ಪಾಲಿಕೆ ಸದಸ್ಯೆಯ ಪತಿಗೆ ಬೆದರಿಕೆ ಕರೆ

ಪರಸ್ಪರ ಅಗ್ರಹಾರ ಜೈಲಿನಲ್ಲಿರುವ ಕೈದಿಯೊಬ್ಬ ರಾಜಕೀಯ ಮುಖಂಡ, ಪಾಲಿಕೆ ಸದಸ್ಯೆಯೊಬ್ಬರ ಪತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.
ಬೆದರಿಕೆ ಕರೆ
ಬೆದರಿಕೆ ಕರೆ

ಬೆಂಗಳೂರು: ಪರಸ್ಪರ ಅಗ್ರಹಾರ ಜೈಲಿನಲ್ಲಿರುವ ಕೈದಿಯೊಬ್ಬ ರಾಜಕೀಯ ಮುಖಂಡ, ಪಾಲಿಕೆ ಸದಸ್ಯೆಯೊಬ್ಬರ ಪತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

ಲಕ್ಷಾಂತರ ರು. ವೆಚ್ಚದಲ್ಲಿ ಜೈಲಿನ ಸುತ್ತ ಮೊಬೈಲ್ ಜಾಮರ್ ಅಳವಡಿಸಿದ್ದರೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ರೌಡಿ ಶೀಟರ್ ಪಳನಿ(38) ಬೆದರಿಕೆ ಹಾಕಿರುವ ಕೈದಿ. ಕೊಲೆ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲಲ್ಲಿರುವ ಈತ ಶಾಂತಿನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಸೌಮ್ಯ ಅವರ ಪತಿ ಶಶಿಕುಮಾರ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ರು. 10 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಕರೆ ಬಂದ ಹಿನ್ನೆಲೆಯಲ್ಲಿ ಶಶಿಕುಮಾರ್ 15 ದಿನದ ಹಿಂದೆ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜೈಲಿನಿಂದ ಹೇಗೆ ಸಾಧ್ಯ? ಕೈದಿಗಳು ಜೈಲಿನಲ್ಲೇ ಕುಳಿತು ಕರೆ ಮಾಡಿ ತಮ್ಮ ದರ್ಬಾರ್ ನಡೆಸುತ್ತಾರೆ. ಭೂಗತ ಲೋಕವನ್ನು ಹಿಡಿತದಲ್ಲಿಟ್ಟುಕೊಂಡಿರುತ್ತಾರೆ ಎಂಬ ಆರೋಪದ ಮೇಲೆ ಜೈಲಿನಲ್ಲಿ ಮೊಬೈಲ್ ನಿಷೇಧ ಮಾಡಲಾಗಿದೆ. ಆದರೂ ಕೈದಿಗಳು ಅಲ್ಲಿನ ಪೊಲೀಸರ ಕಣ್ತಪ್ಪಿಸಿ ಮೊಬೈಲ್‌ನ್ನು ಒಳಗೆ ಸಾಗಿಸುತ್ತಿದ್ದರು. ಹಾಗಾಗಿ ಅದೆಲ್ಲವನ್ನೂ ಸಂಪೂರ್ಣವಾಗಿ ತಪ್ಪಿಸಲು ಅಧಿಕಾರಿಗಳು ಮುಂದಾಗಿ, ಜೈಲಿನ ಸುತ್ತ ಮೊಬೈಲ್ ಜಾಮರ್ ಅಳವಡಿಸಿದ್ದರು.

ಜಾಮರ್ ಅಳವಡಿಕೆಯಿಂದ ಜೈಲಿನ ಅಧಿಕಾರಿಗಳು, ಸಿಬ್ಬಂದಿ, ಮಾತ್ರವಲ್ಲದೆ ಸುತ್ತ ಮುತ್ತಲ ನಿವಾಸಿಗಳಿಗೂ ತೊಂದರೆಯಾಗುತ್ತಿದೆ ಎಂಬ ದೂರು ಈ ಹಿಂದೆ ಕೇಳಿಬಂದಿತ್ತು. ನಂತರ ಜಾಮರ್‌ರನ್ನು ಜೈಲಿಗೆ ಮಾತ್ರ ಅನ್ವಯವಾಗುವಂತೆ ಅಧಿಕಾರಿ ಸರಿಪಡಿಸಿದರು.

ಇಷ್ಟಾಗಿಯೂ ಜೈಲಿನಿಂದ ಆತ ಕರೆ ಮಾಡಿದ್ದಾನೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಅಂದರೆ ಅಲ್ಲಿನವರೇ ಆತನಿಗೆ ಕುಮ್ಮಕು ನೀಡಿರಬೇಕು. ಅಥವಾ ವಿಚಾರಣೆಗೆ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಕರೆ ಮಾಡಿರಬಹುದೇ ಎಂಬ ಅನುಮಾನಗಳು ಕಾಡುತ್ತಿವೆ. ಆದರೆ ಪೊಲೀಸರ ಬಳಿ ಈ ಬಗ್ಗೆ ಸ್ಪಷ್ಟ ಉತ್ತರವಿಲ್ಲ.

ಪ್ರತ್ಯೇಕ ದೂರು ದಾಖಲು
ಪರಪ್ಪನ ಅಗ್ರಹಾರ ಜೈಲಿನೊಳಗೆ ಪಳನಿಗೆ ಮೊಬೈಲ್ ಸಿಕ್ಕ ಬಗ್ಗೆ ಹಾಗೂ ಆತ ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಆದರೆ, ಅಲ್ಲಿನ ಜಾಮರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಸಿದ್ಧಪಡಿಸಲು ಪತ್ರ ಬರೆಯಲಾಗಿದೆ.  ಆತನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋದಾಗ ಕರೆ ಮಾಡಿದ್ದಾನೊ, ಜೈಲಿನಿಂದಲೇ ಕರೆ ಮಾಡಿದ್ದಾನೋ ಎಂಬುದು ತಿಳಿದಿಲ್ಲ. ತನಿಖೆ ನಂತರ ತಿಳಿಯಲಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಶೀಲಿಸಿದಾಗ ಬೆಳಕಿಗೆ

ಪೊಲೀಸರು ಬೆದರಿಕೆ ಕರೆ ಬಂದಿದ್ದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಪರಪ್ಪನ ಅಗ್ರಹಾರ ಜೈಲಿನಿಂದ ಕರೆ ಬಂದಿರುವುದು ತಿಳಿದುಬಂದಿದೆ. ತನಿಖೆ ಮುಂದುವರಿಸಿದಾಗ ರೌಡಿಶೀಟರ್ ಪಳನಿ ಎಂಬ ವಿಚಾರ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಮತ್ತೆ ಜೈಲಿಗೆ ಕಳುಹಿಸಲಾಗಿದೆ. ವೈಯಕ್ತಿಕ ದ್ವೇಷ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದ ಹಿನ್ನೆಲೆಯಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕೆ.ಎಸ್. ಲೇಔಟ್‌ನ ಪಳನಿ ವಿರುದ್ಧ ನಗರದ ಹಲವು ಠಾಣೆಗಳಲ್ಲಿ 13ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.  ಪಳನಿ ವಿರುದ್ಧ ಗೂಂಡಾ ಕಾಯ್ದೆಯಲ್ಲಿ ಕೇಸ್ ದಾಖಲಿಸಲು ಚಿಂತನೆ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com