

ತಿರುವನಂತಪುರಂ: ಕೇರಳ ಕ್ರಿಕೆಟ್ ಲೀಗ್ (KCL) 2026ರ ಫೈನಲ್ ಪಂದ್ಯದ ಪ್ರಶಸ್ತಿ ಪ್ರದಾನ ಹೈಡ್ರಾಮಾ ನಡೆದಿದ್ದು, ಟೀಂ ಇಂಡಿಯಾದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಮತ್ತು ಮಾಜಿ ಆಟಗಾರ ಶ್ರೀಶಾಂತ್ ನಡುವಿನ ಬಿಕ್ಕಟ್ಟು ಬಟಾ ಬಯಲಾಗಿದೆ ಎನ್ನಲಾಗಿದೆ.
ಫೈನಲ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ವೇಳೆ ವೇದಿಕೆಗೆ ಆಗಮಿಸಿದ ಶ್ರೀಶಾಂತ್ ಅದಾಗಲೇ ವೇದಿಕೆ ಮೇಲೆ ನಿಂತಿದ್ದ ಸಂಜು ಸ್ಯಾಮ್ಸನ್ ರನ್ನು ನಿರ್ಲಕ್ಷಿಸಿದ ಘಟನೆ ನಡೆದಿದ್ದು ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಇದು ಕೇರಳ ಕ್ರಿಕೆಟ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತು ಮಾಡುತ್ತಿದ್ದು, ಇದಲ್ಲದೇ ಸಂಜು-ಶ್ರೀಶಾಂತ್ ನಡುವಿನ ಶೀಥಲ ಸಮರ ಕೂಡ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.
ವೇದಿಕೆ ಮೇಲೆ ಆಗಿದ್ದೇನು?
ಈ ವಿಡಿಯೋದಲ್ಲಿ ಕೇರಳದ ಇಬ್ಬರು ಪ್ರಮುಖ ಕ್ರಿಕೆಟ್ ತಾರೆಗಳಾದ ಸಂಜು ಸ್ಯಾಮ್ಸನ್ ಮತ್ತು ಎಸ್. ಶ್ರೀಶಾಂತ್ ಕಾಣಿಸಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಶ್ರೀಶಾಂತ್ ವೇದಿಕೆಯತ್ತ ಬಂದು ಅಲ್ಲಿದ್ದ ಬಹುತೇಕ ಎಲ್ಲರೊಂದಿಗೂ ಹಸ್ತಲಾಘವ ಮಾಡುತ್ತಾರೆ. ಆದರೆ ಸಂಜು ಸ್ಯಾಮ್ಸನ್ ಅವರೊಂದಿಗೆ ಮಾತ್ರ ಕೈಕುಲುಕುವುದಿಲ್ಲ.
ಆಗಲೇ ಟ್ರೋಫಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಂಜು ಸ್ಯಾಮ್ಸನ್ ವೇದಿಕೆಯ ಮೇಲಿದ್ದರು. ಶ್ರೀಶಾಂತ್ ಕೂಡ ವೇದಿಕೆಗೆ ಬಂದರೂ ಇಬ್ಬರ ನಡುವೆ ಹಸ್ತಲಾಘವ ನಡೆದಿಲ್ಲ. ಇದರಿಂದ ಕೇರಳದ ಈ ಇಬ್ಬರು ಕ್ರಿಕೆಟ್ ದಿಗ್ಗಜರ ನಡುವೆ ಯಾವುದಾದರೂ ಮನಸ್ತಾಪ ಉಂಟಾಗಿದೆಯೇ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ.
ಇಬ್ಬರೂ ಕೈಕುಲುಕದೇ ಇರುವುದಕ್ಕೆ ಕಾರಣವೇನು ಎಂಬ ಬಗ್ಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಚರ್ಚೆ ಆರಂಭಿಸಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಸಂಜು ಸ್ಯಾಮ್ಸನ್ ಆಗಲಿ, ಶ್ರೀಶಾಂತ್ ಆಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.