RCB ಅಲ್ಲ, IPL ನಿಂದಲೇ ಜೇಕಬ್ ಬೆಥೆಲ್ ಔಟ್‌; ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಸಜ್ಜು

ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
England Star, Who Was Released By RCB, Set To Undergo Knee Surgery
ಜೇಕಬ್ ಬೆಥೆಲ್
Updated on: 

ಲಂಡನ್: ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ರಿಲೀಸ್ ಆಗಿರುವ ಇಂಗ್ಲೆಂಡ್ ಯುವ ಆಟಗಾರ ಜೇಕಬ್ ಬೆಥೆಲ್ ಇದೀಗ ಐಪಿಎಲ್ 2027ರ ಟೂರ್ನಿಯಿಂದಲೇ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಇದರಿಂದ ಡಿಸೆಂಬರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅವರು ಹೊರಗುಳಿದಿದ್ದು, ಮುಂದಿನ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲೂ ಆಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

2026ರ ಬಹುತೇಕ ಅವಧಿಯಲ್ಲಿ ಬೆಥೆಲ್ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಕಳೆದ ಜುಲೈನಲ್ಲಿ ಲಾರ್ಡ್ಸ್‌ನಲ್ಲಿ ಭಾರತದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 91 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ್ದ ಅವರು, ಆ ಬಳಿಕ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ.

England Star, Who Was Released By RCB, Set To Undergo Knee Surgery
IPL 2027: ಜೇಕಬ್‌ ಬೆಥೆಲ್‌ ಸೇರಿ ಆರು ಆಟಗಾರರಿಗೆ RCB ಗೇಟ್ ಪಾಸ್! ಉಳಿದುಕೊಂಡವರ ಸಂಪೂರ್ಣ ಪಟ್ಟಿ!

ಇಂಗ್ಲೆಂಡ್-ಆಸಿಸ್ ಸರಣಿಯಿಂದಲೂ ದೂರ ಉಳಿದಿರುವ ಬೆಥೆಲ್

ಆಸ್ಟ್ರೇಲಿಯಾ ವಿರುದ್ಧದ ನಡೆಯುತ್ತಿರುವ ಸೀಮಿತ ಓವರ್‌ಗಳ ಸರಣಿಗೆ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳಬೇಕಿದ್ದ ಬೆಥೆಲ್, ಇದೀಗ ಗಾಯದ ಕಾರಣ ಆ ಸರಣಿಯಿಂದಲೂ ಹೊರಗುಳಿದಿದ್ದಾರೆ. ಅಲ್ಲದೆ, ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಅಲಭ್ಯರಾಗಿದ್ದಾರೆ.

ಈ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ವಕ್ತಾರರು ಮಾಹಿತಿ ನೀಡಿದ್ದು, 'ಜೇಕಬ್ ಬೆಥೆಲ್ ಈ ವಾರ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅವರನ್ನು ಕೈಬಿಡಲಾಗಿದೆ' ಎಂದು ತಿಳಿಸಿದ್ದಾರೆ.

ಮುಂದಿನ ಐಪಿಎಲ್‌ಗೂ ಅಲಭ್ಯ

ಮುಂದಿನ ಐಪಿಎಲ್‌ ಟೂರ್ನಿಯಲ್ಲೂ ಬೆಥೆಲ್ ಆಡುತ್ತಿಲ್ಲ. ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅವರನ್ನು ಬಿಡುಗಡೆ ಮಾಡಿತ್ತು. ಬೆಥೆಲ್ ಅವರ ಗಾಯದ ಸಮಸ್ಯೆಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೋ ಬೊಬಾಟ್ ತಿಳಿಸಿದ್ದಾರೆ.

'ಜೇಕಬ್ ಬೆಥೆಲ್ ಅವರನ್ನು ತಂಡದಿಂದ ಬಿಡುಗಡೆ ಮಾಡುವುದು ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಭಾರವಾದ ಮನಸ್ಸಿನಿಂದ ಈ ತೀರ್ಮಾನ ಕೈಗೊಂಡಿದ್ದೇವೆ. ದುರದೃಷ್ಟವಶಾತ್, ಅವರಿಗೆ ಮತ್ತೆ ಮೊಣಕಾಲಿನ ಗಾಯದ ಸಮಸ್ಯೆ ಕಾಣಿಸಿಕೊಂಡಿದೆ.

ಅವರು ಯಾವಾಗ ಮತ್ತೆ ಕ್ರಿಕೆಟ್‌ಗೆ ಮರಳಲಿದ್ದಾರೆ ಮತ್ತು ಪುನಶ್ಚೇತನ ಪ್ರಕ್ರಿಯೆಗೆ ಎಷ್ಟು ಸಮಯ ಬೇಕಾಗಬಹುದು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಹೀಗಾಗಿ ಮುಂದಿನ ಐಪಿಎಲ್‌ನಲ್ಲಿ ಅವರ ಲಭ್ಯತೆ ಅನಿಶ್ಚಿತವಾಗಿತ್ತು' ಎಂದು ಬೊಬಾಟ್ ಹೇಳಿದ್ದಾರೆ.

ಮುಂದಿನ ಸರಣಿಗಳಲ್ಲೂ ಆಡುವುದು ಅನುಮಾನ

ಬೆಥೆಲ್ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಫೆಬ್ರವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿ ಹಾಗೂ ಮಾರ್ಚ್‌ನಲ್ಲಿ ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೂ ಅವರು ಲಭ್ಯರಾಗುತ್ತಾರೆಯೇ ಎಂಬುದು ಖಚಿತವಾಗಿಲ್ಲ.

2027ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿ ಹಾಗೂ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕೂಡ ನಡೆಯಲಿದ್ದು, ಈ ಮಹತ್ವದ ಟೂರ್ನಿಗಳಿಗೆ ಬೆಥೆಲ್ ಚೇತರಿಸಿಕೊಳ್ಳುವುದು ಇಂಗ್ಲೆಂಡ್ ತಂಡಕ್ಕೆ ಮುಖ್ಯವಾಗಿದೆ.

2026ರ ಆರಂಭದಲ್ಲಿ ಬೆಥೆಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು, ಮಾರ್ಚ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧವೂ ಆಕರ್ಷಕ ಶತಕ ಬಾರಿಸಿದ್ದರು.

ಈ ಪ್ರದರ್ಶನದಿಂದಾಗಿ ಇಂಗ್ಲೆಂಡ್‌ನ ಮೂರು ಮಾದರಿಯ ತಂಡಗಳಲ್ಲೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದರು. ಆದರೆ ಗಾಯದ ಸಮಸ್ಯೆ ಅವರ ಕ್ರಿಕೆಟ್ ಭವಿಷ್ಯಕ್ಕೆ ತಾತ್ಕಾಲಿಕ ಹಿನ್ನಡೆ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X