ಬಸ್ ಸ್ಟಾಪ್ ಜಾಹೀರಾತಲ್ಲಿ ರು.60 ಕೋಟಿ ಭ್ರಷ್ಟಾಚಾರ!

ಬಿಬಿಎಂಪಿ ಬಸ್ ತಂಗುದಾಣದ ಹೆಸರಿನಲ್ಲಿ ನೆಡೆದಿರುವ ರು.60 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ದಾಖಲೆ ಬಿಡುಗಡೆ ಮಾಡಿದ್ದು, ಕೂಡಲೇ ಸಮಗ್ರ ತನಿಖೆ ನಡೆಸಿ ಅವ್ಯವಹಾರದಲ್ಲಿ ಪಾಲುದಾರರಾಗಿರುವ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿ ಬಸ್ ತಂಗುದಾಣದ ಹೆಸರಿನಲ್ಲಿ ನೆಡೆದಿರುವ ರು.60 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ದಾಖಲೆ ಬಿಡುಗಡೆ ಮಾಡಿದ್ದು, ಕೂಡಲೇ ಸಮಗ್ರ ತನಿಖೆ ನಡೆಸಿ ಅವ್ಯವಹಾರದಲ್ಲಿ ಪಾಲುದಾರರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸೋಮವಾರ ಬಿಬಿಎಂಪಿ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗುತ್ತಿಗೆ ಅವಧಿ ಮುಗಿದಿದ್ದರೂ ಬಸ್ ನಿಲ್ದಾಣಗಳಲ್ಲಿ ಜಾಹೀರಾತು ಪ್ರದರ್ಶನವಾಗುತ್ತಿದ್ದು, ಈ ಬಾಬ್ತು ಹಣ ಬಿಬಿಎಂಪಿಗೆ ಸಂದಾಯವಾಗುತ್ತಿಲ್ಲ. ಅನೇಕ ಕಡೆ ಅನಧಿಕೃತವಾಗಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಇದೆಲ್ಲಾ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಟೀಕಿಸಿದರು.

ಕೂಡಲೇ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು ಮತ್ತು ಮೇಯರ್ ಅವರು ಈ ಬಗ್ಗೆ ಮಾಹಿತಿ ತರಿಸಿಕೊಂಡು ಸಮಗ್ರ ತನಿಖೆಗೆ ಆದೇಶಿಸಬೇಕು. ಜೊತೆಗೆ ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕೆಂಬುದು ನಮ್ಮ ಆಗ್ರಹ ಎಂದರು.

ಹಗರಣದ ಹೂರಣ


ಇದು ಸುಮಾರು ರು.60 ಕೋಟಿ ಹಗರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ 2008- 09ರಲ್ಲಿ ಬಿಲ್ಡ್ - ಆಪರೇಟ್- ಟ್ರಾನ್ಸ್ ಫಾರ್ (ಬಿಒಟಿ) ಆಧಾರದಲ್ಲಿ ಬಸ್ ತಂಗುದಾಣಗಳನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಲಾಗಿತ್ತು. ಅದರ ಅವಧಿ ಐದು ವರ್ಷ. ಐದು ವರ್ಷದ ನಂತರ ಬಿಬಿಎಂಪಿಗೆ ಬಸ್ ತಂಗುದಾಣ ಹಸ್ತಾಂತರವಾಗಬೇಕಾಗಿತ್ತು. ಆದರೆ ಟೈಮ್ಸ್ ಓಓಎಚ್ ಸಂಸ್ಥೆ ಮಾತ್ರ ಗುತ್ತಿಗೆ ಅವಧಿ ಮುಗಿದ ತಕ್ಷಣ ಪಾಲಿಕೆಗೆ ಹಸ್ತಾಂತರ ಮಾಡಿದ್ದಾರೆ. ಉಳಿದ 11 ಗುತ್ತಿಗೆ ಸಂಸ್ಥೆಗಳು ಬಿಬಿಎಂಪಿಗೆ ಬಸ್ ತಂಗುದಾಣಗಳನ್ನು ಹಸ್ತಾಂತರ ಮಾಡದೇ ಜಾಹೀರಾತುಗಳನ್ನು ಅನಧಿಕೃತವಾಗಿ ಪ್ರದರ್ಶಿಸುತ್ತಿದ್ದು, ಹಣವನ್ನು ಅವರೇ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 300 ಬಸ್ ತಂಗುದಾಣಗಳ ಗುತ್ತಿಗೆ ಅವಧಿ ಮುಗಿದು ಎರಡು ವರ್ಷಗಳಾಗಿವೆ. ಇನ್ನು 300 ಬಸ್ ತಂಗುದಾಣಗಳ ಗುತ್ತಿಗೆ ಅವಧಿ ಮುಗಿದು ಒಂದು ವರ್ಷವಾಗಿದೆ. ಗುತ್ತಿಗೆ ಅವಧಿ ಮೀರಿದರೂ ಬಿಬಿಎಂಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳದೇ ಇರುವುದಕ್ಕೆ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಶಾಮೀಲಾಗಿರುವುದಕ್ಕೆ ಸ್ಪಷ್ಟ ನಿದರ್ಶನ. ಈ ಅವಧಿಯಲ್ಲಿ ಪಾಲಿಕೆ ಬೊಕ್ಕಸಕ್ಕಾದ ನಷ್ಟ ರು.60 ಕೋಟಿಗೂ ಅಧಿಕ.

ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಮೂರು ಬಸ್ ತಂಗುದಾಣಗಳಿದ್ದು, ರೆಸಿಡೆನ್ಸಿ ರಸ್ತೆಯ ಮೆಯೋ ಹಾಲ್ ಜಂಟಿ ಆಯುಕ್ತರ ಕಚೇರಿ ಮುಂದೆ ಎರಡು ಬಸ್ ತಂಗುದಾಣಗಳಿದ್ದು, ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿ ಸಮೀಪ 6 ಬಸ್ ತಂಗುದಾಣಗಳಿವೆ. ಇಲ್ಲಿ ರಾಜಾರೋಷವಾಗಿ ಅನಧಿಕೃತವಾಗಿ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದ್ದರೂ ಆಯುಕ್ತರು, ಜಂಟಿ ಆಯುಕ್ತರು ಮತ್ತು ಜಾಹೀರಾತು ವಿಭಾಗದ ಮುಖ್ಯಸ್ಥರ ಕಣ್ಣಿಗೆ ಕಾಣದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಹಲವಾರು ಗುತ್ತಿಗೆದಾರರು ಗುತ್ತಿಗೆ ಪಡೆದಿರುವ ಪ್ಯಾಕೇಜ್‍ಗಳಲ್ಲಿ ನಮೂದಿ ಸಿರುವ ಸ್ಥಳಗಳಲ್ಲಿ ಬಸ್ ತಂಗು ದಾಣಗಳನ್ನು ನಿರ್ಮಿಸದೆ ನಗರದ ಪ್ರೈಮ್ ಲೊಕೇಷನ್ ಬಸ್ ತಂಗುದಾಣಗಳನ್ನು ನಿರ್ಮಿಸಿ ಕೋಟ್ಯಂತರ ರುಪಾಯಿಯನ್ನು ಕಾನೂನು ಬಾಹಿರವಾಗಿ ಜೇಬಿಗಿಳಿಸುತ್ತಿದ್ದಾರೆ.

ನಗರದ ಪ್ರಮುಖ ಸ್ಥಳಗಳಲ್ಲಿ ಒಂದು ಬಸ್ ತಂಗುದಾಣಕ್ಕೆ ಬಿಬಿಎಂಪಿಯಲ್ಲಿ ಅನುಮತಿ ಪಡೆದು ಮೂರು-ನಾಲಾ್ಕು ಬಸ್ ತಂಗುದಾಣ ನಿರ್ಮಿಸಿದ್ದಾರೆ. ಉದಾಹರಣೆಗೆ, ಪ್ಲಾಟ್ ಫಾರಂ ರಸ್ತೆಯಲ್ಲಿ ಮಂತ್ರಿ ಮಾಲ್ ನಿಂದ ಮೆಜೆಸ್ಟಿಕ್ ಕಡೆ ಹೋಗುವ ಸ್ಥಳಗಳಲ್ಲಿ ಅನಧಿಕೃತವಾಗಿ ಬಸ್ ತಂಗುದಾಣ ನಿರ್ಮಿಸಿದ್ದಾರೆ. ಈ ರಸ್ತೆಯಲ್ಲಿ ಜಾಹೀರಾತು ಹಾಕಲು ಸಾಕಷ್ಟು ಪೈ ಪೋಟಿ ಇದೆ. ವಿಚಿತ್ರವೆಂದರೆ ಈ ರಸ್ಯೆಲ್ಲಿ ಬಸ್ ಗಳ ಸಂಚಾರವಿಲ್ಲ. ಆದರೂ ನಾಲ್ಕು ಬಸ್ ತಂಗುದಾಣ ನಿರ್ಮಿಸಲಾಗಿದೆ.

ಕಸ್ತೂರ್ ಬಾ ರಸ್ತೆಯಲ್ಲಿ ಬೆಂಜ್ ಕಾರ್ ಶೋರೂಮ್ ಬಳಿ 3 ಬಸ್ ತಂಗುದಾಣ, ಅದೇ ರಸ್ತೆಯಲ್ಲಿ ಅದರ ಎದುರು ಮೂರು ಬಸ್ ತಂಗುದಾಣಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ 6 ಬಸ್ ತಂಗುದಾಣದ ಅವಶ್ಯಕತೆಯೇ ಬರುವುದಿಲ್ಲ. ಕೋರಮಂಗಲ ಫೋರಂ ಮಾಲ್ ಸಮೀಪ ಬಸ್ ತಂಗುದಾಣ ನಿರ್ಮಿಸಿದ್ದಾರೆ. ಅಲ್ಲಿ ಬಸ್ ಸ್ಟಾಪ್ ಇಲ್ಲ. ಆದರೂ ಬಸ್ ತಂಗುದಾಣ ನಿರ್ಮಿಸಿದ್ದಾರೆ. ಅಲ್ಲಿ ಬಸ್ ಸ್ಟಾಪ್ ಇಲ್ಲ. ಆದರೂ ಬಸ್ ತಂಗುದಾಣ ನಿರ್ಮಿಸಲಾಗಿದೆ. ಇಂದಿರಾನಗರ100 ಅಡಿ ರಸ್ತೆಯ ಸಿಗ್ನಲ್ ಸಮೀಪ ಕೆಎಫ್ ಸಿ ಎದುರು ಅನಧಿಕೃತವಾಗಿ ಬಸ್ ತಂಗುದಾಣವಿದೆ.

ಬಳ್ಳಾರಿ ರಸ್ತೆ ಕಾವೇರಿ ಜಂಕ್ಷನ್ ಮಧ್ಯದಲ್ಲಿ ಎರಡು ಬದಿಗಳಲ್ಲಿ 9 ಬಸ್ ತಂಗುದಾಣಗಳಿವೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 6 ಬಸ್ ತಂಗುದಾಣ ನಿರ್ಮಿಸಿದ್ದಾರೆ. ಇದರ ಜೊತೆಗೆ ಮೇಖ್ರಿ ವೃತ್ತ, ಎಂಜಿ ರಸ್ತೆ ಸೇರಿದಂತೆ ಪ್ರಮುಖ ಜನಸಂದಣಿ ಇರುವ ಕಡೆ ರಸ್ತೆಗಳಲ್ಲಿ ಅವಶ್ಯಕತೆ ಮೀರಿ ಅನಧಿಕೃತವಾಗಿ ಬಸ್ ತಂಗುದಾಣ ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com