೆಯುಳ್ಳವರು ಕೆಲವೊಮ್ಮೆ ಎಡವಿ ಬೀಳುವುದು, ತಮ್ಮ ತಪ್ಪುಗಳಿಂದ ಪಾಠ ಕಲಿಯುವುದು ಮತ್ತು ಅಂತಹ ಸಂದರ್ಭಗಳಲ್ಲಿ ನಮ್ಮ ಕಡೆಯಿಂದ ಅವರಿಗೆ ಸ್ವೀಕಾರ ಸಿಗುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅವರಿಗೆ 'ಉತ್ತಮ ಬೆಂಬಲ ವ್ಯವಸ್ಥೆ'ಯ (support system) ಅಗತ್ಯವಿದೆ; ಅಂದರೆ ಅವರ ಸುತ್ತಲೂ ಸರಿಯಾದ ವ್ಯಕ್ತಿಗಳು, ತರಬೇತುದಾರರು ಮತ್ತು ಕುಟುಂಬದವರು ಇರಬೇಕು. ಇದರಲ್ಲಿ ಅತ್ಯಂತ ಪ್ರಮುಖರೆಂದರೆ, ಅವರನ್ನು ವೀಕ್ಷಿಸುವ ಸಾರ್ವಜನಿಕರು ಹಾಗೂ ನನ್ನಂತಹ, ಪ್ರಸಾರ ಮಾಧ್ಯಮದಲ್ಲಿ ಕೆಲಸ ಮಾಡುತ್ತಾ ಅವರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿಗಳು' ಎಂದು ತಿಳಿಸಿದರು.

'ಸದ್ಯ ಈ ಕ್ರೀಡೆಯು ಆರ್ಥಿಕವಾಗಿ ಅತ್ಯಂತ ಬಲವಾದ ಸ್ಥಿತಿಯಲ್ಲಿದೆ. ಅಪಾರ ಸಂಖ್ಯೆಯ ಜನರು ಇದನ್ನು ಅನುಸರಿಸುತ್ತಿದ್ದಾರೆ ಮತ್ತು ಇದರಲ್ಲಿ ವಿವಿಧ ಸ್ವರೂಪಗಳು ಹಾಗೂ ಸವಾಲುಗಳಿವೆ - ಈ ಎಲ್ಲವನ್ನೂ ಅವನು ಅರ್ಥಮಾಡಿಕೊಳ್ಳಬೇಕಿದೆ. ಅವನು ಇನ್ನೂ ಬಾಲಕ, ಆದರೆ ಅಸಾಧಾರಣ ಪ್ರತಿಭೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X