ಕೊಲೆಗಾರರ ಸೆರೆ ಹಿಡಿದ ಸಿಸಿ ಕ್ಯಾಮೆರಾ!

ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತನನ್ನು ಮನೆಗೆ ಕರೆಸಿ ಹತ್ಯೆ ಮಾಡಿ ಶವದೊಂದಿಗೆ ಒಂದು ದಿನ ಕಾಲ ಕಳೆದು ಬಳಿಕ ಶವವನ್ನು ಮೂಟೆ ಕಟ್ಟಿ ಖಾಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತನನ್ನು ಮನೆಗೆ ಕರೆಸಿ ಹತ್ಯೆ ಮಾಡಿ ಶವದೊಂದಿಗೆ ಒಂದು ದಿನ ಕಾಲ ಕಳೆದು ಬಳಿಕ ಶವವನ್ನು ಮೂಟೆ ಕಟ್ಟಿ ಖಾಲಿ ಮೈದಾನದಲ್ಲಿ ಬಿಸಾಡಿದ್ದ ಆರೋಪಿಗಳಿಬ್ಬರನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹಲಸೂರು ಮಿಲ್ಕ್ ಮ್ಯಾನ್ ಸ್ಟ್ರೀಟ್ ನಿವಾಸಿ, ಉದ್ಯಾನ ನಿರ್ವಹಣೆ ಮಾಡುತ್ತಿದ್ದ ಚನ್ನಕೇಶವುಲು (41) ಹಾಗೂ ಕ್ಯಾಬ್ ಚಾಲಕ ನ್ಯೂ ಬೈಯ್ಯಪ್ಪನಹಳ್ಳಿಯ ಪಿ. ಶ್ರೀನಿವಾಸುಲು(34) ಬಂಧಿತರು. ಜೂನ್ 28ರಂದು ಹಲಸೂರು ನಿವಾಸಿ ಕ್ಯಾಬ್ ಚಾಲಕ ವೆಂಕಟರಾವ್(36) ಎಂಬುವರನ್ನು ಕೊಲೆ ಮಾಡಿ ಬೈಯ್ಯಪ್ಪನಹಳ್ಳಿಯಲ್ಲಿರುವ ರೈಲ್ವೆ ವಸತಿ ಗೃಹದ ಖಾಲಿ ಮೈದಾನದಲ್ಲಿ  ಬಿಸಾಡಿದ್ದರು. ಮೈದಾನದಲ್ಲಿ ಸಿಕ್ಕ ಅಪರಿಚಿತ ಶವದ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಬೈಯ್ಯಪ್ಪನಹಳ್ಳಿ ಪೊಲೀಸರು ಒಂದು ತಿಂಗಳು ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಾಗಿತ್ತು?: ಕೊಲೆಯಾದ ವೆಂಕಟರಾವ್ ಗೆ ದೂರದ ಸಂಬಂಧಿಯಾಗಿದ್ದ ಚನ್ನಕೇಶುವುಲು ಹಾಗೂ ಶ್ರೀನಿವಾಸುಲು  ಸ್ನೇಹಿತರು.  6 ತಿಂಗಳ ಹಿಂದೆ ಆರೋಪಿ ಶ್ರೀನಿವಾಸುಲು  ವೆಂಕಟರಾವ್ ಗೆ. ರೂ 2,000 ಸಾಲ ನೀಡಿದ್ದನಂತೆ. ಅದನ್ನು ಮರಳಿಸಲು ವೆಂಕಟರಾವ್ ಸತಾಯಿಸುತ್ತಿದ್ದ. ಹಣ ಕೇಳಿದಾಗಲೆಲ್ಲಾ ನೆಪ ಹೇಳಿ ಹಣ ಕೊಡುವು ದನ್ನು ಮುಂದಕ್ಕೆ ಹಾಕುತ್ತಿದ್ದನಂತೆ. ಇನ್ನು ದೂರದ ಸಂಬಂಧಿ ಚನ್ನಕೇಶವುಲುಗೆ ವಿವಾಹವಾಗಿ ಮಕ್ಕಳಿದ್ದಾರೆ. ಆದರೆ, ಆತ ಕೆಲ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಈ ವಿಚಾರವನ್ನು ಚನ್ನಕೇಶವುಲು ಪತ್ನಿಗೆ ವೆಂಕಟರಾವ್ ತಿಳಿಸಿದ್ದನಂತೆ. ಹೀಗಾಗಿ ಪತಿಯೊಂದಿಗೆ ಜಗಳ ಮಾಡಿದ್ದ ಆಕೆ  ಚನ್ನಕೇಶವುಲು ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಹಣ ನೀಡದ ಕಾರಣ ಶ್ರೀನಿವಾಸುಲು ಹಾಗೂ ಪತ್ನಿಗೆ ಚಾಡಿ ಹೇಳಿದ್ದಾನೆಂಬ ಕಾರಣಕ್ಕೆ ಚನ್ನಕೇಶವುಲು ಹೀಗೆ ಇಬ್ಬರೂ ವೆಂಕಟರಾವ್ ವಿರುದ್ಧ ದ್ವೇಷ ಸಾಧಿಸುತ್ತಿದ್ದರು. ಈತನನ್ನು ಹೀಗೆ ಬಿಟ್ಟರೆ ಮುಂದೆ ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಾನೆಂದು ಭಾವಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪಾರ್ಟಿ ನೆಪದಲ್ಲಿ ಕರೆಸಿಕೊಂಡರು:
ಜೂನ್ 28ರಂದು ಪಾರ್ಟಿ ಮಾಡಲೆಂದು ವೆಂಕಟರಾವ್‍ನನ್ನು ನ್ಯೂ ಬೈಯ್ಯಪ್ಪನಹಳ್ಳಿಯಲ್ಲಿರುವ ಶ್ರೀನಿವಾಸುಲು ಮನೆಗೆ ಕರೆಸಿಕೊಂಡಿದ್ದರು. ಮೊಬೈಲ್ ಫೋನ್‍ನಿಂದ ಕರೆ ಮಾಡಿದರೆ ಸಿಕ್ಕಿ ಬೀಳಬಹುದು ಎನ್ನುವ ಆಲೋಚನೆ ಮಾಡಿದ್ದ ಆರೋಪಿಗಳು ಹಲಸೂರಿನ ಕಾಯಿನ್ ಬೂತ್‍ನಿಂದ ವೆಂಕಟರಾವ್‍ಗೆ ಕರೆ ಮಾಡಿದ್ದರು. ಪಾರ್ಟಿಗೆಂದು ಶ್ರೀನಿವಾಸುಲು ಮನೆಗೆ ಬಂದ ವೆಂಕಟರಾವ್ ಮೊಬೈಲ್ ಫೋನ್ ಒಂದೇ ತಾಸಿನಲ್ಲಿ ಸ್ವಿಚ್ ಆಫ್  ಆಗಿತ್ತು. ಮದ್ಯಪಾನ ಮಾಡಿದ ಬಳಿಕ ಇಬ್ಬರು ಸೇರಿ ಬೆಳಗ್ಗೆಯೇ  ವೈರ್‍ನಿಂದ ವೆಂಕಟರಾವ್ ನ ಕತ್ತು ಬಿಗಿದು ಹತ್ಯೆಗೈದು ಶವವನ್ನು ಮೈದಾನದಲ್ಲಿ ಬಿಸಾಡಿದ್ದರು. ಜೂ.30ರ ಬೆಳಗ್ಗೆ ಮೂಟೆ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಪರಿಚಿತ ವ್ಯಕ್ತಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಬೈಯ್ಯಪ್ಪನಹಳ್ಳಿ ಪೊಲೀಸರು ಮೃತನ ಪತ್ತೆ ಕಾರ್ಯ ನಡೆಸಿದ್ದರು. ಇತ್ತ ಹೊರಗೆ ಹೋಗಿದ್ದ ಪತಿ ಮನೆಗೆ ವಾಪಸ್ ಬಾರದ ಕಾರಣ ಅನುಮಾ ನಗೊಂಡ ವೆಂಕಟರಾವ್ ಪತ್ನಿ ಹಲಸೂರು  ಠಾಣೆಯಲ್ಲಿ ಜೂ.29ರ ಸಂಜೆ ನಾಪತ್ತೆ ದೂರು ನೀಡಿದ್ದರು. ಎರಡು ದಿನ ಗಳ ನಂತರ ಇವರ ಶವವನ್ನು ಬೆಯ್ಯಪ್ಪನಹಳ್ಳಿ  ಪೊಲೀಸರು ಪತ್ತೆ ಮಾಡಿದರು.

ಸುಳಿವು ನೀಡಿ ಸಿಸಿ ಕ್ಯಾಮೆರಾ:
ವೆಂಕಟರಾವ್ ಬೈಕ್‍ನಲ್ಲಿ ಮನೆಯಿಂದ ಯಾವ ಕಡೆಯಿಂದ ಹೋಗಿದ್ದಾರೆ ಎಂದು ಪತ್ತೆ ಹಚ್ಚಲು ರಸ್ತೆಯಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲಿಸಿದ್ದರು. ಈ ವೇಳೆ ವೆಂಕಟರಾವ್ ಬೈಯ್ಯಪ್ಪನಹಳ್ಳಿ ಕಡೆ ಬೈಕ್‍ನಲ್ಲಿ ಹೋಗುತ್ತಿದ್ದ ಸುಳಿವು ಸಿಕ್ಕಿತ್ತು. ಅಲ್ಲದೇ, ಆತನದೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದ ಸ್ನೇಹಿತರಾದ ಶ್ರೀನಿವಾಸುಲು ಹಾಗೂ ಚನ್ನಕೇಶವುಲು ಮೊಬೈಲ್ ಸಂಖ್ಯೆಗಳ ಟವರ್ ಲೋಕೇಶನ್ ಹಾಗೂ ಕಾಲ್ ಡಿಟೇಲ್ ರೆಕಾರ್ಡ್(ಸಿಡಿಆರ್) ಪರಿಶೀಲಿಸಿದಾಗ ಅವರ ಮೇಲೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದಾಗ ಕೊಲೆ ವಿಚಾರವನ್ನು ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಶವದೊಂದಿಗೆ ದಿನ ಶವವನ್ನು ವಿಲೇವಾರಿ ಹೇಗೆ ಮಾಡಬೇಕೆಂದುಯೋಚಿಸಿದ ಆರೋಪಿಗಳು ದಿನವಿಡಿ ಶವವೊಂದಿಗೆಕಾಲ ಕಳೆದಿದ್ದಾರೆ. ಶವ ಬಿಸಾಡಿದರೂ ಆತನ ಗುರುತು ಸಿಗಬಾರದೆಂದು ಮೈ ಮೇಲಿನ ಒಂದೂ ಬಟ್ಟೆಯನ್ನು ಬಿಡದೆ ನಗ್ನಗೊಳಿಸಿ ಕೈ ಕಾಲು ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ಮೂಟೆ ಕಟ್ಟಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ಶವವನ್ನು ಮೈದಾನದಲ್ಲಿ ಬಿಸಾಡಿದ್ದರು. ಆತ ಬಂದಿದ್ದ ಬೈಕ್ ಇದ್ದರೆ ಸಿಕ್ಕಿ ಬೀಳಬಹುದು ಎನ್ನುವ ಕಾರಣಕ್ಕೆ ಅದನ್ನು ಮೇಡಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com