ಬಿಎಂಟಿಸಿ ಪ್ರಯಾಣದರ ಇಳಿಕೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಸಾಂದರ್ಭಿಕ ಚಿತ್ರ- ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ
ಸಾಂದರ್ಭಿಕ ಚಿತ್ರ- ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು: ದೇಶದಲ್ಲಿ ಡೀಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದರು. ಬಿಎಂಟಿಸಿ ಬಸ್ ಪ್ರಯಾಣ ದರ ಇಳಿಕೆ ಮಾಡದೇ ಇರುವದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಎಂಟಿಸಿ ಬಸ್ ಪ್ರಯಾಣ ದರ ಇಳಿಕೆಗೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಬೆಂಗಳೂರು ನಗರ ಮತ್ತು ಜಿಲ್ಲೆ ಯುವ ಮೋರ್ಚಾ ಕಾರ್ಯಕರ್ತರು, ಶಾಸಕ ಮುನಿರಾಜು ನೇತೃತ್ವದಲ್ಲಿ ಶಾಂತಿ ನಗರ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿನಗರ ಬಸ್ ನಿಲ್ದಾಣದವರೆಗೂ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಬಸ್ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು. ಆದರೆ ಪೊಲೀಸರು ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನು ನಿಯಂತ್ರಿಸಲು ಯತ್ನಿಸಿದರೂ ಕೂಡ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಪ್ರಯತ್ನಿಸಿದ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ಈ ವೇಳೆ ಆಕ್ರೋಶಗೊಂಡ ಕಾರ್ಯರ್ತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಈ ವೇಳೆ ಮಾತನಾಡಿದ, ಶಾಸಕ ಮುನಿರಾಜು ಮಾತನಾಡಿ, ಕಾಂಗ್ರೆಸ್ ನಡಿಗೆ ಜನರ ಕಡೆಗೆ ಇಲ್ಲ. ಅತ್ಯಾಚಾರ, ಬೆಲೆ ಏರಿಕೆ, ದೌರ್ಜನ್ಯದ ಕಡೆಗೆ ಇದೆ. ಎಲ್ಲಾ ಭಾಗ್ಯಗಳನ್ನು ಕೈಬಿಟ್ಟು ದೌರ್ಜನ್ಯದ ಭಾಗ್ಯವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ಕಿಡಿಕಾರಿದರು.

ನಮ್ಮ ಸರ್ಕಾರ ಇದ್ದಾಗ ಒಳ್ಳೆಯ ಬಸ್‌ಗಳಿದ್ದವು. ಸಂಸ್ಥೆ ಕೂಡ ಲಾಭದಲ್ಲಿತ್ತು. ಈಗ ಸಂಸ್ಥೆ ನಷ್ಟದತ್ತ ಸಾಗಿದೆ. ಕೇಂದರ್ ಸರ್ಕಾರ ಎರಡು ಬಾರಿ ಡೀಸೆಲ್ ಬೆಲೆ ಕಡಿಮೆ ಮಾಡಿದ್ದರೂ ಕೂಡ ಸರ್ಕಾರ ಬಸ್ ಪ್ರಯಾಣ ದರ ಇಳಿಕೆ ಮಾಡದೆ ಜನರನ್ನು ವಂಚಿಸುತ್ತಿದೆ ಎಂದೂ ದೂರಿದರು. ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳದ್ದೇ ದರ್ಬಾರಾಗಿ ಬಿಟ್ಟಿದೆ. ಒಂದು ವಾರದೊಳಗೆ ಬಸ್ ಪ್ರಯಾಣ ದರ ಇಳಿಸದಿದ್ದರೆ ಬಸ್‌ಗಳನ್ನು ಸಂಚರಿಸಲು ಬಿಡುವುದಿಲ್ಲ ಎಂದು ಮುನಿರಾಜು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com