

ಮುಂಬೈ: ಐಪಿಎಲ್ 2027ಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಕೋಚ್ಗಳಾದ ಲಸಿತ್ ಮಲಿಂಗ ಮತ್ತು ಪರಸ್ ಮಾಂಬ್ರೆ ಹಾಗೂ ಫೀಲ್ಡಿಂಗ್ ಕೋಚ್ ಕಾರ್ಲ್ ಹಾಪ್ಕಿನ್ಸನ್ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಗುರುವಾರ ಘೋಷಿಸಿದೆ.
ಕಳೆದರಡು ಆವೃತ್ತಿಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಮುಂಬೈ ಇಂಡಿಯನ್ಸ್ ತಂಡ ವಿಫಲವಾಗಿದ್ದು, ಮೂರು ತರಬೇತುದಾರರ ನಿರ್ಗಮನವು ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಿರುವುದನ್ನು ಸೂಚಿಸುತ್ತದೆ; ಏಕೆಂದರೆ ಕಳೆದ ವಾರವಷ್ಟೇ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರ ಸ್ಥಾನಕ್ಕೆ ಕೀರನ್ ಪೊಲಾರ್ಡ್ ಅವರನ್ನು ನೇಮಿಸಲಾಗಿತ್ತು.
'ಮುಂಬೈ ಇಂಡಿಯನ್ಸ್ ತಂಡದ ಪುರುಷರ ವಿಭಾಗದ ಕೋಚಿಂಗ್ ತಂಡದಲ್ಲಿರುವ ಲಸಿತ್ ಮಲಿಂಗ, ಪರಸ್ ಮಾಂಬ್ರೆ ಮತ್ತು ಕಾರ್ಲ್ ಹಾಪ್ಕಿನ್ಸನ್ ಅವರು ತಮ್ಮ ಹುದ್ದೆಗಳಿಂದ ನಿರ್ಗಮಿಸುತ್ತಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಇಂದು ಪ್ರಕಟಿಸಿದೆ.
'ಫ್ರಾಂಚೈಸಿಗಾಗಿ ಅವರು ನೀಡಿರುವ ಬದ್ಧತೆ, ಕೊಡುಗೆ ಮತ್ತು ಸೇವೆಗಾಗಿ ತಂಡವು ಅವರೆಲ್ಲರಿಗೂ ಧನ್ಯವಾದ ಅರ್ಪಿಸಿದೆ' ಎಂದು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.