
ನಂದಿನಿ ಲೇಕ್ ವ್ಯೂವ್ ಅಪಾರ್ಟ್‍ಮೆಂಟ್ ರಿಟ್ ಅರ್ಜಿ ವಿಚಾರಣೆ
ಬೆಂಗಳೂರು: ಸಾರಕ್ಕಿ ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನಗೊಂಡಿದೆ.
ತಮ್ಮ ಕಟ್ಟಡ ತೆರವುಗೊಳಿಸದಂತೆ ನಂದಿನಿ ಲೇಕ್ ವ್ಯೂವ್ ಅಪಾರ್ಟ್‍ಮೆಂಟ್ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ದಾಖಲಿಸಿತ್ತು. ವಿಚಾರಣೆ ನಡೆಸಿದ್ದ ಹಿರಿಯ ನ್ಯಾ.ಎಸ್.ಕೆ.ಮುಖರ್ಜಿ
ಮತ್ತು ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿ ಏ.30ರವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಆದರೆ, ಅಪಾರ್ಟ್‍ಮೆಂಟ್‍ನ ಪರ ವಕೀಲರು ಸಂಜೆ ವೇಳೆಗೆ ಕೋರ್ಟ್‍ಗೆ ಹಾಜರಾಗಿ ಹೈಕೋರ್ಟ್ ಬೆಳಿಗ್ಗೆ ನೀಡಿದ್ದ ಆದೇಶ ಉಲ್ಲಂಘಿಸಿ ಕಟ್ಟಡ ನೆಲಸಮಗೊಳಿ ಸುತ್ತಿದ್ದಾರೆಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.
ಇದರಿಂದ ಕೆಂಡಾಮಂಡಲವಾದ ಪೀಠ, ಕಟ್ಟಡ ನೆಲಸಮಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದರೆ, ಕಟ್ಟಡ ನೆಲಸಮಗೊಳಿಸಿದ ನಂತರ ಯಥಾಸ್ಥಿತಿ ಕಾಯ್ದುಕೊಳ್ಳುತ್ತೀರಾ? ಹೀಗಾದರೆ ಜನ ನ್ಯಾಯಾಲಯದ ಮೇಲೆ ಹೇಗೆ ನಂಬಿಕೆ ಇಟ್ಟಿಕೊಳ್ಳುತ್ತಾರೆ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತು. ಅಲ್ಲದೆ, ನ್ಯಾಯಾಲಯದ ಆದೇಶವನ್ನು ಬದಿಗೊತ್ತಿ ನಂದಿನಿ ಲೇಕ್ ವ್ಯೂ ಅಪಾರ್ಟ್‍ಮೆಂಟ್ ತೆರವು ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಾ.ಬಿ.ಆರ್. ದಯಾನಂದ್ ಅವರು ಶುಕ್ರವಾರ ಕೋರ್ಟ್‍ಗೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿತು. ವಿಚಾರಣೆ ವೇಳೆ ಅಪಾರ್ಟ್‍ಮೆಂಟ್ ಪರ ವಕೀಲರು ವಾದಿಸಿ, ಕೆಲ ಸರ್ಕಾರಿ ಅಧಿಕಾರಿಗಳು ನಂದಿನ ಲೇಕ್ ವ್ಯೂ ಅಪಾರ್ಟ್‍ಮೆಂಟ್ ಕಾಂಪೌಂಡ್, ಟ್ರಾನ್ಸ್ ಫಾರ್ಮರ್‍ಗಳನ್ನು
ತೆರವುಗೊಳಿಸಿದ್ದಾರೆ. ಬೆಳಿಗ್ಗೆ ತೆರವುಗೊಳಿಸದಂತೆ ಆದೇಶಿಸಿದ್ದರೂ ಅಧಿಕಾರಿಗಳು ಅದನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇಲ್ಲಿ ಏನಾಗುತ್ತಿದೆ? ನ್ಯಾಯಾಂಗದ ನಿರ್ದೇಶನಕ್ಕೆ ಬೆಲೆ ಇಲ್ಲವೇ? ಸರ್ಕಾರಿ ಅಧಿಕಾರಿಗಳು ಮಾಡಿದ್ದು ಸರಿಯಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು
ನ್ಯಾಯಾಲಯದಲ್ಲಿರುವಾಗ ಯಾರು ಕಟ್ಟಡ ನೆಲಸಮಗೊಳಿಸಿದವರು ಎಂದು ಪೀಠ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಬಿಎಂಟಿಎಫ್ ಅಧಿಕಾರಿಗಳು ಕಟ್ಟಡ ನೆಲಸಮಕ್ಕೆ ಮುಂದಾಗಿದ್ದಾರೆ ಎಂದರು.
ಬಿಎಂಟಿಎಫ್ ಅಧಿಕಾರಿಗಳು ಸರ್ಕಾರದ ಪ್ರತಿನಿಧಿಗಳಲ್ಲವೇ? ಎಂದು ಪೀಠ ಪ್ರಶ್ನಿಸಿ ಶುಕ್ರವಾರ ತಹಸೀಲ್ದಾರ್ ಖುದ್ದು ಕೋರ್ಟ್‍ಗೆ ಹಾಜರಾಗುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
Advertisement