ಖಾಯಂಗೊಳಿಸಲು ಕ್ರಮ ಕೈಗೊಳ್ಳಿ

ಬಿಬಿಎಂಪಿಯ ಕಸ ವಿಲೇವಾರಿ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿತು...
ಬಿಬಿಎಂಪಿ (ಸಂಗ್ರಹ ಚಿತ್ರ)
ಬಿಬಿಎಂಪಿ (ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿಯ ಕಸ ವಿಲೇವಾರಿ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿತು.

ಬುಧವಾರ ಬಿಬಿಎಂಪಿ ಕಚೇರಿ ಮುಂದೆ ನೂರಕ್ಕೂ ಅಧಿಕ ಗುತ್ತಿಗೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಸುಮಾರು 18,000 ಪೌರಕಾರ್ಮಿಕರು ನಿತ್ಯ ನಗರವನ್ನು ಶುಚಿಯಾಗಿಡುತ್ತಿದ್ದಾರೆ. ಆದರೆ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಶೋಷಣೆಯಿಂದ ಪೌರಕಾರ್ಮಿಕರು ಸರಿಯಾದ ಸಮಯಕ್ಕೆ ವೇತನ ಪಡೆಯದಂತಾಗಿದೆ. ಈ ಕಿರುಕುಳ ತಪ್ಪಿಸಿ
ಕಾರ್ಮಿಕರನ್ನು ಕಾಯಂ ಆಗಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮಹಿಳೆ ಆಂಜನಮ್ಮ ಮಾತನಾಡಿ, ಪೌರಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಒಂದು ದಿನ ಕೆಲಸಕ್ಕೆ ಬರದಿದ್ದರೆ ಕೆಲಸದಿಂದಲೇ ತೆಗೆದುಹಾಕುವ ಬೆದರಿಕೆ ಒಡ್ಡಲಾಗುತ್ತದೆ. ಬಿಬಿಎಂಪಿ ನೀಡುವ ರು.6,000 ವೇತನ ಪೌರಕಾರ್ಮಿಕರ ಕೈ ಸೇರುತ್ತಿಲ್ಲ. ಅಧಿಕಾರಿ ಹಾಗೂ ಗುತ್ತಿಗೆದಾ ರರು ಈ ಹಣ ಪಡೆಯುತ್ತಿದ್ದಾರೆ. ಬಿಬಿಎಂಪಿಯಿಂದ ಕಾಯಂ ಆಗಿ ಕಾರ್ಮಿಕರ ನೇಮಕವಾಗಬೇಕು. ವೇತನವನ್ನು ರು.15,000ಕ್ಕೆ ಏರಿಸಿ ಸೌಲಭ್ಯ ನೀಡಬೇಕು. ಕಾರ್ಮಿಕರಿಗೆ ಸೇರಬೇಕಾದ ವೇತನವನ್ನು ಪೂರ್ಣವಾಗಿ ಪಾವತಿಸಬೇಕು. ಕಾಯಂ ಆಗಿ ನೇಮಿಸಿದರೆ ಕೆಲಸದಿಂದ ತೆಗೆದುಹಾಕುವ ಕಿರುಕುಳ ನಿಲ್ಲುತ್ತದೆ ಎಂದು ಆಗ್ರಹಿಸಿದರು.

ಅಂಜನಾನಗರದ ನಂಜಮ್ಮ ಮಾತನಾಡಿ, ನಿತ್ಯ ಬೆಳಗ್ಗೆ ನಗರದ ಬೀದಿಗಳನ್ನು ಶುಚಿಗೊಳಿಸಲು ಬೇರೆ ಕಾರ್ಮಿಕರು ದೊರೆಯುವುದಿಲ್ಲ. ರು.6,000 ವೇತನವಿದ್ದರೂ, ರು.5,000 ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯವಿಲ್ಲ. ಪೌರಕಾರ್ಮಿಕರ ವೇತನವನ್ನು ನೇರವಾಗಿ ಅವರಿಗೇ ನೀಡಬೇಕು. ಕೂಡಲೇ ಉದ್ಯೋಗ ಕಾಯಂ ಮಾಡಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿ ಪೌರಕಾರ್ಮಿಕರೊಂದಿಗೆ ಮಾತನಾಡಿದ ಮೇಯರ್ ಮಂಜುನಾಥ ರೆಡ್ಡಿ, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ವೇತನ ಪೂರ್ಣವಾಗಿ ದೊರೆಯುವಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com