'ಭಾರತ ವಿರುದ್ಧದ ಆ ದೊಡ್ಡ ಗೆಲುವು ಪಾಕಿಸ್ತಾನ ತಂಡಕ್ಕೆ ಹಾನಿ ಮಾಡಿದೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್!

ಇತ್ತೀಚೆಗೆ ತಂಡವನ್ನು ಕಾಡುತ್ತಿರುವ ನಾಯಕತ್ವದ ವಿವಾದಗಳ ಕುರಿತಾಗಿಯೂ ಯೂಸುಫ್ ವಿಸ್ತೃತವಾಗಿ ಮಾತನಾಡಿದರು.
Mohammad Yousuf
Mohammad Yousuf
Updated on

ಪಾಕಿಸ್ತಾನದ ರಾಷ್ಟ್ರೀಯ ತಂಡವು ಎದುರಿಸುತ್ತಿರುವ ಸದ್ಯದ ಬಿಕ್ಕಟ್ಟಿಗೆ ಅವರ ಇತಿಹಾಸದ ಅತಿದೊಡ್ಡ ಗೆಲುವುಗಳಲ್ಲೊಂದು ಕಾರಣವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಹೇಳಿದ್ದಾರೆ. ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನವು 10 ವಿಕೆಟ್‌ಗಳ ಅಂತರದಿಂದ ಸಾಧಿಸಿದ ಗೆಲುವು, ತಂಡದ ಈಗಿನ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಯೂಸುಫ್ ಹೇಳಿದ್ದಾರೆ. ಆ ಗೆಲುವಿನಿಂದಾಗಿ ಕೆಲವು ಆಟಗಾರರು ತಾವು ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಭಾವಿಸಲು ಪ್ರಾರಂಭಿಸಿದರು ಮತ್ತು ನಾಯಕತ್ವದ ಪೈಪೋಟಿಯು ಡ್ರೆಸ್ಸಿಂಗ್ ರೂಮ್‌ನೊಳಗೆ ಸಮಸ್ಯೆಗಳನ್ನು ಸೃಷ್ಟಿಸಿತು ಎಂದು ಅವರು ವಿವರಿಸಿದರು.

ಭಾರತದ ವಿರುದ್ಧದ ಪಂದ್ಯದಲ್ಲಿ 152 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೆ ಬೆನ್ನಟ್ಟುವ ಮೂಲಕ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದಾಗ್ಯೂ, ಸುಮಾರು 5 ವರ್ಷಗಳ ನಂತರ, ಆ ಗೆಲುವು ವಾಸ್ತವವಾಗಿ ಒಂದು ಸಮಸ್ಯೆಯಾಗಿ ಪರಿಣಮಿಸಿತು ಎಂದು ಯೂಸುಫ್ ಅಭಿಪ್ರಾಯಪಟ್ಟಿದ್ದಾರೆ.

'2021ರಲ್ಲಿ ಭಾರತದ ವಿರುದ್ಧ ನಾವು ಗೆದ್ದ ಆ ಪಂದ್ಯ ನಮಗೆ ಬಹಳಷ್ಟು ಹಾನಿ ಉಂಟುಮಾಡಿತು. ಏಕೆಂದರೆ ಆ ಗೆಲುವಿನ ನಂತರ, ಆಟಗಾರರು ತಾವು ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಭಾವಿಸಲು ಪ್ರಾರಂಭಿಸಿದರು. ಮುಂದೆ ಏನು ಮಾಡಬೇಕೆಂಬುದು ಅವರಿಗೆ ಅರ್ಥವಾಗಲಿಲ್ಲ' ಎಂದು ಯೂಸುಫ್ 'ಸಮಾ ಟಿವಿ'ಗೆ (Samaa TV) ತಿಳಿಸಿದರು.

'ಉತ್ತಮ ಪ್ರದರ್ಶನ ನೀಡುತ್ತಿರುವಾಗ ವಿನಮ್ರರಾಗಿರಬೇಕು. ಅಹಂಕಾರದಿಂದ ವರ್ತಿಸಿ ಅಸಭ್ಯವಾಗಿ ನಡೆದುಕೊಂಡರೆ ಸಮಸ್ಯೆಗಳು ಎದುರಾಗುತ್ತವೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಅಂತಹ ಅನೇಕ ಸಮಸ್ಯೆಗಳು ಉದ್ಭವಿಸಿವೆ' ಎಂದು ಅವರು ಹೇಳಿದರು.

ಇತ್ತೀಚೆಗೆ ತಂಡವನ್ನು ಕಾಡುತ್ತಿರುವ ನಾಯಕತ್ವದ ವಿವಾದಗಳ ಕುರಿತಾಗಿಯೂ ಯೂಸುಫ್ ವಿಸ್ತೃತವಾಗಿ ಮಾತನಾಡಿದರು.

Mohammad Yousuf
'ಭಾರತ ಕೂಡ ಐರ್ಲೆಂಡ್ ವಿರುದ್ಧ ಸೋತಿದೆ, ಹಾಗೆಂದ ಮಾತ್ರಕ್ಕೆ..': ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ಸಂಕಷ್ಟ ಕುರಿತು PCB ಮುಖ್ಯಸ್ಥ ಮೊಹ್ಸಿನ್ ನಖ್ವಿ

'ತಂಡದಲ್ಲಿದ್ದ ಪ್ರತಿಯೊಬ್ಬರೂ ಪಾಕಿಸ್ತಾನ ತಂಡದ ನಾಯಕರಾಗಲು ಪ್ರಯತ್ನಿಸುತ್ತಿದ್ದರು. ಇದರ ಪರಿಣಾಮಗಳು ಪಾಕಿಸ್ತಾನ ಕ್ರಿಕೆಟ್‌ಗೆ ಈಗಲೂ ಹಾನಿ ಮಾಡುತ್ತಿವೆ' ಎಂದು ಹೇಳಿದರು.

ರಾಷ್ಟ್ರೀಯ ತಂಡವು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪಾಕಿಸ್ತಾನದ ಮಾಜಿ ನಾಯಕ, ಏಕದಿನ ಹಾಗೂ ಟಿ-20 ವಿಶ್ವಕಪ್‌ಗಳು ಮತ್ತು ಏಷ್ಯಾ ಕಪ್‌ನಲ್ಲಿನ ತಂಡದ ಪ್ರದರ್ಶನಗಳನ್ನೂ ಈ ನಿಟ್ಟಿನಲ್ಲಿ ಉಲ್ಲೇಖಿಸಿದ್ದಾರೆ.

'ಅತ್ಯಂತ ಕಳಪೆ ಮಟ್ಟದ ಕ್ರಿಕೆಟ್ ಆಡಲಾಗಿದೆ. ಪಿಸಿಬಿ ಆರಂಭದಿಂದಲೂ ನಿಮಗೆ ಬೆಂಬಲ ನೀಡುತ್ತಲೇ ಬಂದಿದೆ. ಪಾಕಿಸ್ತಾನ ತಂಡಕ್ಕೆ ನೆರವಾಗುವ ಉದ್ದೇಶದಿಂದಲೇ ಅನೇಕ ಕೋಚ್‌ಗಳು ಬಂದರು-ಹೋದರು ಮತ್ತು ಎಷ್ಟೋ ವಿಷಯಗಳಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಆದರೂ, ಯಾವೊಬ್ಬ ಆಟಗಾರನೂ ಮುಂದೆ ಬಂದು ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com