
ಬೆಂಗಳೂರು: ವಿವಾಹದ ನಂತರ ತನ್ನ ಪತಿ ಕ್ರಿಮಿನಲ್ ಎಂಬುದನ್ನು ತಿಳಿದ ಮಹಿಳೆಯೊಬ್ಬಳು ಆತನಿಗೆ ಸುಲಭವಾಗಿ ಹಣ ಮಾಡುವ ದಾರಿ ಹೇಳಿಕೊಟ್ಟು, ವೈದ್ಯರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಪರಿಣಾಮ ಈಗ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂದಿಸಿದ್ದಾರೆ.
ಡಿ.ಜೆ ಹಳ್ಳಿ ನಿವಾಸಿಗಳಾದ ಅನೀಸ್ ಆಹ್ಮದ್, ಆತನ ಪತ್ನಿ ಸುಮಿಯಾ, ಸಾದಿಕ್ ಪಾಷಾ, ಎಜಾಜ್ ಮತ್ತು ಶಫಿ ಬಂಧಿತರು. ಆರೋಪಿಗಳಿಂದ ನಗದು, ವಾಹನ, ಆಭರಣ ಸೇರಿ ರು. 25 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಅನೀಸ್ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಈ ನಡುವೆ ಈತ ಸುಮಿಯಾಳನ್ನು ಪ್ರೀತಿಸಿ ವಿವಾಹವಾಗಿದ್ದ. ವಿವಾಹದ ನಂತರ ಆಕೆಗೆ ತನ್ನ ಪತಿ ಅಪರಾಧ ಹಿನ್ನೆಲೆಯುಳ್ಳವನು ಎಂದು ತಿಳಿದುಬಂದಿದೆ. ಆತನನ್ನು ಅಪರಾಧ ಲೋಕದಿಂದ ದೂರ ಮಾಡುವ ಬದಲು, ಹಣ ಸಂಪಾದನೆಗೆ ನನ್ನ ಬಳಿ ಸುಲಭ ತಂತ್ರವಿದೆ ಎಂದು ಆಕೆ ಹೇಳಿದ್ದಾಳೆ.
ಈ ನಡುವೆ, ತನ್ನ ಹಣೆಯ ಮೇಲೆ ಇದ್ದ ಮಚ್ಚೆಯನ್ನು ತೆಗೆಸಲು ಸುಮಿಯಾ ನಗರದ ಪ್ರತಿಷ್ಠತ ಆಸ್ಪತ್ರೆಯೊಂದಕ್ಕೆ ಹೋಗಿದ್ದಾಳೆ. ಅಲ್ಲಿನ ವೈದ್ಯರೊಬ್ಬರನ್ನು ಪರಿಚಯ ಮಾಡಿಕೊಂಡು, ಯುವತಿಯೊಬ್ಬಳ ಜತೆ ಸುಲಭವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುವುದಾಗಿ ಹೇಳಿದ್ದಾಳೆ. ಬಳಿಕ ವೈದ್ಯರನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಕೆಲ ಹೊತ್ತಿನಲ್ಲೇ ಅನೀಸ್ ಹಾಗೂ ಆತನ ಸಹಚರರು ಅಲ್ಲಿಗೆ ಹೋಗಿ ತಮ್ಮ ಜನಾಂಗದ ಯುವತಿ ಜತೆ ಅಶ್ಲೀಲವಾಗಿ ವರ್ತಿಸುತ್ತಿದ್ದೀಯಾ ಎಂದು ಆಕ್ಷೇಪವೆತ್ತಿ ವೈದ್ಯರ ಮೇಲೆ ಹಲ್ಲೆ ಮಾಡಿ ನಂತರ ಅವರಿಬ್ಬರ ಅಶ್ಲೀಲ ಫೋಟೋಗಳನ್ನು ತೆಗೆದಿದ್ದಾರೆ.
ಹಣ ನೀಡದಿದ್ದಲ್ಲಿ ಅತ್ಯಾಚಾರದ ದೂರು ನೀಡುವುದಾಗಿ ವೈದ್ಯರನ್ನು ಬೆದರಿಸಿದ್ದರು. ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಹೆದರಿಸಿ ರು. 20 ಲಕ್ಷ ಹಣ ಪಡೆದಿದ್ದರು. ಬಂದ ಹಣದಲ್ಲಿ ಸಹಚರರಿಗೆ ರು. 10-15 ಸಾವಿರ ಹಣ ನೀಡಿ ಉಳಿದ ಹಣವನ್ನು ತಾನೇ ಬಳಿಸಿಕೊಂಡಿದ್ದ. ಇದನ್ನು ತಿಳಿದ ಉಳಿದ ಮೂವರು ಆರೋಪಿಗಳು ವೈದ್ಯರಿಗೆ ಕರೆ ಮಾಡಿ ರು. 15 ಲಕ್ಷ ಹಣ ನೀಡುವಂತೆ ಬೆದರಿಸಿದ್ದರು. ನಂತರ ವೈದ್ಯರು ಈ ಸಂಬಂಧ ಹೈಗ್ರೌಂಡ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಿಸಿದ ಕಾರು, ಆಟೋ, ದ್ವಿಚಕ್ರ ವಾಹನ, ಲ್ಯಾಪ್ ಟಾಪ್, ಮೊಬೈಲ್ ಹಾಗೂ 14,50,000 ರುಪಾಯಿ ನಗದು ಸೇರಿ ಒಟ್ಟು ರು. 25 ಲಕ್ಷ ಮೌಲ್ಯದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
Advertisement