
ಬೆಂಗಳೂರು: ಮ್ಯಾಕ್ಸಿ ಕ್ಯಾಬ್ ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಸಂಘಟನೆಗಳು ಇದೇ ಫೆಬ್ರವರಿ 13ರಂದು ಮುಷ್ಕರ ಹಮ್ಮಿಕೊಂಡಿವೆ.
ಇದೇ ಫೆ.13ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಸಭೆ ಸೇರಲಿರುವ ಆಟೋರಿಕ್ಷಾ ಸಂಘಟನೆಯ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಘಟನೆ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರು, ವಿದೇಶಿ ಹೂಡಿಕೆಗೆ ಸಂಬಂಧಿಸಿ ಸಾರಿಗೆ ಇಲಾಖೆ ಸೂಕ್ತ ನಿಯಮಾವಳಿ ರಚಿಸಬೇಕು ಎಂಬ ಬೇಡಿಕೆ ಇಡಲಾಗುವುದು ಎಂದು ತಿಳಿಸಿದ್ದಾರೆ.
ಇದಲ್ಲದೆ ಮೊಬೈಲ್ ಅಪ್ಲಿಕೇಷನ್ ನೆರವಿನಲ್ಲಿ ಗ್ರಾಹಕರಿಗೆ ಸೇವೆ ನೀಡುವ ಟ್ಯಾಕ್ಸಿಗಳು ನಗರದಲ್ಲಿ ಹೆಚ್ಚುತ್ತಿವೆ. ಟ್ಯಾಕ್ಸಿ ಕಂಪನಿಗಳು ಕಡಿಮೆ ಬಾಡಿಗೆ ತೆಗೆದುಕೊಳ್ಳುತ್ತಿರುವುದು ಮತ್ತು ಪ್ರಚಾರಕ್ಕೆಂದು ಅನೇಕ ಕೊಡುಗೆ ನೀಡುತ್ತಿರುವುದು ಆಟೋ ಚಾಲಕರಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಟ್ಯಾಕ್ಸಿ ಸೇವೆಗೆ ಸ್ಪಷ್ಟ ನಿಯಮಾವಳಿ ರೂಪಿಸಲು ಸಾರಿಗೆ ಇಲಾಖೆಯನ್ನು ಒತ್ತಾಯಿಸಿ ಆರ್ ಟಿಒ ಮುಂದೆಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಇದೇ ವೇಳೆ ರುದ್ರಮೂರ್ತಿ ತಿಳಿಸಿದ್ದಾರೆ.
Advertisement