

ಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಉನ್ನತ ಶಿಕ್ಷಣ ಪರಿಷತ್‍ನಲ್ಲಿ ಶನಿವಾರ ತಮ್ಮ ಇಲಾಖೆಯ ಸಾಧನೆಯನ್ನು ವಿವರಿಸುವ `ಉನ್ನತ ಶಿಕ್ಷಣದ ಸಾಧನೆ- ಸಾರ್ಥಕತೆ' ಶೀರ್ಷಿಕೆಯ ಹೊತ್ತಗೆ ಬಿಡುಗಡೆ ನಂತರ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ 18ರಿಂದ 32 ವಯೋಮಾನದ 70 ಲಕ್ಷ ಜನರಿದ್ದಾರೆ. ಅವರಲ್ಲಿ 17 ಲಕ್ಷ ವಿದ್ಯಾರ್ಥಿ ಗಳು ಮಾತ್ರ ಉನ್ನತ ಶಿಕ್ಷಣದದಲ್ಲಿ ಅಧ್ಯಯನ ನಿರತರಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಯುವ ಜನರಿದ್ದರೂ ಹೆಚ್ಚಿನವರು ಉನ್ನತ ಶಿಕ್ಷಣದ ಲಾಭ ಪಡೆಯುತ್ತಿಲ್ಲ. ಬಡವರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಗ್ರಾಮೀಣ ಭಾಗದವರುದೂರ ಉಳಿಯುತ್ತಿದ್ದಾರೆ. ಇವರನ್ನು ಮುಖ್ಯ ವಾಹಿನಿಗೆ ಜೋಡಿ ಸುವ ಕಾರ್ಯ ಸರ್ಕಾರದ ಗುರಿಯಾಗಿದೆ ಎಂದರು.
2013-14ರಲ್ಲಿ 51 ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ, ಇದರಲ್ಲಿ 23 ಮಹಿಳಾ ಕಾಲೇಜು ಸೇರಿದೆ. ಅಲ್ಲದೇ, ಪದವಿಕಾಲೇಜುಗಳ ಶುಲ್ಕವನ್ನು ಏರಿಸದೇ ಬಡ ವಿದ್ಯಾರ್ಥಿ ಗಳಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದ ಅವರು ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಹೆಚ್ಚು ಬಳಸುವ ಮೂಲಕ ಕ್ಷಿಪ್ರ ಫಲಿತಾಂಶ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಡಿಪ್ಲೋಮಾ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹತ್ತಾರು ಕಾಲೇಜಿಗೆ ಅರ್ಜಿ ಸಲ್ಲಿಸಿ ಎಲ್ಲ ಕಾಲೇಜಿಗೂ ಅಲೆಯಬೇಕಾಗಿತ್ತು. ಈಗ ಆನ್ ಲೈನ್ ಪ್ರವೇಶ ವ್ಯವಸ್ಥೆ ಮಾಡಿದ್ದು, ಒಮ್ಮೆ ಅರ್ಜಿ ಹಾಕಿದರೆ ಕೌನ್ಸೆಲಿಂಗ್ ಮೂಲಕ ಕಾಲೇಜುಗಳನ್ನು ಸುಲಭವಾಗಿ ಆಯ್ಕೆ ಮಾಡಿ ಕೊಳ್ಳಬಹುದಾಗಿದೆ. ಅದೇ ರೀತಿ, 12 ಸಾವಿ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಮುಖಾಂತರ ಆಯ್ಕೆ ಮಾಡಿ ನೇಮಕ ಮಾಡಲಾಗುತ್ತಿದೆ ಎಂದರು.
ಕೆಇಎ 2 ವಿಭಾಗೀಯ ಕೇಂದ್ರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎರಡು ಪ್ರಾದೇಶಿಕ ಕೇಂದ್ರಗಳನ್ನು ಗುಲ್ಬರ್ಗ ಮತ್ತು ಧಾರವಾಡದಲ್ಲಿ ಮುಂದಿನ ಸಾಲಿನಲ್ಲಿ ಆರಂಭಿಸಲಾಗುತ್ತಿದೆ, ಸದ್ಯ ಕೇಂದ್ರ ಆರಂಭದ ಪ್ರಾಥಮಿಕ ಕಾರ್ಯ ನಡೆಯುತ್ತಿದೆ. ಜಾಗಗಳನ್ನು ಗುರುತಿಸಲಾಗಿದ್ದು, ಆಡಳಿತಾತ್ಮಕ ಕೆಲಸ ಕಾರ್ಯಗಳು ನಡೆದಿವೆ ಎಂದು ಸಚಿವರು ತಿಳಿಸಿದರು. ಉನ್ನತ ಶಿಕ್ಷಣ ಇಲಾಖೆಯ ಹೊತ್ತಿಗೆಯನ್ನು ಸಾಹಿತಿ ಜಯಂತ ಕಾಯ್ಕಿಣಿ ಬಿಡುಗಡೆಗೊಳಿಸಿದರು. ಬೆಂಗಳೂರು ವಿವಿ ಕುಲಪತಿ ತಿಮ್ಮೇ ಗೌಡ, ಹೈಯರ್ ಎಜುಕೇಷನ್ ಕೌನ್ಸಿಲ್‍ನ ಪ್ರೊ.ಎಸ್.ಎ.ಕೋರಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಲೋಕೇಶ್ ಇದ್ದರು.
Advertisement