ನಕಾರಾತ್ಮಕ ಧೋರಣೆಯೇ ಅಪಾಯಕಾರಿ

ನಕಾರತ್ಮಾಕ ಮನೋಭಾವ ಭಯೋತ್ಪಾದನೆಗಿಂತ ಅಪಾಯಕಾರಿ. ಇಂಥ ಮನೋಭಾವದಿಂದ ಸಮಾಜದ ಸ್ವಾಸ್ಥ್ಯಹಾಳಾಗುತ್ತದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ...
ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಡಾ.ಸಿಎನ್ ಮಂಜುನಾಥ್
ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಡಾ.ಸಿಎನ್ ಮಂಜುನಾಥ್

ಬೆಂಗಳೂರು: ನಕಾರತ್ಮಾಕ ಮನೋಭಾವ ಭಯೋತ್ಪಾದನೆಗಿಂತ ಅಪಾಯಕಾರಿ. ಇಂಥ ಮನೋಭಾವದಿಂದ ಸಮಾಜದ ಸ್ವಾಸ್ಥ್ಯಹಾಳಾಗುತ್ತದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಗುರುವಾರ `ಬೆಂಗಳೂರು ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹೃದಯ ಸಂಬಂಧಿ ಕಾಯಿಲೆಗಳಿಗೆ ನಕಾರಾತ್ಮಕ ಮನೋಭಾವ ಹಾಗೂ ದುರಾಸೆ ಪ್ರಮುಖ ಕಾರಣ. ಜನರಲ್ಲಿ ನಕಾರಾತ್ಮಕ ಧೋರಣೆ ಹೆಚ್ಚಾದಂತೆ ದೇಶದಲ್ಲಿ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. 1960ರಲ್ಲಿ ಶೇ.2ರಷ್ಟಿದ್ದ ಹೃದಯ  ಸಂಬಂಧಿ ಕಾಯಿಲೆಗಳು ಇಂದು ಶೇ.10ರಷ್ಟು ಹೆಚ್ಚಿವೆ. ಭಯೋತ್ಪಾದನೆಯಿಂದ ಹಲವರು ಮಾತ್ರ ಸಾಯುತ್ತಾರೆ. ಆದರೆ, ನಕಾರಾತ್ಮಕ ಮನೋಭಾವದಿಂದ ಲಕ್ಷಾಂತರ ಮಂದಿ ಹಾಗೂ  ಸಮಾಜ ಸಾಯುತ್ತದೆ. ಹೀಗಾಗಿ ಜನ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧೂಮಪಾನ ಮತ್ತು ಮಧುಮೇಹ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಇವುಗಳೇ ಹೃದಯಾಘಾತಕ್ಕೆ ಪ್ರಮುಖ ಕಾರಣ. ದೇಹದಲ್ಲಿ ಕೊಬ್ಬಿನಾಂಶ ಹೆಚ್ಚುವುದರಿಂದಲೂ ಹೃದಯಾಘಾತ ಸಂಭವಿಸುತ್ತದೆ. ತೂಕ ಹೆಚ್ಚಿರುವವರಲ್ಲಿ ಹೆಚ್ಚು ಕೊಬ್ಬಿನಾಂಶ ಇರುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ತೂಕ ಮತ್ತು ಕೊಬ್ಬಿನಾಂಶಕ್ಕೆ ಯಾವುದೇ ಸಂಬಂಧವಿಲ್ಲ. ಪ್ರತಿಯೊಬ್ಬರ ದೇಹದಲ್ಲಿ ಶೇ.70ರಷ್ಟು ಕೊಬ್ಬು ಇರುತ್ತದೆ. ಮಾಂಸ ಹಾಗೂ ಜಿಡ್ಡು ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ಕೊಬ್ಬು ಹೆಚ್ಚಾಗುತ್ತದೆ.

ದೇಶದಲ್ಲಿ ಹೃದಯಾಘಾತ ಸಂಭವಿಸಿರುವವರ ಪೈಕಿ ಶೇ.25ರಷ್ಟು ಮಂದಿ 40ಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದು ಅಪಾಯಕಾರಿ ಬೆಳವಣಿಗೆ. ಮಕ್ಕಳು ತಂದೆ ತಾಯಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ತಂದೆ ತಾಯಿಗಳೇ ಮಕ್ಕಳನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಹೃದಯಾಘಾತ ಮತ್ತು ಮಧುಮೇಹ ನಗರವಾಸಿಗಳಿಗಷ್ಟೇ ಸೀಮಿತವಾಗಿದ್ದವು. ಆದರೆ ಇಂದು ಹಳ್ಳಿ ಜನರಲ್ಲೂ ಇವು ಕಾಣಿಸಿಕೊಳ್ಳುತ್ತಿವೆ. ಹೃದಯಾಘಾತ ಲಕ್ಷಣಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ತಿಳಿಸಿದರು. ನಗರದಲ್ಲಿರುವ ಎರಡು ಜಯದೇವ ಆಸ್ಪತ್ರೆಗಳು (ಕೇಂದ್ರ ಆಸ್ಪತ್ರೆ ಮತ್ತು ರಾಜಾಜಿನಗರ ಇಎಸ್‍ಐ ಆಸ್ಪತ್ರೆಯಲ್ಲಿರುವ) ಹಾಗೂ ಮೈಸೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ರಾಜ್ಯದ ಜನತೆಗೆ ಉತ್ತಮ ಸೇವೆ ನೀಡುತ್ತಿದ್ದು, ಉತ್ತರ ಕರ್ನಾಟಕ ಭಾಗದ ಜನತೆಯ ಅನುಕೂಲಕ್ಕಾಗಿ ಕಲಬುರ್ಗಿಯಲ್ಲಿ ರು.15 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 100 ಹಾಸಿಗೆಯುಳ್ಳ ಜಯದೇವ ಹೃದ್ರೋಗ ಆಸ್ಪತ್ರೆ ತೆರೆಯಲಾಗುವುದು.

ಈ ಮೂಲಕ ಅತಿಹೆಚ್ಚು(1150 ಹಾಸಿಗೆಗಳು) ಹೃದ್ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ದೇಶದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ `ಕನ್ನಡಪ್ರಭ' ಪತ್ರಿಕೆಯ ಸಂಪಾದಕೀಯ ಸಲಹೆಗಾರ ಡಿ.ವಿ.ರಾಜಶೇಖರ್ ಸೇರಿ 14 ಮಂದಿ ಹಿರಿಯ ಪತ್ರಕರ್ತರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಕೃಷಿ ಕ್ಷೇತ್ರದಲ್ಲಿನ ಉತ್ತಮ ಸಾಧನೆಗಾಗಿ ಸೈಯ್ಯದ್ ಘನಿ ಖಾನ್ ಅವರಿಗೆ `ಕೃಷಿ ಸಾಧಕ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಸಚಿವರಾದ ಎಚ್.ಸಿ.ಮಹದೇವಪ್ಪ, ಜಾರ್ಜ್, ಆರ್.ರೋಷನ್‍ಬೇಗ್,  ವಿನಯ್ ಕುಮಾರ್ ಕುಲಕರ್ಣಿ, ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಉಪಾಧ್ಯಕ್ಷರಾದ .ಶಿವಕುಮಾರ್ (ಬೆಳ್ಳಿತಟ್ಟೆ) ಸೇರಿದಂತೆ ಪ್ರಮುಖರು ಹಾಜರಿದ್ದರು.

ರಾಜ್ಯದಲ್ಲಿ ರೈತರ ಹಿಡುವಳಿ ಕಡಿಮೆಯಾಗುತ್ತಿದ್ದು, ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಮಣ್ಣಿನ ಗುಣಮುಟ್ಟ, ನೀರಿನ ಲಭ್ಯತೆಗೆ ಅನುಗುಣವಾಗಿ ಪರ್ಯಾಯ  ಬೆಳೆಗಳನ್ನು ಬೆಳೆಯುವ ಮೂಲಕ ಜೀವನಮಟ್ಟ ಸುಧಾರಿಸಿಕೊಳ್ಳಬೇಕು. ಯುವಕರು ಕೃಷಿಯಿಂದ ಹಿಮ್ಮುಖವಾಗುತ್ತಿದ್ದು, ಅವರನ್ನು ಕೃಷಿ ಕ್ಷೇತ್ರಕ್ಕೆ ಸೆಳೆಯುವ ಪ್ರಯತ್ನಗಳು ನಡೆಯಬೇಕಿದೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com