
ಮಾಲೂರು: ವಿಷಾಹಾರ ಸೇವಿಸಿದರೂ ದೇಸಿ ಗೋವು ಕೊಡುವ ಹಾಲು, ಗೋಮೂತ್ರ ಅಮೃತವೇ ಆಗಿರುತ್ತದೆ ಎಂದಿದ್ದಾರೆ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ.
ಮಾಲೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಹನುಮಜಯಂತಿ ಕಾರ್ಯಕ್ರಗೋಮದಲ್ಲಿ ಶ್ರೀಗಳು ಮಾತನಾಡಿ, ಇಲ್ಲಿನ ಮಠದ ಭಕ್ತರೊಬ್ಬರು ಬಂದು ಈ ಪ್ರದೇಶದ ನೀರು ಕಲುಷಿತವಾಗಿದೆ. ಇದನ್ನು ಕುಡಿದ ಗೋವುಗಳ ಹಾಲು ವಿಷವಾಗಿ ಪರಿವರ್ತಿತವಾಗುತ್ತಿವೆ. ಈ ಬಗ್ಗೆ ಜಾಗೃತಿಯ ಅವಶ್ಯವಿದೆ ಎಂದು ಕೇಳಿಕೊಂಡರು.
ನಿಮ್ಮ ಮಾತಿನಲ್ಲಿ ಒಂದು ತಿದ್ದುಪಡಿ ಮಾಡಿಕೊಳ್ಳಿ, ಜೆರ್ಸಿಯಂತಹ ತಳಿಗಳ ಹಾಲುಗಳಲ್ಲಿ ವಿಷ ಬಂದರೂ ಬರಬಹುದು. ದೇಸಿ ತಳಿ ಗೋವುಗಳಲ್ಲಿ ಸಾಧ್ಯವಿಲ್ಲ. ಅವು ಸದಾ ಅಮೃತವನ್ನೇ ನೀಡುತ್ತವೆ ಎಂದು ಸ್ವಾಮೀಜಿ ಭಕ್ತರ ಆತಂಕ ನಿವಾರಿಸಿದರು. ವಿಷಕಂಠ ಗೋವುಗಳು: ಸಂತರಿಗೆ ಎಷ್ಟೇ ಕಷ್ಟ ಕೊಟ್ಟರೂ ಅವರು ಸಮಾಜಕ್ಕೆ ಅಮೃತವನ್ನು ಹೇಗೆ ಕೊಡುತ್ತಾರೋ ಹಾಗೇ ದೇಸಿ ತಳಿಯ ಗೋವುಗಳು ಎಂಥ ವಿಷಾಹಾರವನ್ನೇ ಸೇವಿಸಲಿ ಅವುಗಳು ನೀಡುವ ಉತ್ಪನ್ನ ಅಮೃತದಂತಿರುತ್ತದೆ. ಗೋವುಗಳು ವಿಷಕಂಠನಿದ್ದಂತೆ. ಶಿವ ವಿಷವುಂಡು ಹೇಗೆ ಗಂಟಲಿನಲ್ಲಿ ಭದ್ರವಾಗಿಟ್ಟು ಸನ್ಮಂಗಳ ಉಂಟು ಮಾಡುತ್ತಾನೋ ಅದೇ ರೀತಿ, ಗೋವುಗಳು ವಿಷವನ್ನು ಮಾಂಸದಲ್ಲಿಟ್ಟುಕೊಂಡಿರುತ್ತವೆ. ಹೀಗಾಗಿ ದೇಸಿ ಹಸುಗಳ ಮಾಂಸ ವಿಷಮಯವಾಗಿರುತ್ತದೆ ಎಂದು ಎಚ್ಚರಿಸಿದರು.
ಗೋ ಮಾತೆ ಸಂರಕ್ಷಿಸಿ: ಜಯಂತಿ ಎಂದರೆ ಗೆಲುವು ಎಂದರ್ಥ. ಹನುಮಜಯಂತಿ ಎಂದರೆ ಆಂಜನೇಯ ದೇವರ ಗೆಲುವು. ಆಂಜನೇಯ ತನಗಾಗಿ ಯುದ್ಧ ಮಾಡಿರುವ ಉದಾಹರಣೆ ಇಲ್ಲ. ಶ್ರೀ ರಾಮನಿಗಾಗಿ, ಸೀತೆಗಾಗಿ ಯುದ್ಧ ಮಾಡಿದವನು. ಅಂದು ಸೀತಾಮಾತೆಗೆ ಯಾವ ಸ್ಥಿತಿ ಇತ್ತೋ ಅಂಥ ಸ್ಥಿತಿ ಇಂದು ಗೋಮಾತೆಗೆ ಎದುರಾಗಿದೆ. ಈ ಸ್ಥಿತಿಯಿಂದ ಗೋಮಾತೆಯನ್ನು ಸಂರಕ್ಷಿಸಲು ನಮ್ಮ, ನಿಮ್ಮೊಳಗೆ ಇರುವ ಆಂಜನೇಯ ಏಳಬೇಕು. ನಾವು- ನೀವು ರಾಮಾಯಣದ ಎರಡು ಪಾತ್ರಗಳಿದ್ದಂತೆ.
ಮಲಗಿದರೆ ಕುಂಭಕರ್ಣ, ಎದ್ದರೆ ಹನುಮಂತ. ಎಲ್ಲವೂ ಕಳೆದು ಹೋಗುವ ಮೊದಲೇ ನಾವು ಏಳಬೇಕು. ಗೋಮಾತೆ ಸಂರಕ್ಷಣೆ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು. ಉದ್ಯಮಿ ಮಹಾವೀರ ಸೋನಿಕಾ, ಸಾವಯವ ಕೃಷಿ ತಜ್ಞ ನಾರಾಯಣ ರೆಡ್ಡಿ, ತಬಲಾ ನಾರಾಯಣಪ್ಪ, ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ, ಕಾಮದುಘಾ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಗೋಶಾಲಾ ಕಾರ್ಯದರ್ಶಿ ಜಿ.ಟಿ. ದಿವಾಕರ, ಗೋಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷ ಮುರಳೀಧರ ಇದ್ದರು.
Advertisement