30 ಸಾವಿರ ಕಟ್ಟಡ ಪ್ರಮಾಣಪತ್ರ ನಕಲಿ!

ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ಸುಮಾರು 30 ಸಾವಿರ ಕಟ್ಟಡಗಳಿಗೆ ನೀಡಿರುವ ಮಂಜೂರು ಪತ್ರಗಳು ನಕಲಿ!

ಇದು ಬಿಬಿಎಂಪಿಯಲ್ಲಿ ಆಡಳಿತಾರೂಢ ಬಿಜೆಪಿಯೇ ಬಹಿರಂಗಪಡಿಸಿದ ಸತ್ಯ. ಮೇಯರ್ ಶಾಂತಕುಮಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್ ಈ ಬಗ್ಗೆ ವಿವರ ನೀಡಿದರು.

ಅಕ್ರಮ, ಅವ್ಯವಹಾರ ಹಾಗೂ ಹಗಲು ದರೋಡೆಗೆ ಹೆಸರಾದ ಬಿಬಿಎಂಪಿಯಲ್ಲಿ ಈಗ ಮತ್ತೊಂದು ಹೊಸ ಅಕ್ರಮ ನಡೆದಿದೆ. ಕಟ್ಟಡಗಳಿಗೆ ವಿವಿಧ ರೀತಿಯ ಮಂಜೂರು ನೀಡುವ ಪ್ರಮಾಣ ಪತ್ರಗಳನ್ನೇ ನಕಲಿಯಾಗಿ ನೀಡಲಾಗಿದೆ! ಹಿಂದಿನಿಂದಲೂ ನಡೆಯುತ್ತಿರುವ ಈ ಅಕ್ರಮದಿಂದ ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಯವಾಗುತ್ತಿದೆ.

ಸಭೆ ಆರಂಭದಲ್ಲೇ ಮಾತನಾಡಿದ ರಮೇಶ್, ನಗರ ಯೋಜನೆ ವಿಭಾಗ 2010 ರಿಂದ 2014 ರವರೆಗೂ 1298 ಕಟ್ಟಡಗಳಿಗೆ ನಕ್ಷೆ ಮಂಜೂರು ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅದೇ ರೀತಿ 350 ಕಟ್ಟಡಗಳಿಗೆ ಕಮ್ಮೆನ್ಸ್ಮೆಂಟ್ ಸರ್ಟಿಫಿಕೇಟ್ ನೀಡಲಾಗಿದ್ದು, 95 ಕಟ್ಟಡಗಳಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡಲಾಗಿದೆ ಎಂದು ಅಧಿಕಾರಿಗಳು ದಾಖಲೆ ತೋರಿಸುತ್ತಿದ್ದಾರೆ. ಹಾಗೆಯೇ ಇದರಿಂದ ಬರಿ ರು. 111 ಕೋಟಿ ಸಂಗ್ರಹಿಸಿರುವುದಾಗಿ ವಿವರ ನೀಡುತ್ತಿದ್ದಾರೆ. ಆದರೆ ವಾಸ್ತವವೇ ಬೇರೆ ಇದೆ ಎಂದರು.

2010 ರಿಂದ 2014ರವರೆಗೂ 30 ಸಾವಿರ ಬೃಹತ್ ಕಟ್ಟಡಗಳಿಗೆ ನಕ್ಷೆ ಮಂಜೂರು ಮಾಡಲಾಗಿದೆ. ಅವುಗಳಿಗೆ ಕಮ್ಮೆನ್ಸ್ಮೆಂಟ್ ಹಾಗೂ ಆಕ್ಯುಪೆನ್ಸಿ ಸರ್ಟಿಫಿಕೇಟ್ಗಳನ್ನು ನೀಡಿ, ಶುಲ್ಕ ವಸೂಲಿ ಮಾಡಿದ್ದರೆ ಸಾವಿರಾರು ಕೋಟಿ ರುಪಾಯಿ ಬಿಬಿಎಂಪಿ ಬೊಕ್ಕಸಕ್ಕೆ ಸಿಗುತ್ತಿತ್ತು. ಆದರೆ, ಅಧಿಕಾರಿಗಳು 30 ಸಾವಿರ ಕಟ್ಟಡಗಳಲ್ಲಿ ಶೇ. 90ರಷ್ಟು ಕಟ್ಟಡಗಳಿಗೆ ನಕಲಿ ಸರ್ಟಿಫಿಕೇಟ್ಗಳನ್ನು ನೀಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದರು.

ಬಿಬಿಎಂಪಿಯಲ್ಲಿರುವ ಎರವಲು ಸೇವೆ ಅಧಿಕಾರಿಗಳಿಂದಲೇ ಇಂಥ ಅಕ್ರಮಗಳು ನಡೆಯುತ್ತಿದೆ. ಲೋಕೋಪಯೋಗಿ ಮತ್ತು ಕೆಎಸ್ಎಫ್ಸಿಯಿಂದ ಬಂದ ಸುಮಾರು 79 ಅಧಿಕಾರಿಗಳು ನಗರ ಯೋಜನೆ ವಿಭಾಗದಲ್ಲಿದ್ದಾರೆ. ನಗರ ಯೋಜನೆಗೂ ಈ ಅಧಿಕಾರಿಗಳಿಗೂ ಸಂಬಂಧವೇ ಇಲ್ಲ. ಆದರೂ ಪ್ರಭಾವ ಬೀರಿ ಆಯಕಟ್ಟು ಸ್ಥಳಗಳಲ್ಲಿಯೇ ಇದ್ದಾರೆ.

ಕೂಡಲೇ ಅವರನ್ನು ತವರು ಸಂಸ್ಥೆಗಳಿಗೆ ವಾಪಸ್ ಕಳುಹಿಸಬೇಕು. ನಗರದಲ್ಲಿ 44 ವಾರ್ಡ್ಗಳಲ್ಲಿ ಸಹಾಯಕ ಎಂಜಿನಿಯರ್ಗಳಿಲ್ಲ. ಅಲ್ಲಿಗೆ ನಿಯೋಜಿಸಿ. ರಾಜಕಾಲುವೆ ವಿಭಾಗದಲ್ಲಿ 80 ಎಂಜನಿಯರ್ಗಳ ಕೊರತೆ ಇದೆ. ಅಲ್ಲಿಗಾದರೂ ವರ್ಗಾಹಿಸಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕ ಮಂಜುನಾಥ ರೆಡ್ಡಿ, ಕಾಂಗ್ರೆಸ್ನ ಮಲ್ಲೇಶ್ ಗುಣಶೇಖರ್, ಜೆಡಿಎಸ್ನ ಪ್ರಕಾಶ್ ಹಾಗೂ ಬಿಜೆಪಿಯ ಅಶ್ವತ್ ನಾರಾಯಣಗೌಡ ದನಿಗೂಡಿಸಿ ತನಿಖೆಗೆ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com