'ಅವರ ಬಳಿ PR ಟೀಂ ಇಲ್ಲ': ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾರನ್ನು ಭಾರತದ ಇಬ್ಬರು ಆಟಗಾರರಿಗೆ ಹೋಲಿಸಿದ ಸುನೀಲ್ ಗವಾಸ್ಕರ್

ಸರಣಿಯಲ್ಲಿ 0-1 ಅಂತರದಿಂದ ಹಿನ್ನಡೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು, ಎರಡನೇ ಟೆಸ್ಟ್ ಪಂದ್ಯದಲ್ಲಿ 110 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಬವುಮಾ 179 ರನ್‌ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದರು.
Sunil Gavaskar
ಸುನೀಲ್ ಗವಾಸ್ಕರ್
Updated on: 

ಗೆಬೆರ್ಹಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 179 ರನ್ ಗಳಿಸಿದ ನಂತರ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಕ್ರಿಕೆಟ್ ವಲಯದಿಂದ ಅಪಾರ ಮೆಚ್ಚುಗೆ ಗಳಿಸಿದರು. ಭಾರತದ ದಿಗ್ಗಜ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡ ಬವುಮಾ ಅವರನ್ನು ಹೊಗಳಿದರು. ಇತ್ತೀಚಿನ ಅಂಕಣವೊಂದರಲ್ಲಿ, ಬವುಮಾ ಅವರು ತಮ್ಮ ಸಾಧನೆಗಳನ್ನು ಪದೇ ಪದೆ ಪ್ರದರ್ಶಿಸಿಕೊಳ್ಳುವ ಅಥವಾ ಆಕ್ರಮಣಕಾರಿ ಸ್ವಭಾವದ ವ್ಯಕ್ತಿಯಲ್ಲ; ಆದರೆ ದಕ್ಷಿಣ ಆಫ್ರಿಕಾದ ಟೆಸ್ಟ್ ನಾಯಕರಾಗಿ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಗವಾಸ್ಕರ್ ಬರೆದಿದ್ದಾರೆ.

'ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿ ಬವುಮಾ ಅವರ ನೇಮಕವಾದಾಗ, ಇದು 'ಮೀಸಲಾತಿ ಆಧಾರಿತ ಆಯ್ಕೆ' ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ, ಕಾಲಕ್ರಮೇಣ ಅವರು ಒಬ್ಬ ಅತ್ಯುತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ 'ಕ್ಯಾಪ್ಟನ್' ಆಗಿರುವುದಕ್ಕಿಂತ ಭಿನ್ನವಾದುದು. ತಮ್ಮ ಪ್ರದರ್ಶನಗಳ ಮೂಲಕ, ಅವರನ್ನು ಟೀಕಿಸಿದವರ ಬಾಯಿ ಮುಚ್ಚಿಸುವಂತೆ ಅವರು ಮಾಡಿದ್ದಾರೆ' ಎಂದು ಗವಾಸ್ಕರ್ ಅವರು 'ಮಿಡ್-ಡೇ' ಪತ್ರಿಕೆಯಲ್ಲಿನ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

'ಅವರು 'ಪ್ರೋಟಿಯಾಸ್' (ದಕ್ಷಿಣ ಆಫ್ರಿಕಾ) ತಂಡದ ನಾಯಕರಾಗಿ ಆಡಿದ 14 ಟೆಸ್ಟ್ ಪಂದ್ಯಗಳ ಪೈಕಿ 12ರಲ್ಲಿ ಗೆಲುವು ಸಾಧಿಸಿ, ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರ ಸೋತಿದ್ದಾರೆ. ಅಜಿಂಕ್ಯ ರಹಾನೆ ಅವರ ನಾಯಕತ್ವದಲ್ಲಿ ಭಾರತ ತಂಡವು ಒಂದೂ ಟೆಸ್ಟ್ ಪಂದ್ಯವನ್ನು ಸೋತಿರಲಿಲ್ಲ; ಅವರ ದಾಖಲೆಯಷ್ಟೇ ಅದ್ಭುತವಾದ ದಾಖಲೆ ಇದಾಗಿದೆ. ಇವರಿಬ್ಬರೂ ತಮ್ಮ ಸಾಧನೆಯನ್ನು ತಾವೇ ಬಡಾಯಿ ಕೊಚ್ಚಿಕೊಳ್ಳುವವರಲ್ಲ, ಅಥವಾ ತಾವು ಎಷ್ಟು ಶ್ರೇಷ್ಠರು ಎಂದು ಜಗತ್ತಿಗೆ ಬಿಂಬಿಸಲು ಇವರ ಬಳಿ ಯಾವುದೇ ಪ್ರಚಾರ ತಂಡವೂ (PR team) ಇಲ್ಲ' ಎಂದು ಬರೆದಿದ್ದಾರೆ.

Sunil Gavaskar
ಭಾರತದ ಟೆಸ್ಟ್ ತಂಡದಿಂದ ಕೊಹ್ಲಿ, ಬುಮ್ರಾ ಡ್ರಾಪ್: ಚರ್ಚೆಗೆ ಗ್ರಾಸವಾದ ಅಜಿಂಕ್ಯ ರಹಾನೆ ನಡೆ!

'ಮೈದಾನದಲ್ಲಿ ಬವುಮಾ ಅವರ ವರ್ತನೆಯು, ಎಲ್ಲರಿಂದಲೂ ಪ್ರೀತಿಸಲ್ಪಟ್ಟ ಮತ್ತು ಮೆಚ್ಚುಗೆ ಪಡೆದ ಭಾರತದ ಮಾಜಿ ಆಟಗಾರ ಗುಂಡಪ್ಪ ವಿಶ್ವನಾಥ್ ಅವರನ್ನು ನೆನಪಿಸುತ್ತದೆ. ಒಬ್ಬ ಉತ್ತಮ ಕ್ರಿಕೆಟಿಗನಾಗಲು, ಬೈಗುಳಗಳನ್ನು ಬಳಸುವ ಅಥವಾ ಇಡೀ ಪ್ರಪಂಚದ ವಿರುದ್ಧವೇ ಸಿಟ್ಟಿನಿಂದ ವರ್ತಿಸುವ ಅಗತ್ಯವಿಲ್ಲ ಎಂಬುದನ್ನು ವಿಶ್ವನಾಥ್ ತೋರಿಸಿಕೊಟ್ಟಿದ್ದರು' ಎಂದು ಗವಾಸ್ಕರ್ ಹೇಳಿದರು.

ಸರಣಿಯಲ್ಲಿ 0-1 ಅಂತರದಿಂದ ಹಿನ್ನಡೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು, ಗೆಬೆರ್ಹಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 110 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಂತಹ ಸಮಯದಲ್ಲಿ ಬವುಮಾ ಅದ್ಭುತವಾದ 179 ರನ್‌ಗಳನ್ನು ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದರು. ಮಳೆಯಿಂದಾಗಿ ಅಡಚಣೆಗೊಳಗಾದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಂತಿಮವಾಗಿ ಒಂದು ಇನಿಂಗ್ಸ್ ಮತ್ತು 31 ರನ್‌ಗಳ ಜಯ ಸಾಧಿಸಿತು. ಬವುಮಾ ಅವರ ಈ ಇನಿಂಗ್ಸ್, ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿ ದಾಖಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com