ಕರವೇ ಕೆಂಡಾಮಂಡಲ

ಬಿಬಿಎಂಪಿ ಮೂರು ಭಾಗಗಳನ್ನಾಗಿ ವಿಂಗಡಿಸಿದಲ್ಲಿ ಕನ್ನಡಿಗರು ಪರಕೀಯರಾಗಬೇಕಾಗುತ್ತದೆ. ಬೆಳಗಾವಿಯಲ್ಲಿ ಕನ್ನಡಿಗರು ಅನುಭವಿಸುತ್ತಿರುವ...
ಕರವೇ ಪ್ರತಿಭಟನೆ
ಕರವೇ ಪ್ರತಿಭಟನೆ

ಬೆಂಗಳೂರು: ಬಿಬಿಎಂಪಿ ಮೂರು ಭಾಗಗಳನ್ನಾಗಿ ವಿಂಗಡಿಸಿದಲ್ಲಿ ಕನ್ನಡಿಗರು ಪರಕೀಯರಾಗಬೇಕಾಗುತ್ತದೆ. ಬೆಳಗಾವಿಯಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಸ್ಥಿತಿಯನ್ನೇ ಬೆಂಗಳೂರಿಗರೂ ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಬಾರದು ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದರು.

ಬಿಬಿಎಂಪಿ ವಿಭಜನೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ನಾರಾಯಣಗೌಡ ಮಾತನಾಡಿ, ಸರ್ಕಾರ ಮೊಂಡುತನದಿಂದ ಅಖಂಡವಾಗಿರುವ ಬೆಂಗಳೂರನ್ನು ಒಡೆಯಲು ಯತ್ನಿಸುತ್ತಿದೆ. ಇದಕ್ಕೆ ಕನ್ನಡಿಗರು ಅವಕಾಶ ನೀಡಬಾರದು. ರಾಜಧಾನಿಯಲ್ಲಿ ಇರುವ ಪರಿಸ್ಥಿತಿ ನೋಡಿದರೆ ಮುಂದೆ ಸಾಮಾಜಿಕ ಅಸಮತೋಲನ ಉಂಟಾಗಿ ಕನ್ನಡಿಗರೇ ಪರಕೀಯರಾಗ ಬೇಕಾಗುತ್ತದೆ. ಬಿಬಿಎಂಪಿಯನ್ನು ವಿಭಜಿಸಿದರೆ ಮುಂದಾದರೆ ಅದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತೆ ಮತ್ತು ಒಡೆದು ಆಳುವ ನೀತಿ ಎಂದರು.

ಅನ್ಯಭಾಷಿಕರಿಗೆ ಮಣೆ

ಬೆಂಗಳೂರಿನಲ್ಲಿ ಬಹುತೇಕ ಅನ್ಯಭಾಷಿಗರು ನೆಲೆಸಿದ್ದಾರೆ. ಹಾಗಾಗಿ ಬಿಬಿಎಂಪಿ ಭಾಗವಾದರೆ ಕನ್ನಡಿಗರು ಮೇಯರ್ ಆಗಲು ಸಾಧ್ಯವಿಲ್ಲ. ಈಗಾಗಲೇ ಬೆಳಗಾವಿಯಲ್ಲಿ ಎಂಇಎಸ್  ಕಾರ್ಯಕರ್ತರ ಜತೆ ಗುದ್ದಾಟ ನಡೆಸುತ್ತಿರುವಂತೆ ಇಲ್ಲಿಯೂ ಅನ್ಯಭಾಷಿಗರ ಜತೆ ಸಂಘರ್ಷ ನಡೆಸಬೇಕಾಗುತ್ತದೆ. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಸದ್ಯಕ್ಕೆ ತಾವು ಪ್ರತಿಭಟನೆ ಕೈಬಿಡುವುದಿಲ್ಲ. ಪ್ರತಿನಿತ್ಯ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತೇವೆ. ಮಂಗಳವಾರ ಹಾಗೂ ಬುಧವಾರ ಕ್ರಮವಾಗಿ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಿಎಂ ಪ್ರತಿಕೃತಿ ದಹನ ಹಾಗೂ ಯಾವುದೇ ಕಾರ್ಯಕ್ರಮಕ್ಕೆ ಸಿಎಂ, ಸಚಿವರು ಹಾಜರಾದಲ್ಲಿ ಕಪ್ಪುಬಟ್ಟೆ ಕಟ್ಟಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.

ಬಂಧನ, ಬಿಡುಗಡೆ
ಬಿಬಿಎಂಪಿ ವಿಭಜನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ಕೆಲವು ಕಾಲ ಪೊಲೀಸ್ ಹಾಗೂ ಪ್ರತಿಭಟನಾಕಾರರ ಜತೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸುಮಾರು 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಬಿಡುಗಡೆ ಮಾಡಿದರು. ಗಾಂಧಿನಗರದಿಂದ ರೇಸ್‍ಕೋರ್ಸ್ ರಸ್ತೆ ಮಾರ್ಗವಾಗಿ ಮಹಿಳಾ ಕಾರ್ಯಕರ್ತೆಯರು ಸೇರಿದಂತೆ ನೂರಾರು ಮಂದಿ ಕರವೇ ಕಾರ್ಯಕರ್ತರು ಸರ್ಕಾರದ ಕ್ರಮ ಖಂಡಿಸಿ, ಸರ್ಕಾರದ ವಿರುದ್ಧ ಧಿಕ್ಕಾರದ  ಷಣೆ ಕೂಗಿ, ರ್ಯಾಲಿ ನಡೆಸಿದರು. ಈ ವೇಳೆ ಕೆಲಕಾಲ ತಳ್ಳಾಟ-ನೂಕಾಟ ನಡೆದು, ನಂತರ ನೂರಾರು ಮಂದಿಯನ್ನು ಬಂಧಿಸಿ ಕರೆದೊಯ್ಯಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com