ರು.11 ಲಕ್ಷ ಪಂಗನಾಮ

ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದ ವ್ಯಕ್ತಿಯೊಬ್ಬರು ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆ ತೆರಳಿದ್ದಾಗ, ಇಬ್ಬರು ದುಷ್ಕರ್ಮಿಗಳು ರು.11.50 ಲಕ್ಷವಿದ್ದ ಹಣದ ಬ್ಯಾಂಕ್ ಕಸಿದು ಪರಾರಿಯಾಗಿರುವ ಘಟನೆ ಬಾಣಸವಾಡಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದ ವ್ಯಕ್ತಿಯೊಬ್ಬರು ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆ ತೆರಳಿದ್ದಾಗ, ಇಬ್ಬರು ದುಷ್ಕರ್ಮಿಗಳು ರು.11.50 ಲಕ್ಷವಿದ್ದ ಹಣದ ಬ್ಯಾಂಕ್ ಕಸಿದು ಪರಾರಿಯಾಗಿರುವ ಘಟನೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಶುಕ್ರವಾರ ಹಾಡಹಗಲೇ ನಡೆದಿದೆ.

ಹಲಸೂರು ನಿವಾಸಿ ಮಹಾವೀರ್ ಚಂದ್ (56) ಹಣ ಕಳೆದುಕೊಂಡವರು. ಕಮಿಷನ್ ಏಜೆಂಟ್ ಆಗಿರುವ ಇವರು ಬೆಳಗ್ಗೆ 10.30ರ ಸುಮಾರಿಗೆ ಬಾಣಸವಾಡಿ ಮುಖ್ಯರಸ್ತೆ ಯಲ್ಲಿರುವ ಫೆಡರಲ್ ಬ್ಯಾಂಕಿನಿಂದ ರು.11.50 ಲಕ್ಷ ಡ್ರಾ ಮಾಡಿದ್ದಾರೆ. ಬಳಿಕ ಹಣವನ್ನು ಬ್ಯಾಗಿಗೆ ಹಾಕಿಕೊಂಡು ತಮ್ಮ ಆಕ್ಟೀವಾ ಹೋಂಡಾ ಬೈಕಿನ ಡಿಕ್ಕಿಯಲ್ಲಿಟ್ಟುಕೊಂಡು ಮನೆಗೆ ಹೊರಟ್ಟಿದ್ದರು. ಮಾರ್ಗ ಮಧ್ಯೆ ಬೆಳಗ್ಗೆ 10.50ರ ಸುಮಾರಿನಲ್ಲಿ ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆ ಸಮೀಪ ಬೈಕ್ ನಿಲ್ಲಿಸಿ, ಸಮೀಪದ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದರು.

ಮೂತ್ರ ವಿಸರ್ಜನೆ ಮುಗಿಸಿ ಬೈಕ್ ಹತ್ತಿರ ಬಂದಿರುವ ಮಹಾವೀರ್ ಚಂದ್, ಬೈಕ್ ಸ್ಟಾರ್ಟ್ ಮಾಡಲು ಕೀ ನೋಡಿದ್ದಾರೆ. ಆದರೆ, ಬೈಕ್‍ನಲ್ಲಿ ಕೀ ಕಾಣಿಸಲಿಲ್ಲ. ಇದರಿಂದ ಗಾಬರಿಗೊಂಡು ಡಿಕ್ಕಿ ನೋಡಿದ್ದಾರೆ. ಈ ವೇಳೆ ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಹಣದ ಬ್ಯಾಗ್ ಅಲ್ಲೇ ಇತ್ತು. ತಕ್ಷಣ ಹಣದ ಬ್ಯಾಗ್ ಎತ್ತಿಕೊಂಡು ಬೈಕ್ ಸುತ್ತಲೂ ಕೀ ಹುಡುಕಿದ್ದಾರೆ. ಆದರೆ, ಕೀ ಸಿಗಲಿಲ್ಲ. ಮೂತ್ರ ವಿಸರ್ಜನೆಗೆ ತೆರಳಿದ್ದ ಸ್ಥಳದಲ್ಲಿ ಏನಾದರೂ ಬಿದ್ದಿರಬಹುದೆಂದು ಪರಿಶೀಲಿಸಲು ಆ ಕಡೆ ತೆರಳಿದ್ದಾರೆ. ಈ ವೇಳೆ ಸಮೀಪ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅವರ ಕೈಯಲ್ಲಿದ್ದ ಹಣದ ಬ್ಯಾಗ್ ಕಸಿದುಕೊಂಡಿದ್ದಾನೆ. ನಂತರ ಮತ್ತೊಬ್ಬ ಅಪರಿಚಿತ ಅನತಿ ದೂರದಲ್ಲಿ ಬೈಕ್ ಸ್ಟಾರ್ಟ್ ಮಾಡಿಕೊಂಡು, ಹಣದ ಬ್ಯಾಗ್ ಕಿತ್ತುಕೊಂಡಿದ್ದವನನ್ನು ಕೂರಿಸಿಕೊಂಡು ಪರಾರಿಯಾಗಿದ್ದಾನೆ.

ಬಳಿಕ ಘಟನೆ ಸಂಬಂಧ ಮಹಾವೀರ್ ಚಂದ್ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಆರೋಪಿಗಳ ಪತ್ತೆಗೆ ರಸ್ತೆಯ ಕಟ್ಟಡಗಳಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿ ವೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com