ತಮಿಳುನಾಡಿಗೆ ಬಗ್ಗಲ್ಲ; ಮೇಕೆದಾಟು ಕಟ್ಟಿಯೇ ಸಿದ್ದ: ಸಿಎಂ ಸಿದ್ದರಾಮಯ್ಯ

ತಮಿಳುನಾಡು ಸರ್ಕಾರ ಎಷ್ಟೇ ರಾಜಕೀಯ ಮಾಡಿದರೂ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೆಟ್ರೋ ರೈಲು ರೀಚ್ 3ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ
ಮೆಟ್ರೋ ರೈಲು ರೀಚ್ 3ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡು ಸರ್ಕಾರ ಎಷ್ಟೇ ರಾಜಕೀಯ ಮಾಡಿದರೂ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಪೀಣ್ಯಾ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರದ ವರೆಗೆ ಮೆಟ್ರೋ ರೀಚ್ 3ಬಿ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ ಅವರು, ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ರಾಜ್ಯಕ್ಕೆ 35 ಟಿಎಂಸಿ ನೀರು ಸಂಗ್ರಹಿಸಬಹುದು, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಿದರು.

ಅಲ್ಲದೆ ಮೇಕೆದಾಟು ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಕಾವೇರಿ ನ್ಯಾಯಾಧೀಕರಣದ ತೀರ್ಪು ಬಂದ 8 ವರ್ಷಗಳಿಂದೀಚೆಗೆ ಪ್ರತಿ ವರ್ಷವೂ ತೀರ್ಪಿನ ಅನುಸಾರ 192 ಟಿಎಂಸಿ ನೀರು ಬಿಡಲಾಗುತ್ತಿದೆ. 8 ವರ್ಷಗಳಲ್ಲಿ 7 ವರ್ಷ ಪೂರ್ಣ ಪ್ರಮಾಣದ ನೀರನ್ನು ಬಿಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ 50 ಟಿಎಂಸಿ ನೀರು ಹರಿದು ಹೋಗಿದೆ. ಹೀಗೆ ಕಾವೇರಿ ನದಿ ಪಾತ್ರದಿಂದ  ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಸಂಗ್ರಹಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಎಷ್ಟೇ ವಿರೋಧ ಮಾಡಿದರೂ ಯೋಜನೆಯನ್ನು ತಾವು ನಿಲ್ಲಿಸುವುದಿಲ್ಲ ಎಂದು ಸಿದ್ದರಾಮಯ್ಯ ತಮಿಳುನಾಡಿಗೆ ಸ್ಪಷ್ಟ ತಿರುಗೇಟು ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಲ್ಪನೆಯೇ ತಪ್ಪು
ಇನ್ನು ಬಿಬಿಬಿಎಂಪಿ ವಿಭಜನೆ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, "ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿದ್ದ ನಿರ್ಧಾರವೇ ತಪ್ಪು. ಬಿಎಂಪಿ ಪರಿವರ್ತನೆಯ ಬಳಿಕ ನಾಗರಿಕರ ಸಮಸ್ಯೆಗಳು ಸಾಕಷ್ಟು ಹೆಚ್ಚಾಗಿವೆ. 220 ಚ.ಕಿ.ಮೀ. ಇದ್ದ ಬೆಂಗಳೂರನ್ನು 2007ರಲ್ಲಿ ಬಿಬಿಎಂಪಿಯನ್ನಾಗಿ ಮಾಡಿ 110ಹಳ್ಳಿಗಳು, 7 ನಗರಸಭೆಗಳು, 1ಪುರಸಭೆಯನ್ನು ಸೇರಿಸಿ 800 ಚ.ಕಿ.ಮೀ.ಗೂ ಹೆಚ್ಚು ವಿಸ್ತರಿಸಲಾಗಿದೆ. ಅನಂತರ ಬೆಂಗಳೂರಿನಲ್ಲಿ ರಸ್ತೆಗಳು ಸರಿಯಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಪೂರೈಕಯಾಗುತ್ತಿದ್ದ ನೀರಿನಲ್ಲೂ ಶೇ.41ರಷ್ಟು ಸೋರಿಕೆಯಾಗುತ್ತಿದೆ. ಈ ಬಗ್ಗೆ ಸರಿಯಾದ ನಿರ್ವಹಣೆ ಇಲ್ಲ. ಬೆಂಗಳೂರಿನಲ್ಲಿ  20 ಲಕ್ಷ ಆಸ್ತಿಗಳಿವೆ. ಆದರೆ ತೆರಿಗೆ ಸಂಗ್ರಹವಾಗುತ್ತಿರುವುದು ಮಾತ್ರ 13 ಲಕ್ಷ ಆಸ್ತಿಗಳಿಂದ ಮಾತ್ರ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆಲ್ಲದೆ ಆಡಳಿತ್ಮಾಕ ದೃಷ್ಟಿಯಿಂದ ಬಿಬಿಎಂಪಿ ವಿಭಜನೆ ಅನಿರ್ವಾಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಣ್ಣ ನಗರಗಳಿಗೆ ಮೆಟ್ರೋ
ಇದೇ ವೇಳೆ ಇಪ್ಪತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಮೆಟ್ರೊ ರೈಲು ಸ್ಥಾಪಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು. ಇನ್ನು ಮುಂದೆ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳಲ್ಲಿ ಮೆಟ್ರೊ ರೈಲು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಂಸದೀಯ  ವ್ಯವಹಾರ ಹಾಗೂ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು, ಡಿವಿ ಸದಾನಂದಗೌಡ, ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ , ಗೃಹ ಸಚಿವ ಕೆ.ಜೆ.ಜಾರ್ಜ್, ವಾರ್ತಾ ಸಚಿವ ರೋಷನ್ ಬೇಗ್, ಶಾಸಕ ಮುನಿರತ್ನ, ಎಸ್.ಮುನಿರಾಜು ಮುಂತಾದವರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com