'ಸಚಿನ್ ತೆಂಡೂಲ್ಕರ್ ಅವರಂತೆ ಯಶಸ್ವಿ ವೃತ್ತಿಜೀವನ ರೂಪಿಸಿಕೊಳ್ಳಿ': ವೈಭವ್ ಸೂರ್ಯವಂಶಿಗೆ BCCI ಪ್ರಮುಖ ಸಂದೇಶ!

ಕೇವಲ 15ನೇ ವಯಸ್ಸಿನಲ್ಲಿಯೇ ಸೂರ್ಯವಂಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದರು.
Vaibhav Suryavanshi - Sachin Tendulkar
ವೈಭವ್ ಸೂರ್ಯವಂಶಿ - ಸಚಿನ್ ತೆಂಡೂಲ್ಕರ್
Updated on

ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತು ಇತರ ಉದಯೋನ್ಮುಖ ಆಟಗಾರರು ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರಂತೆ ದೀರ್ಘಕಾಲದ ಹಾಗೂ ಯಶಸ್ವಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕೆಂದು ಮಂಡಳಿ ಬಯಸುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಗುರುವಾರ ಹೇಳಿದರು.

ಕೇವಲ 'ಒಂದು ಸರಣಿ ಅಥವಾ ಒಂದು ವರ್ಷದ ಮಟ್ಟಿಗೆ ಮಾತ್ರ ಮಿಂಚುವ ಆಟಗಾರ'ನಾಗದಂತೆ ತಡೆಯಲು, ಈ 15 ವರ್ಷದ ಆಟಗಾರನಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಲಾಗುತ್ತಿದೆ. ಮುಂಬೈನಲ್ಲಿರುವ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಪರಿಶೀಲನಾ ಸಭೆಯಲ್ಲಿ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್, ಟಿ20ಐ ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ಕೋಚ್ ಗೌತಮ್ ಗಂಭೀರ್, ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಇತರ ಉನ್ನತ ಬಿಸಿಸಿಐ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚಿಸಲಾದ ಇತರ ವಿಷಯಗಳ ಜೊತೆಗೆ, ಸೈಕಿಯಾ ಅವರು ಬಿಸಿಸಿಐ (BCCI) ಸೂರ್ಯವಂಶಿ ಮತ್ತು ಇತರ ಭರವಸೆಯ ಯುವ ಆಟಗಾರರ ಮೇಲೆ ನಿಕಟ ನಿಗಾ ಇರಿಸಿದೆ. ದೀರ್ಘಕಾಲೀನ ಮತ್ತು ಯಶಸ್ವಿ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಒದಗಿಸುವುದರತ್ತ ಮಂಡಳಿಯು ಗಮನಹರಿಸಿದೆ ಎಂದರು.

'ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸುತ್ತಿರುವ 15 ವರ್ಷದ ಆಟಗಾರನೊಬ್ಬನನ್ನು ನಾವು ಪ್ರೋತ್ಸಾಹಿಸುತ್ತಿರುವುದರ ಬಗ್ಗೆ ಬಿಸಿಸಿಐ ಹೆಮ್ಮೆಪಡಬಹುದು. ಆತ ಕೇವಲ ಒಂದು ಸರಣಿ ಅಥವಾ ಒಂದು ವರ್ಷದ ಮಟ್ಟಿಗೆ ಮಾತ್ರ ಮಿಂಚಿ ಮರೆಯಾಗುವ ಆಟಗಾರನಾಗದೆ, ಸರಿಯಾದ ಹಾದಿಯಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಲು ನಾವು ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದೇವೆ. ಸಚಿನ್ ತೆಂಡೂಲ್ಕರ್ ಅಥವಾ ಹಿಂದೆ ದಂತಕಥೆಗಳಾದ ಇತರ ಆಟಗಾರರು ದೇಶಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದಂತೆಯೇ, ವೈಭವ್ ಸೂರ್ಯವಂಶಿ ಅಥವಾ ಅಂತಹ ಪ್ರತಿಭೆಯ ಆಟಗಾರರೂ ಮುಂದುವರಿಯಬೇಕೆಂದು ನಾವು ಬಯಸುತ್ತೇವೆ; ಹಾಗಾಗಿ ನಾವು ವೈಭವ್ ಅವರ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಪ್ರತಿಯೊಂದು ಹಂತವನ್ನೂ ಮತ್ತು ಅವರು ಇಡುವ ಪ್ರತಿಯೊಂದು ಹೆಜ್ಜೆಯನ್ನೂ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಬಿಸಿಸಿಐ ಅವರ ಭವಿಷ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ' ಎಂದು ಹೇಳಿದರು.

Vaibhav Suryavanshi - Sachin Tendulkar
15ನೇ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ; 57 ವರ್ಷದ ಹಳೆಯ ದುಲೀಪ್ ಟ್ರೋಫಿ ದಾಖಲೆ ಛಿದ್ರ!

ಕೇವಲ 15ನೇ ವಯಸ್ಸಿನಲ್ಲಿಯೇ ಸೂರ್ಯವಂಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ, ಕೇವಲ 15 ವರ್ಷ ಮತ್ತು 157 ದಿನಗಳ ವಯಸ್ಸಿನಲ್ಲಿ, ಅವರು 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ದುಲೀಪ್ ಟ್ರೋಫಿ ಇತಿಹಾಸದಲ್ಲೇ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಲ್ಲಿ 151 ರನ್ ಗಳಿಸುವ ಮೂಲಕ ಅವರು ತಮ್ಮ ಚೊಚ್ಚಲ 'ಪ್ಲೇಯರ್ ಆಫ್ ದಿ ಸಿರೀಸ್' ಪ್ರಶಸ್ತಿಯನ್ನು ಪಡೆದರು ಮತ್ತು ಭಾರತವು ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.

ಇದಕ್ಕೂ ಮುನ್ನ, ಇಂಗ್ಲೆಂಡ್ ವಿರುದ್ಧದ ಟಿ20ಐ (T20I) ಸರಣಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದರು. ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ 2026ರಲ್ಲಿ ತೋರಿದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಲಭಿಸಿತ್ತು; ಆ ಟೂರ್ನಿಯಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ, ಬರೋಬ್ಬರಿ 237.30ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಕಲೆಹಾಕಿದ್ದರು. ಅವರ ಈ ಸ್ಫೋಟಕ ಆಟವು ಅವರನ್ನು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನನ್ನಾಗಿ ಮಾಡಿದ್ದಲ್ಲದೆ, ದಾಖಲೆಯ 72 ಸಿಕ್ಸರ್‌ಗಳನ್ನು ಸಿಡಿಸುವಂತೆಯೂ ಮಾಡಿತು.

ಈ ಯುವ ಆಟಗಾರ 'ಆರೆಂಜ್ ಕ್ಯಾಪ್', 'ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್', 'ಎಮರ್ಜಿಂಗ್ ಪ್ಲೇಯರ್', 'ಸೂಪರ್ ಸ್ಟ್ರೈಕರ್' ಮತ್ತು 'ಸೂಪರ್ ಸಿಕ್ಸರ್ಸ್' ಪ್ರಶಸ್ತಿಗಳೂ ಸೇರಿದಂತೆ ಪಂದ್ಯಾವಳಿಯ ನಂತರದ ಹಲವು ಗೌರವಗಳನ್ನು ಬಾಚಿಕೊಂಡರು. ಇದಕ್ಕೂ ಮುನ್ನ, ಈ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಪುರುಷರ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿಯೂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು; ಅಲ್ಲಿ 439 ರನ್ ಗಳಿಸಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಗೆ ಭಾಜನರಾಗುವ ಮೂಲಕ ತಮ್ಮ ಅಪಾರ ಸಾಮರ್ಥ್ಯ ಪ್ರದರ್ಶಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com