'ಅದು ವಾಸ್ತವವಲ್ಲ ಎಂಬುದು ನಂತರ ಅರಿವಾಯಿತು': ಟೀಂ ಇಂಡಿಯಾದಿಂದ ಹಠಾತ್ ಹೊರಗುಳಿದ ಕುರಿತು RCB ವೇಗಿ ಭುವನೇಶ್ವರ್ ಕುಮಾರ್

ಆ ಹಿನ್ನಡೆಯು ಕಷ್ಟಕರವಾಗಿದ್ದರೂ, ಅಂತಿಮವಾಗಿ ಅದನ್ನು ಒಪ್ಪಿಕೊಂಡೆ; ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನನ್ನ ಕುಟುಂಬ ಪ್ರಮುಖ ಪಾತ್ರ ವಹಿಸಿತು ಎಂದರು.
Bhuvneshwar Kumar
ಭುವನೇಶ್ವರ್ ಕುಮಾರ್
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಸತತ ಎರಡು ಗೆಲುವುಗಳ ನಂತರ, ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಭಾರತದ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. 2022ರಲ್ಲಿ ಕೊನೆಯ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದ 36 ವರ್ಷದ ಭುವನೇಶ್ವರ್, ತಂಡಕ್ಕೆ ಮರಳಿ ಮತ್ತೊಮ್ಮೆ ರಾಷ್ಟ್ರೀಯ ತಂಡದ ಜೆರ್ಸಿ ಧರಿಸುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ 17 ವಿಕೆಟ್‌ಗಳನ್ನು ಕಬಳಿಸಿದ ಅವರು, ಹೊಸ ಹಾಗೂ ಹಳೆಯ ಚೆಂಡುಗಳೆರಡರಲ್ಲೂ ಪರಿಣಾಮಕಾರಿ ಬೌಲಿಂಗ್ ಮಾಡಿದರು. 2026ರ ಆವೃತ್ತಿಯಲ್ಲಿ ತಮ್ಮ ಪ್ರದರ್ಶನವನ್ನು ಇನ್ನಷ್ಟು ಉನ್ನತ ಮಟ್ಟಕ್ಕೇರಿಸಿದ ಅವರು, 17.89ರ ಅತ್ಯುತ್ತಮ ಸರಾಸರಿಯೊಂದಿಗೆ 28 ​​ವಿಕೆಟ್‌ಗಳನ್ನು ಪಡೆದರು. ಈ ಮೂಲಕ ದಾಖಲೆಯ ಮೂರನೇ ಬಾರಿಗೆ 'ಪರ್ಪಲ್ ಕ್ಯಾಪ್' ಗೆಲ್ಲುವುದರಿಂದ ಕೇವಲ ಒಂದು ವಿಕೆಟ್ ಅಂತರದಲ್ಲಿ ವಂಚಿತರಾದರಾದರೂ, ಆರ್‌ಸಿಬಿಯ ಸತತ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

'ನಾನು ಏನನ್ನೂ ಸಾಬೀತುಪಡಿಸಲು ಆಡುತ್ತಿಲ್ಲ. ಆದರೆ, ಭಾರತಕ್ಕಾಗಿ ಮತ್ತೆ ಆಡಲು ನನಗೆ ಖುಷಿಯಾಗುತ್ತದೆ. ಮುಂದಿನ ಸರಣಿಗಾಗಿ ಕಾಯುತ್ತಿದ್ದ ಆ ಹಂತವನ್ನು ನಾನು ದಾಟಿ ಬಂದಿದ್ದೇನೆ' ಎಂದು ಭುವನೇಶ್ವರ್ ಕುಮಾರ್ ಜತಿನ್ ಸಪ್ರು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

ಮುಂದಿನ ಒಂದೆರಡು ಸರಣಿಗಳಲ್ಲಿ ಆಡುವ ಸಾಧ್ಯತೆಯಿದೆ ಎಂಬ ಸೂಚನೆ ಸಿಕ್ಕಾಗ, ತಾನು ಭಾರತೀಯ ತಂಡಕ್ಕೆ ಮರಳಬಹುದು ಎಂದು ಆರಂಭದಲ್ಲಿ ಭಾವಿಸಿದ್ದೆ. ಆದರೆ, ವಾಸ್ತವ ಹಾಗಿರಲಿಲ್ಲ ಎಂಬುದು ನನಗೆ ನಂತರ ಅರಿವಾಯಿತು. ಆ ಹಿನ್ನಡೆಯು ಕಷ್ಟಕರವಾಗಿದ್ದರೂ, ಅಂತಿಮವಾಗಿ ಅದನ್ನು ಒಪ್ಪಿಕೊಂಡೆ; ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನನ್ನ ಕುಟುಂಬ ಪ್ರಮುಖ ಪಾತ್ರ ವಹಿಸಿತು ಎಂದರು.

Bhuvneshwar Kumar
'ಸಾಧಿಸಲು ಈಗ ಏನೂ ಉಳಿದಿಲ್ಲ': ಭಾರತ ತಂಡಕ್ಕೆ ಮರಳುವ ಕುರಿತು RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಮಾತು

'ಕೆಲವು ಸರಣಿಗಳವರೆಗೆ... ಏಕೆಂದರೆ ನನಗೆ ಒಂದು ಕರೆ ಬಂದಿತ್ತು. ಇನ್ನೂ ಕೆಲವು ಸರಣಿಗಳಲ್ಲಿ ನಾನು ಆಡುವುದನ್ನು ಮುಂದುವರಿಸಬಹುದು ಎಂದು ಭಾವಿಸಿದ್ದೆ. ಆದರೆ ನಂತರ, ಅವರು ಹೇಳಿದ್ದು ಅದಲ್ಲ ಎಂಬುದು ನನಗೆ ಅರಿವಾಯಿತು. ಅದು ನನಗೆ ನೋವುಂಟು ಮಾಡಲಿಲ್ಲ, ಏಕೆಂದರೆ ಆಗ ಅಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿದಿತ್ತು ಮತ್ತು ನಾನು ಅದನ್ನು ಒಪ್ಪಿಕೊಂಡಿದ್ದೆ. ಅದು ಸುಲಭವಾಗಿರಲಿಲ್ಲ, ಆದರೆ ನನ್ನ ಕುಟುಂಬವು ಅದರಲ್ಲಿ ಪ್ರಮುಖ ಪಾತ್ರ ವಹಿಸಿತು' ಎಂದು ಅವರು ಹೇಳಿದರು.

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಿಂದ ಭಾರತ ಹೊರಬಿದ್ದ ನಂತರ ಸರಣಿಯ ನೇಪಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ಆಡುವ ಮೂಲಕ, ಈ ಅನುಭವಿ ವೇಗಿ ಕೊನೆಯದಾಗಿ 2022ರ ನವೆಂಬರ್‌ನಲ್ಲಿ ಟಿ20 ಅಂತಾರಾಷ್ಟ್ರೀಯ (T20I) ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಭುವನೇಶ್ವರ್ ಕುಮಾರ್ ವಿವಿಧ ಸ್ವರೂಪಗಳಲ್ಲಿ ಭಾರತವನ್ನು 229 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, 29.50ರ ಪ್ರಭಾವಶಾಲಿ ಸರಾಸರಿಯಲ್ಲಿ 294 ವಿಕೆಟ್‌ಗಳನ್ನು ಪಡೆದಿದ್ದಾರೆ; ಇದರಲ್ಲಿ ಏಳು ಬಾರಿ ಇನಿಂಗ್ಸ್ ಒಂದರಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಸಾಧನೆಯೂ ಸೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com