ಬೆಳ್ಳಂದೂರು ಕೆರೆಗೆ ಲಕ್ಷ್ಮಣರೇಖೆ!

ನೊರೆಯ ಕೆರೆ ಎಂದೇ ಹೆಸರಾಗಿರುವ ಬೆಳ್ಳಂದೂರು ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಈಗ 2019ರ ಲಕ್ಷಣರೇಖೆ ಬಿದ್ದಿದೆ! ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷ ಲಕ್ಷ್ಮಣ್ ಬುಧವಾರ ಈ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ...
ಬೆಳ್ಳಂದೂರು ಕೆರೆ (ಸಂಗ್ರಹ ಚಿತ್ರ)
ಬೆಳ್ಳಂದೂರು ಕೆರೆ (ಸಂಗ್ರಹ ಚಿತ್ರ)

ಬೆಂಗಳೂರು: ನೊರೆಯ ಕೆರೆ ಎಂದೇ ಹೆಸರಾಗಿರುವ ಬೆಳ್ಳಂದೂರು ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಈಗ 2019ರ ಲಕ್ಷಣರೇಖೆ ಬಿದ್ದಿದೆ! ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷ ಲಕ್ಷ್ಮಣ್ ಬುಧವಾರ ಈ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.

ಮಳೆ ಬಂದಾಗಲೆಲ್ಲ ಹೆಚ್ಚು ಹೆಚ್ಚು ನೊರೆ ಉತ್ಪತ್ತಿಯಾಗಿ ಸ್ಥಳೀಯರಿಗೆ ಕಂಟಕವಾಗುತ್ತಿದ್ದ ಬೆಳ್ಳಂದೂರು ಕೆರೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಪದೆ ಪದೇ ಒತ್ತಾಯಿಸುತ್ತಲೆ ಬಂದಿದ್ದರು. ಇವರ ಮನವಿಗೆ ಸಂಬಂಧಪಟ್ಟ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು. ಈಗ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಲಕ್ಷ್ಮಣ್ ತಮ್ಮ ಮೊದಲ ಕಾರ್ಯಕ್ರಮವನ್ನು ಬೆಳ್ಳಂದೂರು ಕೆರೆ ವೀಕ್ಷಣೆಗೆ ಮೀಸಲಿಟ್ಟರು.

ಕೆರೆಯನ್ನು ವೀಕ್ಷಿಸಿದ ಅವರು ನೀರಿನ ಅಶುದ್ಧತೆ, ಅಲ್ಲಿ ಉತ್ಪತ್ತಿಯಾಗುತ್ತಿರುವ ನೊರೆಯ ನಿವಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮ, ಕೆರೆ ಒತ್ತುವರಿ ತಡೆಯುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಮತ್ತು ಜಲ ಮಂಡಳಿಯ ಎಂಜಿನಿಯರ್‍ಗಳಿಂದ ಸಲಹೆ ಪಡೆದರು. ಇದೇ ವೇಳೆ ಕೆರೆಯ ಸುತ್ತಮುತ್ತಲಿನ ವಾತಾವರಣ ಜನರಿಗೆ ಹೇಸಿಗೆ ಹುಟ್ಟಿಸಿದ್ದು, ಇದರಿಂದ ಮುಕ್ತಿಕೊಡಿಸುವಂತೆ ಸ್ಥಳೀಯರಿತ್ತ ಬೇಡಿಕೆಯನ್ನು ಅಧ್ಯಕ್ಷರು ಆಲಿಸಿದರು.

ಬಳಿಕ ಮಾತನಾಡಿದ ಲಕ್ಷ್ಮಣ್, ಬೆಳ್ಳಂದೂರು ಕೆರೆಯು 900 ಎಕರೆಯಷ್ಟಿದ್ದು, 287 ಎಕರೆ ಅಚ್ಚಕಟ್ಟು ಪ್ರದೇಶವಾಗಿದೆ. ಈ ಕೆರೆಯ ನೀರಿಗೆ ಕೈಗಾರಿಕಾ ತ್ಯಾಜ್ಯ, ಜನವಸತಿ ಪ್ರದೇಶದ ತ್ಯಾಜ್ಯ ಬಂದು ಸೇರುತ್ತಿದೆ. ರಾಜ ಕಾಲುವೆಗಳಿಂದ ನೀರು ಹರಿದು ಬರುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಈ ಕೊಳಚೆಯನ್ನು ತಡೆಗಟ್ಟಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ನೀರಿನಲ್ಲಿ ಆಮ್ಲಜನಕದ ಕೊರತೆ, ಮೂರು ಮೀಟರ್‍ನಷ್ಟು ಹೂಳು ತುಂಬಿರುವುದರಿಂದ ಅವುಗಳ ನಿವಾರಣೆಗೆ ಸೂಕ್ತ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.

2019ರ ಲಕ್ಷ್ಮಣರೇಖೆ: ಬೆಂಗಳೂರು ಜಲ ಮಂಡಳಿಯ ಎಂಜಿನಿಯರ್ ರಾಮ ಕೃಷ್ಣ ಮಾತನಾಡಿ, ಬೆಳ್ಳಂದೂರು ಖಾನೆ ಯಲ್ಲಿ ನೀರಿನ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. ಇದುರೆಗೆ 300 ಎಂಎಲ್ ಡಿಯಷ್ಟು ನೀರನ್ನು ಸಂಸ್ಕರಿಸಲಾಗುತ್ತಿದ್ದು, ಇನ್ನು 200 ಎಂಎಲ್ ಡಿ ನೀರಿನ ಸಂಸ್ಕರಣಕ್ಕೆ ಘಟಕ ತೆರೆಯಲಾಗುವುದು. ಈ ಕೆರೆಯ ಒಟ್ಟಾರೆ ಅಭಿವೃದ್ಧಿಗೆ ತಯಾರಿಸಿರುವ ಕ್ರಿಯಾಯೋಜನೆಯು 2019ರ ವೇಳೆಗೆ ಮುಗಿಯಲಿದೆ. ಅಂದರೆ ಈಗಿನಿಂದಲೇ ಹಂತ ಹಂತವಾಗಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com