

ದುಬೈ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್, ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಇತ್ತೀಚಿನ ರ‍್ಯಾಂಕಿಂಗ್‌ನಲ್ಲಿ ಅವರು 12 ಸ್ಥಾನ ಮೇಲಕ್ಕೇರಿ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ 19ನೇ ಸ್ಥಾನ ಪಡೆದುಕೊಂಡಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬಳಿಕ ಐಸಿಸಿ ನೂತನ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ. ಬೌಲರ್‌ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್‌ನ ವೇಗಿ ಮ್ಯಾಟ್ ಹೆನ್ರಿ ಕೂಡ 15 ಸ್ಥಾನಗಳ ಏರಿಕೆ ಕಂಡು ಜಂಟಿ 12ನೇ ಸ್ಥಾನಕ್ಕೇರಿದ್ದಾರೆ. ಅವರ ಸಹ ಆಟಗಾರ ಕೈಲ್ ಜೇಮಿಸನ್ 15 ಸ್ಥಾನ ಮೇಲಕ್ಕೇರಿ 45ನೇ ಸ್ಥಾನ ಪಡೆದಿದ್ದಾರೆ.
ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಟಾಮ್ ಬ್ಯಾಂಟನ್‌ಗೆ ಭಾರಿ ಜಿಗಿತ
ಇಂಗ್ಲೆಂಡ್‌ನ ಬ್ಯಾಟರ್ ಟಾಮ್ ಬ್ಯಾಂಟನ್ ಕೂಡ ನೂತನ ರ‍್ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅವರು 99 ಎಸೆತಗಳಲ್ಲಿ 121 ರನ್ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದರು.
ಇದು ಬ್ಯಾಂಟನ್ ಅವರ ಎರಡನೇ ಏಕದಿನ ಶತಕವಾಗಿದ್ದು, ಈ ಪ್ರದರ್ಶನದ ಫಲವಾಗಿ ಅವರು 34 ಸ್ಥಾನ ಮೇಲಕ್ಕೇರಿ ವೃತ್ತಿಜೀವನದ ಶ್ರೇಷ್ಠ 13ನೇ ಸ್ಥಾನ ತಲುಪಿದ್ದಾರೆ. ಇದೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಇಂಗ್ಲೆಂಡ್‌ನ ಜೋ ರೂಟ್ ಎರಡು ಸ್ಥಾನಗಳ ಏರಿಕೆ ಕಂಡು ಒಂಬತ್ತನೇ ಸ್ಥಾನಕ್ಕೇರಿದ್ದಾರೆ. ಭಾರತದ ಶುಭಮನ್ ಗಿಲ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಕೂಡ ಬೌಲರ್‌ಗಳ ಅಗ್ರ 10ರ ಪಟ್ಟಿಗೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ತಲಾ ಒಂದು ವಿಕೆಟ್ ಪಡೆದ ಅವರು ನಾಲ್ಕು ಸ್ಥಾನ ಮೇಲಕ್ಕೇರಿ ಏಳನೇ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ರ‍್ಯಾಂಕಿಂಗ್‌ನಲ್ಲೂ ಜಿಂಬಾಬ್ವೆ ಆಟಗಾರರ ಪ್ರಗತಿ
ಶಾರ್ಜಾದಲ್ಲಿ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ ಜಿಂಬಾಬ್ವೆ 2-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಸರಣಿಯ ಬಳಿಕ ಬಿಡುಗಡೆಯಾದ ಟೆಸ್ಟ್ ರ‍್ಯಾಂಕಿಂಗ್‌ನಲ್ಲೂ ಹಲವು ಆಟಗಾರರು ಮುನ್ನಡೆ ಕಂಡಿದ್ದಾರೆ.
ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಬೌಲರ್‌ಗಳ ಪಟ್ಟಿಯಲ್ಲಿ ಐದು ಸ್ಥಾನ ಮೇಲಕ್ಕೇರಿ ಜಂಟಿ 16ನೇ ಸ್ಥಾನ ತಲುಪಿದ್ದಾರೆ. ನಿರ್ಣಾಯಕ ಎರಡನೇ ಟೆಸ್ಟ್‌ನಲ್ಲಿ ಆರು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಜಿಂಬಾಬ್ವೆಯ ಸ್ಪಿನ್ನರ್ ಗ್ರೇಮ್ ಕ್ರೀಮರ್ ಆರು ಸ್ಥಾನ ಮೇಲಕ್ಕೇರಿ 65ನೇ ಸ್ಥಾನ ಪಡೆದಿದ್ದಾರೆ.
ಬ್ಯಾಟರ್‌ಗಳ ಪಟ್ಟಿಯಲ್ಲಿ ಜಿಂಬಾಬ್ವೆಯ ಆರಂಭಿಕ ಆಟಗಾರ ಇನ್ನೊಸೆಂಟ್ ಕೈಯಾ 20 ಸ್ಥಾನಗಳ ಏರಿಕೆ ಕಂಡು 50ನೇ ಸ್ಥಾನಕ್ಕೇರಿದ್ದಾರೆ. ಅನುಭವಿ ಆಟಗಾರ ಬ್ರೆಂಡನ್ ಟೇಲರ್ 40 ಸ್ಥಾನ ಮೇಲಕ್ಕೇರಿ 62ನೇ ಸ್ಥಾನ ಪಡೆದಿದ್ದಾರೆ.
ಪಾದಾರ್ಪಣೆ ಪಂದ್ಯದಲ್ಲೇ ಅಫ್ಘಾನ್ ಆಟಗಾರನ ದಾಖಲೆ
ಅಫ್ಘಾನಿಸ್ತಾನದ ಆಲ್‌ರೌಂಡರ್ ನಸೀರ್ ಮರೂಫ್‌ಖಿಲ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಹಾಗೂ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಪುರುಷರ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರದರ್ಶನದ ಬಳಿಕ ಅವರು ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 93ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ 78ನೇ ಸ್ಥಾನ ಪಡೆದುಕೊಂಡಿದ್ದಾರೆ.