RCB ಎದುರು ಮುಗ್ಗರಿಸಿದ CSK: ಕಾಗದದ ಮೇಲೆ ಎಷ್ಟೇ ಬಲವಾಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ' ಎಂದ ಎಂಎಸ್ ಧೋನಿ

ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ, ಕಳೆದ ಕೆಲವು ವರ್ಷಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಿದೆ. 2021 ಮತ್ತು 2023ರಲ್ಲಿ ಅವರು ಐಪಿಎಲ್ (IPL) ಪ್ರಶಸ್ತಿಯನ್ನು ಗೆದ್ದಿದ್ದರೂ, 2020ರ ದಶಕದಲ್ಲಿ ಕೆಲವೊಮ್ಮೆ ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದಿದ್ದಾರೆ.
MS Dhoni and Ruturaj Gaikwad
ಎಂಎಸ್ ಧೋನಿ ಮತ್ತು ರುತುರಾಜ್ ಗಾಯಕ್ವಾಡ್
Updated on: 

ಕಳೆದ ಎರಡು ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಸತತ ಗೆಲುವುಗಳೊಂದಿಗೆ ಸಾಧಿಸಿರುವ ಏಳಿಗೆಯ ಬಗ್ಗೆ ಹಾಗೂ ತಮ್ಮದೇ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್‌ನ ಕುಸಿತದ ಬಗ್ಗೆ ಭಾರತೀಯ ಕ್ರಿಕೆಟ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ದಿಗ್ಗಜ ಎಂಎಸ್ ಧೋನಿ ಮಾತನಾಡಿದರು. ಸದ್ಯ ಐಪಿಎಲ್ ಚಾಂಪಿಯನ್ ಆಗಿರುವ ಆರ್‌ಸಿಬಿ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ ಎಂಬ ಸತ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅಲ್ಲದೆ, ಮುಂದಿನ ವರ್ಷ ಅಂದರೆ ಐಪಿಎಲ್ 2027ರಲ್ಲಿ ತಮ್ಮ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದರು. ದೈಹಿಕ ಕ್ಷಮತೆಯ ಸಮಸ್ಯೆಗಳಿಂದಾಗಿ ಐಪಿಎಲ್ 2026ರ ಯಾವುದೇ ಪಂದ್ಯಗಳಲ್ಲಿ ಆಡದ ಧೋನಿ, ಬೆಂಗಳೂರಿನಲ್ಲಿ ನಡೆದ ಆರೋಗ್ಯ ಸೇವೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಈ ವಿಷಯಗಳನ್ನು ಹಂಚಿಕೊಂಡರು.

ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ (CSK), ಕಳೆದ ಕೆಲವು ವರ್ಷಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಿದೆ. 2021 ಮತ್ತು 2023ರಲ್ಲಿ ಅವರು ಐಪಿಎಲ್ (IPL) ಪ್ರಶಸ್ತಿಯನ್ನು ಗೆದ್ದಿದ್ದರೂ, 2020ರ ದಶಕದಲ್ಲಿ ಕೆಲವೊಮ್ಮೆ ಅಂಕಪಟ್ಟಿಯ ತಳಭಾಗದಲ್ಲಿ ಉಳಿಯುವ ಪರಿಸ್ಥಿತಿಯನ್ನೂ ಎದುರಿಸಿದ್ದಾರೆ; ಇದರಲ್ಲಿ 2025ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದೂ ಸೇರಿದೆ. ಮತ್ತೊಂದೆಡೆ, ಆರ್‌ಸಿಬಿ 2020ರ ದಶಕದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. 2023ರ ಆವೃತ್ತಿಯನ್ನು ಹೊರತುಪಡಿಸಿ, ಪ್ರತಿ ವರ್ಷವೂ ಪ್ಲೇಆಫ್‌ ಹಂತ ತಲುಪಿದೆ. ಅಷ್ಟೇ ಅಲ್ಲದೆ, ರಜತ್ ಪಾಟೀದಾರ್ ನಾಯಕತ್ವದಲ್ಲಿ, 2025 ಮತ್ತು 2026ರಲ್ಲಿ ಸತತವಾಗಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ವರ್ಷ, ಸಿಎಸ್‌ಕೆ ಎಂಟನೇ ಸ್ಥಾನವನ್ನು ಪಡೆದಿದ್ದು, ಟೂರ್ನಿಯ ಕೆಲವು ಹಂತಗಳಲ್ಲಿ ಉತ್ತಮ ಪ್ರದರ್ಶನವನ್ನೂ ನೀಡಿದೆ.

ಕಳೆದ ಮೂರು ಸೀಸನ್‌ಗಳಲ್ಲಿ, ಪರಸ್ಪರ ಮುಖಾಮುಖಿಯಾದಾಗ ಆರ್‌ಸಿಬಿ (RCB) ತಂಡವು ಸಿಎಸ್‌ಕೆ (CSK) ವಿರುದ್ಧ ಮೇಲುಗೈ ಸಾಧಿಸಿದೆ; ಕಳೆದ ಐದು ಪಂದ್ಯಗಳಲ್ಲಿ ಆರ್‌ಸಿಬಿ ನಾಲ್ಕು ಬಾರಿ ಜಯಗಳಿಸಿದೆ.

ಉಭಯ ತಂಡಗಳ ಪ್ರದರ್ಶನದಲ್ಲಿನ ವ್ಯತ್ಯಾಸ ಮತ್ತು ಯಾವ ತಂಡ ಉತ್ತಮ ಎಂಬ ಬಗ್ಗೆ ಮಾತನಾಡಿದ ಧೋನಿ, 'ಕಾಗದದ ಮೇಲೆ (ಅಂಕಿಅಂಶಗಳ ಪ್ರಕಾರ) ನೀವು ಎಷ್ಟೇ ಬಲಶಾಲಿಯಾಗಿದ್ದರೂ, ಅದು ಅಷ್ಟೇನೂ ಮುಖ್ಯವಲ್ಲ ಎಂದು ನನಗನಿಸುತ್ತದೆ. ನಿರ್ದಿಷ್ಟ ಪಂದ್ಯದ ದಿನದಂದು ನೀವು ಎಷ್ಟು ಉತ್ತಮವಾಗಿ ಆಡುತ್ತೀರಿ ಎಂಬುದೇ ಅತ್ಯಂತ ಮುಖ್ಯವಾದ ವಿಷಯ. ಕ್ರಿಕೆಟ್‌ನ ಸ್ವರೂಪ ಚಿಕ್ಕದಾದಷ್ಟೂ, ಅತ್ಯುತ್ತಮ ತಂಡಗಳ ನಡುವಿನ ಅಂತರವೂ ಅಷ್ಟೇ ಕಡಿಮೆಯಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ನಾವು ಸಂಕಷ್ಟ ಎದುರಿಸಿದ್ದೇವೆ ಎಂಬುದು ಸತ್ಯ. ಹಾಗೆಯೇ, ಆರ್‌ಸಿಬಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಹಿಂಜರಿಕೆ ಇರಬಾರದು' ಎಂದು ಹೇಳಿದರು.

MS Dhoni and Ruturaj Gaikwad
ಎಂಎಸ್ ಧೋನಿ ಶೇ 25ರಷ್ಟು 'ಪಾಲು ಕೇಳಿದ್ದಾರೆ' ಎಂಬ ಸ್ಫೋಟಕ ವರದಿ ಕುರಿತು ಕೊನೆಗೂ ಮೌನ ಮುರಿದ CSK!

'ಜೀವನ ಹೀಗೆಯೇ ಇರುತ್ತದೆ. ಒಳ್ಳೆಯ ಸಮಯಗಳು ಬರುತ್ತವೆ, ಕೆಟ್ಟ ಸಮಯಗಳೂ ಬರುತ್ತವೆ. ಆದರೆ, ಅಂತಹ ಸಂದರ್ಭಗಳಿಂದ ಹೇಗೆ ಹೊರಬರಬೇಕು ಮತ್ತು ತಂಡವಾಗಿ ಯಾವ ವಿಷಯಗಳ ಮೇಲೆ ಕೆಲಸ ಮಾಡಬೇಕು ಎಂಬುದು ಬಹಳ ಮುಖ್ಯ. ಏಕೆಂದರೆ, ನಾವು ಗೆಲ್ಲುತ್ತಿರುವಾಗಲೂ, ಒಂದು ಹಂತದಲ್ಲಿ ಸೋಲುಗಳು ಎದುರಾಗಬಹುದು ಎಂಬುದು ನಮಗೆ ತಿಳಿದಿತ್ತು. ತಂಡದ ನೈಜ ಸಾಮರ್ಥ್ಯ ಅಥವಾ ಗುಣಮಟ್ಟ ಪರೀಕ್ಷೆಯಾಗುವುದು ನಾವು ಕಳಪೆ ಪ್ರದರ್ಶನ ನೀಡುತ್ತಿರುವಾಗಲೇ. ಕಳೆದ ಕೆಲವು ವರ್ಷಗಳಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡಿದೆ, ಆದರೆ ನಾವು ಕಳೆದ ಕೆಲವು ವರ್ಷಗಳಲ್ಲಿ ಅಂತಹ ಪ್ರದರ್ಶನ ನೀಡಿಲ್ಲ' ಎಂದರು.

ಮುಂದಿನ ವರ್ಷದ ಸಂಪೂರ್ಣ ಸೀಸನ್‌ನಲ್ಲಿ ತಂಡವು ಗಾಯದ ಸಮಸ್ಯೆಗಳಿಂದ ದೂರವಿರಲಿ ಮತ್ತು ಫಿಟ್ ಆಗಿರುವ ಆಟಗಾರರು ಲಭ್ಯವಿರಲಿ ಎಂದು ಧೋನಿ ಆಶಯ ವ್ಯಕ್ತಪಡಿಸಿದರು.

'ಜನರು ತಮ್ಮ ಪಾತ್ರ ಮತ್ತು ಜವಾಬ್ದಾರಿಯನ್ನು ಅರ್ಥಮಾಡಿಕೊಂಡಾಗ ಜೀವನವು ಸ್ವಲ್ಪ ಸುಲಭವಾಗುತ್ತದೆ. ಹಾಗಾಗಿ, ಮುಂದಿನ ಬಾರಿ ನಾವು ಇಲ್ಲಿಗೆ (ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯಕ್ಕಾಗಿ) ಬಂದಾಗ, 'ನೋಡಿ, 2027ರಲ್ಲಿಯೂ ನಾವು ಮತ್ತೊಂದು ರೋಚಕ ಪಂದ್ಯವನ್ನು ಆಡಿದ್ದೆವು, ಅದು ಪ್ರೇಕ್ಷಕರಿಗೆ ಬಹಳ ಮಜವಾಗಿತ್ತು' ಎಂದು ಹೇಳುವಂತಾಗಲಿ ಎಂದು ನಾವು ಆಶಿಸುತ್ತೇವೆ' ಎಂದು ಅವರು ಹೇಳಿದರು.

'ಏಕೆಂದರೆ ಅಂತಿಮವಾಗಿ, ನಾವೆಲ್ಲರೂ ಮನರಂಜನೆ ನೀಡುವವರು; ನಾವು ಇಲ್ಲಿಗೆ ಬರುವುದೇ ಮನರಂಜನೆ ನೀಡಲು. ಬ್ಯಾಟ್ಸ್‌ಮನ್‌ಗಳಾದ ನಮಗೆಲ್ಲರಿಗೂ ಬೆಂಗಳೂರು ಇಷ್ಟವಾಗಲು ಮತ್ತೊಂದು ಕಾರಣವೇನೆಂದರೆ, ಇಲ್ಲಿ ಚೆಂಡು ಬಹಳ ದೂರದವರೆಗೆ ಸಾಗುತ್ತದೆ. ಇದು ಅಂತಹ ಮೈದಾನವಾಗಿದ್ದು, ಇಲ್ಲಿ ನೀವು ಚೆಂಡನ್ನು ಬಲವಾಗಿ ಹೊಡೆದರೆ ಅದು ನೇರವಾಗಿ ಸಿಕ್ಸರ್‌ಗೆ ಹೋಗುತ್ತದೆ. ಅಷ್ಟೇ ಅಲ್ಲ, ನೀವು ಬಲಶಾಲಿಗಳಾಗಿದ್ದು, ಚೆಂಡನ್ನು ಸರಿಯಾದ ಸಮಯದಲ್ಲಿ ಹೊಡೆಯಲು ವಿಫಲರಾದರೂ, ಅದು ಸಿಕ್ಸರ್‌ಗೆ ಹೋಗುವ ಸಾಧ್ಯತೆಗಳಿರುತ್ತವೆ' ಎಂದು ಹೇಳಿದರು.

'ಬ್ಯಾಟ್ಸ್‌ಮನ್‌ಗಳಿಗೆ ಈ ಮೈದಾನ ಬಹಳ ಇಷ್ಟವಾಗುತ್ತದೆ ಎಂದು ನನಗನ್ನಿಸುತ್ತದೆ. ಬೌಲರ್‌ಗಳ ವಿಷಯಕ್ಕೆ ಬಂದರೆ, ಅವರು ಒತ್ತಡದಲ್ಲಿರುತ್ತಾರೆ ಎಂಬುದು ನಿಜ; ಆದರೆ, 'ಇದು ಅಂತಹ ಒಂದು ಮೈದಾನ, ಇಲ್ಲಿ ನೀವು ಸ್ವಲ್ಪ ಚೆನ್ನಾಗಿ ಬೌಲಿಂಗ್ ಮಾಡಿದರೂ, ನಿಮ್ಮನ್ನು ಉತ್ತಮ ಬೌಲರ್ ಎಂದು ಪರಿಗಣಿಸಲಾಗುತ್ತದೆ' ಎಂಬ ವಾಸ್ತವವನ್ನು ಅವರು ಒಪ್ಪಿಕೊಂಡಿರುತ್ತಾರೆ. ಹೀಗಾಗಿ, ಅವರು ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುತ್ತಾರೆ— ಅಂದರೆ, 'ನೀವು ನಮ್ಮ ಬೌಲಿಂಗ್‌ಗೆ ಹೊಡೆಯಲು ಪ್ರಯತ್ನಿಸುತ್ತೀರಿ ಎಂಬುದು ನಮಗೆ ಗೊತ್ತು' ಎಂಬ ಮನಸ್ಥಿತಿಯಲ್ಲಿರುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಇದೊಂದು ಅತ್ಯುತ್ತಮ ಮೈದಾನ; ಇಲ್ಲಿ ಹೆಚ್ಚು ರನ್‌ಗಳು ದಾಖಲಾಗುತ್ತವೆ ಮತ್ತು ಆಟವು ತುಂಬಾ ಮೋಜಿನಿಂದ ಕೂಡಿರುತ್ತದೆ' ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com