ಬೆಂಗಳೂರು: ಸಾರಕ್ಕಿ ಕೆರೆ ಒತ್ತುವರಿ ತೆರವು ಆರಂಭವಾಗುತ್ತಿದ್ದಂತೆ ಸ್ಥಳೀಯರ ಆಕ್ರಂದನವೂ ಹೆಚ್ಚಿದ್ದು, ಎರಡನೇ ದಿನವೂ ಕೆಲವು ನಿವಾಸಿಗಳ ಅಳಲು ಮುಂದುವರಿದಿತ್ತು.
ಕಾರ್ಯಾಚರಣೆ ಆರಂಭವಾದ ವೇಳೆ ಅಧಿಕಾರಿಗಳ ಮುಂದೆಯೇ ಸ್ಥಳೀಯ ನಿವಾಸಿಗಳ ಗೋಳು ಹೆಚ್ಚಿತ್ತು. ಕೆಲವು ಮನೆಗಳಿಗೆ ಹಾಗೂ ವಸತಿ ಸಂಕೀರ್ಣದ ಮಾಲಿಕರಿಗೆ ವಾರಗಳ ಹಿಂದೆಯೇ ನೋಟಿಸ್ ನೀಡಿ, ಕಾರ್ಯಾಚರಣೆ ನಡೆಸುವ ಮಾಹಿತಿ ನೀಡಲಾಗಿತ್ತು. ಒತ್ತುವರಿ ಜಾಗದಿಂದ ಮನೆ ಖಾಲಿ ಮಾಡಲೇಬೇಕು ಎಂಬ ಅನಿವಾರ್ಯಕ್ಕೆ ಸಿಲುಕಿದ್ದ ಸ್ಥಳೀಯರು ಕೊನೆಯ ದಿನದವರೆಗೂ ವಿನಾಯ್ತಿಯ ಅವಕಾಶವನ್ನೇ ಎದರು ನೋಡುತ್ತಾ ಕುಳಿತಿದ್ದರು.
ಜಿಲ್ಲಾಡಳಿತದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ, ಒಂದೇ ಬಾರಿಗೆ ಮನೆ ಖಾಲಿ ಮಾಡಬೇಕಾದ ಅಸಹಾಯಕತೆಯಿಂದ ನಿವಾಸಿಗಳು ಅಧಿಕಾರಿಗಳನ್ನು ದೂರಿದರು. ಕೆರೆಯ ಕೆಲವು ಭಾಗಗಳಲ್ಲಿ ತಾತ್ಕಾಲಿಕವಾಗಿ ಶೆಡ್ ಗಳನ್ನು ಹಾಕಿಕೊಂಡು ಬದುಕುತ್ತಿದ್ದ ಕೂಲಿ ಕಾರ್ಮಿಕರು ಹಾಗೂ ಕಡು ಬಡವರು ಜಿಲ್ಲಾಡಳಿತದ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದರಿಂದ ತಾವಾಗಿಯೇ ಜಾಗ ಖಾಲಿ ಮಾಡಿದ್ದರು. ಕೆಲವು ತಿಂಗಳ ಹಿಂದೆಯೇ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಯಿತು.
ಆದರೆ, ಸಣ್ಣ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದವರು ಮನೆ ಬಿಡಲು ತಯಾರಿರಲಿಲ್ಲ. ಕೊನೆಯ ಕ್ಷಣದವರೆಗೂ ಹೈಕೋರ್ಟ್ ಆದೇಶ ಅಥವಾ ರಾಜ್ಯ ಸರ್ಕಾರ ಒತ್ತುವರಿ ತೆರವು ಮಾಡದಂತೆ ಏನಾದರೂ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷೆಯಲ್ಲೇ ಕಾಲ ಕಳೆದಿದ್ದರಿಂದ ಹೆಚ್ಚಿನ ನಿವಾಸಿಗಳು ಪರ್ಯಾಯ ಮಾರ್ಗ ಕಾಣದೆ ಗೋಳಾಡಿದರು. ಹೀಗಾಗಿ ಮೊದಲ ದಿನ ಆತಂಕದ ವಾತಾವರಣ ನಿರ್ಮಾಣವಾಗಬಹುದೆಂದು ಸಾಕಷ್ಟು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಮಾಲೀಕರಿಗೆ ಶಾಪ ಹಾಕಿದರು
ಇಲ್ಲಿನ ಪ್ರತಿ ವಸತಿ ಸಂಕೀರ್ಣಗಳಲ್ಲಿ 20-30 ಮನೆಗಳಿದ್ದು, ಹೆಚ್ಚಿನ ನಿವಾಸಿಗಳು ಇನ್ನೂ ಮನೆ ತೊರೆದಿರಲಿಲ್ಲ. ಕಾರ್ಯಾಚರಣೆ ಆರಂಭಿಸುವಾಗ ಕೂಡಲೇ ಮನೆ ತೊರೆಯಿರಿ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಆಕ್ರೋಶವೂ ವ್ಯಕ್ತವಾಯಿತು. 90ರ ದಶಕದಿಂದಲೇ ಇಲ್ಲಿ ಕೆಲವು ಮನೆಗಳು ನಿರ್ಮಾಣವಾಗಿದ್ದು, ಮಾಲಿಕರು ದಾಖಲೆಗಳನ್ನು ನೀಡಿ ಮನೆ ಮಾರಾಟ ಮಾಡಿದ್ದಾರೆ.
ಈ ದಾಖಲೆಗಳನ್ನೂ ಬಿಬಿಎಂಪಿ ಅಧಿಕಾರಿಗಳೇ ನೀಡಿದ್ದು, ಮನೆ ಖರೀದಿಸಲಾಗಿದೆ. ಆದರೆ ಮೂಲ ಮಾಲಿಕರ ಮೇಲೆ ಕ್ರಮ ಕೈಗೊಳ್ಳದೆ ಈಗ ವಾಸಿಸುತ್ತಿರುವ ನಿವಾಸಿಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನೆ ಖಾಲಿ ಮಾಡಿದ ಮಂದಿ ಹೆಂಗಸರು ಮಕ್ಕಳೊಂದಿಗೆ ಪಕ್ಕದಲ್ಲೇ ಇರುವ ನಿವಾಸಗಳಿಗೆ ತೆರಳುವ ಹಾಗೂ ವಾಹನಗಳಲ್ಲಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
Advertisement