ತೆರವು ಕಾರ್ಯಾಚರಣೆಗೆ ಕಾರ್ಪೋರೇಟರ್ ಅಡ್ಡಿ, ಬೆದರಿಕೆ

ಸಾರಕ್ಕಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಸದಸ್ಯ ರಮೇಶ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ...
ಸಾರಕ್ಕಿ ಒತ್ತುವರಿ ತೆರವು ಕಾರ್ಯಾಚರಣೆ
ಸಾರಕ್ಕಿ ಒತ್ತುವರಿ ತೆರವು ಕಾರ್ಯಾಚರಣೆ
Updated on

ಬೆಂಗಳೂರು: ಸಾರಕ್ಕಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಸದಸ್ಯ ರಮೇಶ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರವೂ ನಡೆಯಿತು. ಬೆಳಗ್ಗೆ 7 ಗಂಟೆಯಿಂದಲೇ ಕಾರ್ಯಾಚರಣೆ ಆರಂಭವಾಯಿತು. ಸುಮಾರು 12 ಗಂಟೆ ವೇಳೆಗೆ ಬಂದ ಬಿಬಿಎಂಪಿ ಸದಸ್ಯ ರಮೇಶ್ ಹಾಗೂ ಅವರ ಬೆಂಬಲಿಗರು ಅಧಿಕಾರಿಗಳಿಗೆ ಬೆದರಿಕೆ ಹಾಕಿದರು. ಮನೆಗಳನ್ನು ಏಕೆ ಒಡೆಯುತ್ತೀರಿ? ಪರ್ಯಾಯವಾಗಿ ಜನರಿಗೆ ಏನು ವ್ಯವಸ್ಥೆ ಮಾಡಿದ್ದೀರಿ? ತೆರವು ಯಾರು ಅನುಮತಿ ನೀಡಿದ್ದು? ಎಂದು ಪ್ರಶ್ನೆಗಳನ್ನು ಕೇಳಿದ ರಮೇಶ್, ಅಧಿಕಾರಿಗಳ ಕಾರ್ಯಾಚಾರಣೆಗೆ ಅಡ್ಡಗಾಲು ಹಾಕಿದರು. ಅದರೆ ಇದರಿಂದ ಅಧಿಕಾರಿಗಳು ವಿಚಲಿತರಾಗಲಿಲ್ಲ. ಜಿಲ್ಲಾಧಿಕಾರಿ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಕಾರ್ಯಾಚರಣೆ ನಡೆಯುತ್ತಿದೆ. ಅಡ್ಡಿಪಡಿಸಬಾರದು ಎಂದು ಎಚ್ಚರಿಸಿದರು.

ಬಂಧನ, ಬಿಡುಗಡೆ
ಆದರೆ ಇಷ್ಟಕ್ಕೇ ಮಣಿಯದ ರಮೇಶ್, ಜನರಿಗೆ ಪರ್ಯಾಯವಾಗಿ ಏನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲೇಬೇಕೆಂದು ಒತ್ತಾಯ ಮಾಡಿದರು. ತಾನು ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದು, ಜನಪ್ರತಿನಿಧಿಗಳಿಗೆ ತಿಳಿಸದೆ ಹೇಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಈ ವೇಳೆ ಬೆಂಬಲಿಗನೊಬ್ಬ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಕಾರ್ಯಾಚರಣೆಗೆ ಅಡ್ಡಿ ಮಾಡಿದ್ದರಿಂದ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಕೆಲಕಾಲ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಆಗ ಅಲ್ಲಿಂದ ಎಲ್ಲರೂ ಕಾಲ್ಕಿತ್ತರು.

ಹಿಟಾಚಿ ಮೇಲೆ ಕಲ್ಲು
ಮೂರು ತಂಡಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಎರಡನೇ ದಿನ 2 ಹಿಟಾಚಿಗಳನ್ನು ನೀಡಲಾಯಿತು. ಇಲ್ಲಿನ ವಸತಿ ಸಂಕೀರ್ಣವೊಂದನ್ನು ಒಡೆಯುವಾಗ ಹಿಟಾಚಿ ಮೇಲೆ ಕಲ್ಲು ಬಿದ್ದಿದ್ದರಿಂದ ಕಾರ್ಯಾಚರಣೆಗೆ ಕೆಲಕಾಲ ಅಡ್ಡಿಯಾಯಿತು. ಎರಡು ಅಂತಸ್ತುಗಳಿದ್ದ ಈ ಕಟ್ಟಡವನ್ನು ಕೆಡವಲು ಮುಂದಾದಾಗ ಹಿಟಾಚಿ ಮೇಲೆಯೇ ದೊಡ್ಡ ಕಲ್ಲುಗಳು ಬಿದ್ದವು. ಜಿಲ್ಲಾಧುಕಾರಿ ವಿ.ಶಂಕರ್, ಅಪರ ಜಿಲ್ಲಾ„ಕಾರಿ ಆರ್.ವೆಂಕಟಾಚಲಪತಿ ಕಾರ್ಯಾಚರಣೆ ವೀಕ್ಷಿಸಿದರು.

ಬಫರ್‍ಜೋನ್ ಒತ್ತುವರಿಗೆ ನೋಟಿಸ್
ಕೆರೆಯ 120 ಅಡಿ ದೂರದ ಮಿತಿಯಲ್ಲಿ ಕಟ್ಟಡ ನಿರ್ಮಿಸದಿದ್ದರೆ ಮನೆ, ಕಟ್ಟಡಗಳ ಮಾಲಿಕರಿಗೆ ಜಿಲ್ಲಾಡಳಿತ ನೋಟಿಸ್  ನೀಡಲಿದೆ. ಸಾರಕ್ಕಿ ಕೆರೆಯ ಜಾಗದಲ್ಲಿ ಹಲವು ಕಟ್ಟಡಗಳು ಬಫರ್‍ಝೋನ್ ಒಳಗೆಯೇ ಇರುವುದರಿಂದ ಎಲ್ಲ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ವಸತಿ ಸಂಕೀರ್ಣಗಳು 40 ಅಡಿ ದೂರದಲ್ಲಿ ಮಾತ್ರ ಕಟ್ಟಡ ನಿರ್ಮಿಸಿದ್ದು, ಇವುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆಲವು ಕಟ್ಟಡಗಳ ಕಾಂಪೌಂಡ್‍ಗಳು ಬಫರ್‍ಜೋನ್‍ನಲ್ಲಿದ್ದು, ಕಟ್ಟಡಗಳಿಗೆ ಹಾನಿಯಾಗದಿರುವುದರಿಂದ ಕೆಡವಲು ಕ್ರಮ ಕೈಗೊಳ್ಳಲಾಗಿದೆ. ಆದರೆ 2 ರಿಂದ 3 ಅಡಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ತೆರವು ಮಾಡದೆ ವಿನಾಯಿತಿ ನೀಡುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇಂದು ತೆರವು ಇಲ್ಲ
ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಭಾನುವಾರದ ಬದಲು ಸೋಮವಾರ ಮುಕ್ತಾಯಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಶನಿವಾರ ಬಂದ್ ಇರುವುದರಿಂದ ಒಂದು ದಿನದ ಮಟ್ಟಿಗೆ ಕಾರ್ಯಾಚರಣೆ ಸ್ಥಗಿತವಾಗಲಿದೆ. ಬಂದ್ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವುದರಿಂದ ಹಾಗೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಬೇರೆ ಕಡೆಗೆ ನಿಯೋಜಿಸಲಿರುವು ದರಿಂದ ಕಾರ್ಯಾಚರಣೆ ನಿಲ್ಲಿಸಲಾಗುತ್ತದೆ. ಈಗಾಗಲೇ ಕೆಡವಿದ ಕಟ್ಟಡಗಳ ಕಲ್ಲು, ಮಣ್ಣನ್ನು ತೆಗೆಯುವ ಕೆಲಸ ಮಾತ್ರ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com