
ಬೆಂಗಳೂರು: ಬೆಂಗಳೂರಿನ ಪ್ರಗತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಗೌತಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಮಹೇಶ್ ನನ್ನು ನ್ಯಾಯಾಲಯ ಏಪ್ರಿಲ್ 10 ರವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಪ್ರಗತಿ ಟ್ರಸ್ಟ್ ನ ಮುಖ್ಯಸ್ಥ ಸೋಮ್ ಸಿಂಗ್ , ಕಾಲೇಜಿನ ಪ್ರಾಂಶಪಾಲ ಪ್ರಶಾಂತ್ ಅವರನ್ನೊಳಗೊಂಡಂತೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಕೋರಮಂಗಲದಲ್ಲಿರುವ ನ್ಯಾಯಮೂರ್ತಿ ಸಂತೋಷ್ ಕುಮಾರ್ ಅವರ ನಿವಾಸಕ್ಕೆ ಆರೋಪಿಗಳನ್ನು ಕರೆದೊಯ್ದು ಹಾಜರು ಪಡಿಸಲಾಯಿತು.
ಈ ವೇಳೆ ತಮ್ಮ ವಾದವನ್ನು ಮಂಡಿಸಿದ ಪೊಲೀಸರು ಆರೋಪಿ ಮಹೇಶ್ ನ ಬಳಿ ಇರುವ ಪಿಸ್ತೂಲ್ ಹೇಗೆ ಬಂತು. ಅದನ್ನು ಯಾರು ಈತನಿಗೆ ತಂದುಕೊಟ್ಟರು. ಮತ್ತು ಈತ ಯಾತಕ್ಕಾಗಿ ಪಿಸ್ತೂಲು ಖರೀದಿ ಮಾಡಿದ್ದ ಎಂಬಿತ್ಯಾದಿ ಅಂಶಗಳ ಕುರಿತು ಆರೋಪಿ ಮಹೇಶ್ ನನ್ನು ವಿಚಾರಣೆಗೊಳಪಡಿಸಬೇಕಿದೆ. ಹೀಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರ ಬಳಿ ಮನವಿ ಮಾಡಿದರು. ಹೀಗಾಗಿ ನ್ಯಾಯಾಧೀಶರಾದ ಸಂತೋಷ್ ಕುಮಾರ್ ಅವರು, ಆರೋಪಿ ಮಹೇಶ್ ನನ್ನು ಏಪ್ರಿಲ್ 10ರವರೆಗೆ ಪೊಲೀಸರ ವಶಕ್ಕೆ ನೀಡಿದರು.
ಸೋಮ್ ಸಿಂಗ್ ಮತ್ತು ಪ್ರಶಾಂತ್ ಗೆ ಜಾಮೀನು
ಇನ್ನು ಇದೇ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಬಂಧಿತರಾಗಿದ್ದ ಪ್ರಗತಿ ಟ್ರಸ್ಟ್ ನ ಮುಖ್ಯಸ್ಥ ಸೋಮ್ ಸಿಂಗ್ , ಕಾಲೇಜಿನ ಪ್ರಾಂಶಪಾಲ ಪ್ರಶಾಂತ್ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ವೇಳೆ ಮಹತ್ವದ ಮಾಹಿತಿ ಬಾಯಿ ಬಿಟ್ಟ ಮಹೇಶ್
ಪ್ರಗತಿ ಕಾಲೇಜಿನ ಪಿಯು ವಿದ್ಯಾರ್ಥಿನಿ ಗೌತಮಿಯನ್ನು ಗುಂಡಿಟ್ಟು ಕೊಂದಿದ್ದ ಆರೋಪಿ ಮಹೇಶ್ ಪಿಸ್ತೂಲ್ ಅನ್ನು ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಖರೀದಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಮಹೇಶ್ ಸುಮಾರು ಎರಡು ವರ್ಷಗಳ ಹಿಂದೆಯೇ 9ಎಂಎಂ ನಾಡ ಪಿಸ್ತೂಲ್ ಅನ್ನು ಖರೀದಿಸಿದ್ದ. ಆದರೆ ತಾನು ಯಾರಿಂದ ಖರೀದಿಸಿದ್ದೇನೆ ಎಂಬ ವಿಷಯವನ್ನು ಬಹಿರಂಗಗೊಳಿಸಿಲ್ಲ. ಮತ್ತೊಂದು ಮಾಹಿತಿ ಪ್ರಕಾರ ಮಹೇಶ್ ಗೆ ಕಲಬುರಗಿ ಮೂಲದ ವ್ಯಕ್ತಿಯಿಂದ ಈ ಪಿಸ್ತೂಲ್ ಖರೀದಿಸಿದ್ದಾನೆ ಎಂದು ತಿಳಿದು ಬಂದಿದೆ.
Advertisement