
ಬೆಂಗಳೂರು: ಐಪಿಎಸ್ ಅಧಿಕಾರಿ ಡಾ. ಪಿ. ರವೀಂದ್ರನಾಥ್ ಅವರು ಕಾಫಿ ಶಾಪ್‍ನಲ್ಲಿ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿದ ಪ್ರಕರಣ ರಾಜಿ ಸಂಧಾನದ ಮೂಲಕ ಸುಖಾಂತ್ಯ ಕಂಡಿದೆ.
ತನ್ನ ಒಪ್ಪಿಗೆ ಇಲ್ಲದೇ ಫೋಟೋ ತೆಗೆದಿದ್ದಾರೆಂದು ಆರೋಪಿಸಿ ಪತ್ರಕರ್ತೆಯೊಬ್ಬಳು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ತಮ್ಮ ವಿರುದ್ಧದ ಪ್ರಕರಣ ರದ್ದು ಪಡಿಸುವಂತೆ ಕೋರಿ ಡಾ.ರವೀಂದ್ರನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ವೇಣುಗೋಪಾಲ್ ಗೌಡ ಅವರಿದ್ದ ಪೀಠದ ಮುಂದೆ, ದೂರುದಾರರು ಹಾಗೂ ಅಧಿಕಾರಿ ಇಬ್ಬರ ನಡುವಿನ ಭಿನ್ನಾಭಿಪ್ರಾಯ ವೈಯಕ್ತಿಕವಾಗಿದೆ. ಯಾವುದೇ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣ ಹೂಡುವುದಿಲ್ಲ. ಇಬ್ಬರೂ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಿಕೊಳ್ಳಲು ಇಚ್ಛಿಸುವುದಾಗಿ ಪೀಠಕ್ಕೆ ರಾಜಿ ಪತ್ರ ಸಲ್ಲಿಸಿದರು.
ಅಲ್ಲದೇ ದೂರು ನೀಡಿದ್ದ ಯುವತಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿ ಅಧೀನ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದಲ್ಲಿ ಕಾನೂನು ಹೋರಾಟ ಮುಂದುವರಿಸವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಅಂಶವನ್ನು ಪರಿಗಣಸಿದ ಏಕಸದಸ್ಯ ಪೀಠ, 2008ರ ಮಾರ್ಚ್‍ನಲ್ಲಿ ಮದನ್ ಮೋಹನ್ ಅಬ್ಬೋಟ್ ಮತ್ತು ಪಂಜಾಬ್ ಸರ್ಕಾರದ ವಿರುದ್ದ ಪ್ರಕರಣದಲ್ಲಿ ನೀಡಿದ್ದ ತೀರ್ಪು ಆಧರಿಸಿ, ಅಧಿಕಾರಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 509ರಲ್ಲಿ (ಮಹಿಳೆಯ ಗೌರವಕ್ಕೆ ಧಕ್ಕೆ) ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿ, ರವೀಂದ್ರನಾಥ್ ಸಲ್ಲಿಸಿದ ಅರ್ಜಿ ಮಾನ್ಯ ಮಾಡಿದೆ.
ಪ್ರಕರಣದ ಹಿನ್ನೆಲೆ ಏನು?
ಕಳೆದ ವರ್ಷ 2014ರ ಮೇ 26ರಂದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಕಾಫಿ ಶಾಪ್‍ನಲ್ಲಿ ತನ್ನ ಒಪ್ಪಿಗೆ ಇಲ್ಲದೇ ಆಗ ಎಡಿಜಿಪಿ ಆಗಿದ್ದ ಡಾ. ರವೀಂದ್ರನಾಥ್ ತಮ್ಮ ಮೊಬೈಲ್‍ನಿಂದ ಪತ್ರಕರ್ತೆಯೊಬ್ಬಳ ಫೋಟೋ ಸೆರೆಹಿಡಿದಿದ್ದರು. ಅದನ್ನು ಅರಿತ ಪತ್ರಕರ್ತೆ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಭಾರತೀಯ ದಂಡ ಸಂಹಿತೆ ಸೆಕ್ಷನ್ 509ರಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿ ಪ್ರಕರಣದಲ್ಲಿ ತಮ್ಮದೇನು ಪಾತ್ರ ಇಲ್ಲವಂಬಂತೆ ವರ್ತಿಸಲು ಆರಂಭಿಸಿದ್ದರು.
ಕಾಫಿ ಶಾಪ್‍ನಲ್ಲಿ ಮೊದಲನೇ ಮಹಡಿಯಲ್ಲಿ ಕುಳಿತಿದ್ದ ಒಬ್ಬಾತ ತಮ್ಮ ಮೊಬೈಲ್ ಅನ್ನು ಕಸಿದುಕೊಂಡು ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಘಟನೆಯ ನಂತರ ಮಾಧ್ಯಮವದವರಿಗೆ ಹೇಳಿಕೆ ನೀಡಿದ್ದು, ಇಲ್ಲಿ ಸ್ಮರಿಸಬಹುದು. ಮಾತ್ರವಲ್ಲದೇ ತನಿಖೆಯ ಹಾದಿ ತಪ್ಪಿಸಲು ರವೀಂದ್ರನಾಥ್ ಜಾತಿ ಬಣ್ಣ ಕೂಡ ಕಟ್ಟಿದ್ದರು. ಅಲ್ಲದೇ, ಮಾಧ್ಯಮಗಳ ಮುಂದೆ ಅಸಂಬದ್ದ ಹೇಳಿಕೆ ನೀಡಿ ಪಾರಾಗಲು ಕೂಡ ಪ್ರಯತ್ನಿಸಿದ್ದರು. ರವೀಂದ್ರನಾಥ್ ಮಾಡಿದ್ದ ತಪ್ಪಿನಿಂದಾಗಿ ಒಂದು ಹಂತದಲ್ಲಿ ಪೊಲೀಸ್ ಅಧಿಕಾರಿಗಳ ಸಂಘರ್ಷಕ್ಕೂ ಸಹ ಇದು ನಾಂದಿ ಹಾಡಿತ್ತು. ಆರೋಪಕ್ಕೆ ಸಂಬಂಧಿಸಿದಂತೆ ಜೂ.25ರಂದು ರವೀಂದ್ರನಾಥ್ ಅವರಿಗೆ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಲಯ ಜಾಮೀನು ರಹಿತ ಬಂಧನದ ವಾರೆಂಟ್ ಕೂಡ ಜಾರಿ ಮಾಡಿತ್ತು.
ಇದನ್ನು ಪ್ರಶ್ನಿಸಿ ಡಾ.ರವೀಂದ್ರನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾ. ವೇಣುಗೋಪಾಲ್ ಗೌಡ ಅವರಿದ್ದ ಪೀಠ ಡಾ.ರವಿಂದ್ರನಾಥ್ ಅವರ ವರ್ತನೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಗೌರವಯುತ ಹುದ್ದೆಯಲ್ಲಿರುವ ಒಬ್ಬ ಅಧಿಕಾರಿ ನಡೆದುಕೊಳ್ಳುವ ರೀತಿಯೇ ಅದು? ಘಟನೆ ನಡೆದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಅವರು ತೋರಿದವರ್ತನೆ ನಿಜಕ್ಕೂ ಆಕ್ಷೇಪಾರ್ಹ. ಮಾಧ್ಯಮಗಳ ಎದುರು ಆ ರೀತಿ ವರ್ತಿಸುತ್ತಿದ್ದರೆ ಜನ ನೋಡುತ್ತಾರೆ ಎಂಬ ಅರಿವು ಅವರಿ-ಗೆ ಇರಲಿಲ್ಲವೇ? ಮಾಧ್ಯಮಗಳ ಎದುರು ಆ ರೀತಿ ಯಾರಾದರೂ ವರ್ತಿಸುತ್ತಾರೆಯೇ? ಎಂದು ಪೀಠ ಕಿಡಿಕಾರಿತ್ತು.
Advertisement