ಉದ್ಯಾನ ನಗರಿಯ ಮತ್ತೊಂದು ಹೃದಯ ವೈಶಾಲ್ಯ

ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕನ ಹೃದಯ, ಚೆನ್ನೈ ಬಾಲಕನಲ್ಲಿ ಯಶಸ್ವಿಯಾಗಿ ಮಿಡಿಯಿತು...
ಬೆಂಗಳೂರಿನಿಂದ ಚೆನ್ನೆಗೆ ಹಾರಿದ ಪುಟಾಣಿ ಹೃದಯ
ಬೆಂಗಳೂರಿನಿಂದ ಚೆನ್ನೆಗೆ ಹಾರಿದ ಪುಟಾಣಿ ಹೃದಯ

ಬೆಂಗಳೂರು: ಉದ್ಯಾನನಗರಿ ಮತ್ತೊಮ್ಮೆ ಮಾನವೀಯ ಮೌಲ್ಯಕ್ಕೆ ಶುಕ್ರವಾರ ಸಾಕ್ಷಿಯಾಯಿತು. ಮೆದುಳು ನಿಷ್ಕ್ರಿಯಗೊಂಡಿದ್ದ 2 ವರ್ಷ10 ತಿಂಗಳ ಬಾಲಕನ ಹೃದಯ, ಚೆನ್ನೈನಲ್ಲಿ 2 ವರ್ಷ 8 ತಿಂಗಳ ಬಾಲಕನಲ್ಲಿ ಯಶಸ್ವಿಯಾಗಿ ಮಿಡಿಯಿತು.

ಮಾತ್ರವಲ್ಲ ಹೃದಯ, ಕಿಡ್ನಿ, ಲಿವರ್ ಹಾಗೂ ಕಾರ್ನಿಯಾ ದಾನ ಮಾಡುವ ಮೂಲಕ ತಮ್ಮ ಮಗನನ್ನು ಹೆತ್ತವರು ಜೀವಂತವಾಗಿಟ್ಟಿದ್ದಾರೆ.

ಪಶ್ಚಿಮ ಬಂಗಾಳ ಮೂಲದ, ಟಿಸಿಎಸ್ ಕಂಪನಿ ಉದ್ಯೋಗಿಯೊಬ್ಬರ ಮಗ ಜ್ವರದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದ. ಆದರೆ ಜ್ವರ ವಾಸಿಯಾಗದೇ ಮೆದುಳು ನಿಷ್ಕ್ರಿಯಗೊಳ್ಳಲು ಆರಂಭಿಸಿತ್ತು.

ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ಬಾಲಕನನ್ನು ಭಾನುವಾರ(ಡಿ.14) ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ನಿರಂತರ ಚಿಕಿತ್ಸೆ ನಂತರವೂ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ವೈದ್ಯರ ಪ್ರಕಾರ ಬಾಲಕ ಮತ್ತೆ ಎಂದಿನ ಸ್ಥಿತಿಗೆ ಬರುವುದು ಕಷ್ಟ ಎಂಬುದು ತಿಳಿಯುತ್ತಿದ್ದಂತೆ ಆತನ ಎಲ್ಲ ಅಂಗಾಂಗಗಳನ್ನು ದಾನ ಮಾಡಲು ಮುಂದಾದರು.

ಕೂಡಲೇ ರಾಜ್ಯದ ಅಂಗಾಗ ಕಸಿ ವಲಯ ಸಂಯೋಜನಾ ಸಮಿತಿಯನ್ನು ಸಂಪರ್ಕಿಸಿದಾಗ, ಚೆನ್ನೈ ಬಾಲಕನೊಬ್ಬನಿಗೆ ಹೃದಯದ ಅಗತ್ಯವಿರುವುದು ತಿಳಿಯಿತು. ಅಲ್ಲಿಯ ವೈದ್ಯರ ತಂಡ ನಗರಕ್ಕೆ ಬಂದು ಪರಿಶೀಲಿಸಿದ ಬಳಿಕ ಕಸಿ ಮಾಡಲು ತೀರ್ಮಾನಿಸಲಾಯಿತು. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಹೃದಯ ಸಾಗಣೆಗೆ ಅವಕಾಶ ನೀಡಲಾಯಿತು.

ಚೆನ್ನೈಗೆ ತಲುಪಿದ ಪುಟ್ಟ ಬಾಲಕನ ಹೃದಯವನ್ನು, ಚೆನ್ನೈನ ಫೋರ್ಟಿಸ್ ಆಸ್ಪತ್ರೆಯ ವೈದ್ಯ ತಂಡ, ಹೃದಯ ಕಸಿ ಮಾಡುವಲ್ಲಿ ಯಶಸ್ವಿಯಾಯಿತು.  

ಬಾಲಕನ 2 ಕಿಡ್ನಿಗಳನ್ನು ಒಬ್ಬರಿಗೆ ಕಸಿ ಮಾಡಲಾಯಿತು. 2 ಕಾರ್ನಿಯಾ(ಕಣ್ಣಿನ ಭಾಗ)ದಿಂದ ಇಬ್ಬರಿಗೆ ದೃಷ್ಟಿ ನೀಡಿತು. ಅಲ್ಲದೇ ಲಿವರ್ ಕೂಡ ಮತ್ತೊಬ್ಬರಿಗೆ ಮರು ಹುಟ್ಟು ನೀಡುವಲ್ಲಿ ಬೆಂಗಳೂರಿನ ಬಾಲಕ ವಿಶಾಲ ಹೃಯವಂತಿಕೆ ಮೆರೆದಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com