ಯೋಜನೆ ಜಾರಿಗೆ ತಿಂಗಳ ಗಡುವು

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕನ್ನಡಪರ ಒಕ್ಕೂಟ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದೆ...
ಕರ್ನಾಟಕ ಬಂದ್
ಕರ್ನಾಟಕ ಬಂದ್
Updated on

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕನ್ನಡಪರ ಒಕ್ಕೂಟ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದೆ. ಸಿಎಂ ಸಿದ್ದರಾಮಯ್ಯ ಅವರು ಒಂದು ತಿಂಗಳಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಬೇಕು. ಇಲ್ಲವಾದಲ್ಲಿ ಮತ್ತೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.

ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವುದನ್ನು ವಿರೋಧಿಸಿ ಹಾಗೂ ತಮಿಳುನಾಡು ನಡೆಸಿದ ಬಂದ್‍ಗೆ ಪ್ರತಿಯಾಗಿ ಕನ್ನಡ ಒಕ್ಕೂಟ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್ ವೇಳೆ ಒಕ್ಕೂಟದ ಮುಖಂಡರು ಈ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ನಾನಾ ಕನ್ನಡ ಸಂಘಟನೆಗಳ ಸದಸ್ಯರು ಬೆಳಗ್ಗಿನಿಂದಲೇ ಪುರಭವನದ ಬಳಿ ಜಮಾಯಿಸಿ ತಮಿಳುನಾಡು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಕೈಬಿಡಬಾರದು. ಶೀಘ್ರದಲ್ಲಿ ಈ ಯೋಜನೆಗೆ ಚಾಲನೆ ನೀಡಬೇಕು ಎಂದು ಒಕ್ಕೂಟವು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.

ಸಾಹಿತಿ, ನಟರ ಬಗ್ಗೆ ವಿಷಾದ
ವಾಟಾಳ್ ನಾಗರಾಜ್ ಮಾತನಾಡಿ, `ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾದಾಗ ಕನ್ನಡಿಗರ ಪರ ಯಾರೂ ಧ್ವನಿ ಎತ್ತುವವರಿಲ್ಲ. ಲೋಕಸಭಾ ಸದಸ್ಯರು, ಸಚಿವರು, ಶಾಸಕರು, ಹೆಸರಾಂತ ಸಾಹಿತಿಗಳು, ಕನ್ನಡ ಸಂಘಟನೆಗಳು, ನಟರೂ ಸೇರಿದಂತೆ ಎಲ್ಲರೂ ಮೌನವಹಿಸಿದ್ದಾರೆ. ಇದು ಸರಿಯಲ್ಲ. ಇನ್ನಾದರೂ ರಾಜ್ಯದ ಜನ ಹಿತ ಕಾಪಾಡುವ ನಿಟ್ಟಿನಲ್ಲಿ ಧ್ವನಿ ಎತ್ತಬೇಕು' ಎಂದು ಮನವಿ ಮಾಡಿದರು. ಈ ಆರೋಪದ ಮಧ್ಯೆಯೂ ಅವರು, ಕರ್ನಾಟಕ ಬಂದ್‍ನ್ನು ಬೆಂಬಲಿಸಿರುವ ಕರ್ನಾಟಕದ ಎಲ್ಲ ಜನ, ನಾನಾ ಕನ್ನಡ ಸಂಘಟನೆಗಳು, ನೌಕರರ ಸಂಘ, ನಾನಾ ವಾಣಿಜ್ಯಸಂಘಗಳ ಮುಖಂಡರಿಗೆ ಧನ್ಯವಾದ ಸಲ್ಲಿಸಿದರು.

ಉರುಳು ಸೇವೆ, ಶವಯಾತ್ರೆ, ಪಿಂಡ ಪ್ರದಾನ!
ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಟೌನ್‍ಹಾಲ್ ಮುಂಭಾಗ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಹಾಗೂ ಹಾಲಿ ಸಿಎಂ ಪನ್ನೀರ್ ಸೆಲ್ವಂಪುಣ್ಯತಿಥಿ ಆಚರಿಸಿ, ಅವರ
ಭಾವಚಿತ್ರಗಳಿಗೆ ಪಿಂಡ ಪ್ರದಾನ ಮಾಡಿದರು. ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದೇ ವೇಳೆ ಕರವೇ ಮುಖಂಡ ಶಿವರಾಮೇಗೌಡ ಅವರ ನೇತೃತ್ವದಲ್ಲಿ
ಕರವೇ ಕಾರ್ಯಕರ್ತರು ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಅವರ ಶವಯಾತ್ರೆ ಮಾಡಿ, ಉರುಳು ಸೇವೆ ಮಾಡಿದರು.

ನೆಲ-ಜಲಕ್ಕಾಗಿ ಬಂದ್
ಅಖಿಲ ಕರ್ನಾಟಕ ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, `ನೆಲ-ಜಲಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಮೇಕೆದಾಟು ಯೋಜನೆಗೆ ಮೇ ತಿಂಗಳ ಅಂತ್ಯದವರೆಗೂ ಗಡುವು ನೀಡಿದ್ದೇವೆ. ಸರ್ಕಾರ ಈ ಗುಡುವಿನೊಳಗೆ ಯೋಜನೆ ಅನುಷ್ಠಾನಗೊಳಿಸದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ' ಎಂದು ಎಚ್ಚರಿಸಿದರು.

ಪುರಭವನದಿಂದ ಫ್ರೀಡಂ ಪಾರ್ಕ್
ಬಂದ್ ಬೆಂಬಲಿಸಿ ನಾನಾ ಕನ್ನಡ ಸಂಘಟನೆಗಳ ಕಾರ್ಯಕರ್ತರು ಟೌನ್‍ಹಾಲ್ ಬಳಿ ಜಮಾಯಿಸಿ ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ನಂತರ ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತದ ಮುಖಾಂತರ ಫ್ರೀಡಂ ಪಾರ್ಕ್ ತಲುಪಿ ಪ್ರತಿಭಟನೆ ಅಂತ್ಯಗೊಳಿಸಿದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ನೇತೃತ್ವದಲ್ಲಿ ನಡೆದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಮೈಕೋ ಕನ್ನಡ ಬಳಗ, ಎಚ್‍ಎಎಲ್ ಕನ್ನಡ ಬಳಗ, ಜಯಕರ್ನಾಟಕ ಸಂಘಟನೆ, ಕನ್ನಡ ಕ್ರೈಸ್ತರ ಒಕ್ಕೂಟ, ಎಸ್‍ಡಿಪಿಐ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಪಾಲ್ಗೊಂಡಿದ್ದವು.

ಕಂಗೊಳಿಸಿದ ಕನ್ನಡದ ಧ್ವಜಗಳು
ಪುರಭವನದಿಂದ ಫ್ರೀಡಂ ಪಾರ್ಕ್‍ವರೆಗೆ ನಡೆದ ಬೃಹತ್ ಮೆರವಣಿಗೆಯಲ್ಲಿ ಕನ್ನಡದ ಧ್ವಜಗಳು ಕಂಗೊಳಿಸಿದವು. ಕನ್ನಡಪರ ಕಾರ್ಯಕರ್ತರು ಬೃಹತ್ ಕನ್ನಡದ ಧ್ವಜಗಳನ್ನು ಪ್ರದರ್ಶಿಸುವ ಮೂಲಕ ತಮಿಳುನಾಡು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com