

ಪಾಕಿಸ್ತಾನ ಕ್ರಿಕೆಟ್ ತಂಡ ನಾಯಕ ಸಾಹಿಬ್ಜಾದಾ ಫರ್ಹಾನ್, 'ಫುಲ್ ಮೆಂಬರ್' (ಪೂರ್ಣ ಸದಸ್ಯ) ರಾಷ್ಟ್ರಗಳ ನಡುವಿನ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ಗಳನ್ನು ಗಳಿಸುವ ಮೂಲಕ ಟಿ20 ಅಂತರರಾಷ್ಟ್ರೀಯ (T20I) ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ರಾವಲ್ಪಿಂಡಿಯಲ್ಲಿ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಎಂಟು ವಿಕೆಟ್ಗಳ ನಿರಾಶಾದಾಯಕ ಸೋಲನ್ನು ಅನುಭವಿಸಿದರೂ, ಈ ಇಡೀ ಸರಣಿಯಲ್ಲಿ ಫರ್ಹಾನ್ ಒಟ್ಟು 238 ರನ್ಗಳನ್ನು ಕಲೆಹಾಕಿದ್ದಾರೆ ಎಂದು ಐಸಿಸಿ(ICC) ವೆಬ್ಸೈಟ್ ತಿಳಿಸಿದೆ.
ಈ ಐತಿಹಾಸಿಕ ಸಾಧನೆಯೊಂದಿಗೆ, ಟಿ20 ಕ್ರಿಕೆಟ್ನಲ್ಲೇ ಇದುವರೆಗೆ ಯಾರೂ ಮಾಡದ ಅಪರೂಪದ ದಾಖಲೆಯೊಂದನ್ನು ಸಾಹಿಬ್ಝಾದ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೂರೂ ಪಂದ್ಯಗಳಲ್ಲೂ ಸಾಹಿಬ್ಜಾದಾ ಫರ್ಹಾನ್ ಅವರು ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 3 ಪಂದ್ಯಗಳ ದ್ವಿಪಕ್ಷೀಯ ಸರಣಿಯೊಂದರ ಎಲ್ಲಾ ಪಂದ್ಯಗಳಲ್ಲೂ ಅರ್ಧ ಶತತ ಸಿಡಿಸಿದ ವಿಶ್ವದ ಮೊದಲ ನಾಯಕನೆಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 89 ರನ್ ಬಾರಿಸಿ ಅಬ್ಬರಿಸಿದ್ದ ಫರ್ಹಾನ್, ದ್ವಿತೀಯ ಪಂದ್ಯದಲ್ಲೂ 73 ರನ್ ಸಿಡಿಸಿದ್ದರು. ಇನ್ನು ಮೂರನೇ ಹಾಗೂ ಕೊನೆಯ ಪಂದ್ಯದಲ್ಲೂ ಸಾಹಿಬ್ಜಾದಾ 76 ರನ್ ಗಳಿಸುವ ಮೂಲಕ ಈ ಅಪರೂಪದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಫರ್ಹಾನ್ ಅವರು ಈ ಸರಣಿಯಲ್ಲಿ ಒಟ್ಟು 238 ರನ್ ಗಳಿಸಿದ್ದು, ಇದರೊಂದಿಗೆ 3 ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಪಾಕ್ ತಂಡದ ನಾಯಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಭಾರತದ ಅಭಿಷೇಕ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಅಭಿಷೇಕ್ ಶರ್ಮಾ ಅವರು ಈ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನದ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 229 ರನ್ ಗಳಿಸಿ ಈ ದಾಖಲೆ ನಿರ್ಮಿಸಿದ್ದರು.