
ಬೆಂಗಳೂರು: ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ವಿ ಹಿಂದೆ ರಕ್ಷಣಾ ಸಾಮಗ್ರಿಗಳ ಸ್ವಾವಲಂಬನೆ ನಿಂತಿದೆ ಎಂದು ರಕ್ಷಣಾ ರಾಜ್ಯ ಸಚಿವ ರಾವ್ ಇಂದ್ರಜೀತ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಮಹಾತ್ವಾಕಾಂಕ್ಷಿ `ಮೇಕ್ ಇನ್ ಇಂಡಿಯಾ' ಯೋಜನೆ ಸಿಂಹಪಾಲು ರಕ್ಷಣಾ ವಿಭಾಗದ್ದಾಗಿದೆ. ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ರಕ್ಷಣಾ ಸಾಮಗ್ರಿಗಳ ಆಮದು ನಿಯಂತ್ರಿಸಬೇಕಿದೆ. ಹೀಗಾಗಿ ಮುಂದಿನ ಬಜೆಟ್ ಹಾಗೂ ನಂತರದ ಅಧಿವೇಶನದಲ್ಲಿ ಈ ಸಂಬಂಧ ನೀತಿಗಳನ್ನು ನಿರೀಕ್ಷಿಸಬಹುದಾಗಿದೆ ಹಾಗೂ ರಕ್ಷಣಾ
ಸಾಮಗ್ರಿಗಳ ಉತ್ಪಾದನೆ ಕುರಿತ ನಿಯಮದಲ್ಲೂ ಬದಲಾವಣೆ ತರಲಾಗುವುದು ಎಂದು ಏರೋ ಇಂಡಿಯಾ-2015ರ ನಿಮಿತ್ತ ಡಿಆರ್‍ಡಿಒ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು.
ಭಾರತದಲ್ಲಿ ಬಂಡವಾಳ ಹೂಡಬಹುದಾದಂತಹ 200ಕ್ಕೂ ಅಧಿಕ ಕಂಪನಿಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಬಂಡವಾಳ ಹೂಡಿಕೆಗೆ ಆಕರ್ಷಿಸಿ ಸ್ಥಳೀಯ ಬೇಡಿಕೆ ಈಡೇರಿಸಿ ರಫ್ತು ಮಾಡುವಂತಾಗಬೇಕು. ರಕ್ಷಣಾವಲಯಕ್ಕೆ ಸಂಬಂಧಿಸಿ ಒಂದೆರಡು ವರ್ಷಗಳಲ್ಲಿ ಜಾದು ಮಾಡಲು ಸಾಧ್ಯವಿಲ್ಲ. ಇಂತಹ ದೂರಗಾಮಿ ಯೋಜನೆಯ ಯಶಸ್ವಿಗೆ ಒಂದು ದಶಕಕ್ಕೂ ಅಧಿಕ ಸಮಯ ಬೇಕಾಗುತ್ತದೆ. ಆದರೆ, ಈ ನಿಟ್ಟಿನಲ್ಲಿ ಈಗಿನಂದಲೇ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ರಾವ್ ತಿಳಿಸಿದರು.
ಕೇಂದ್ರ ಸರ್ಕಾರಿ ಸ್ವಾಮ್ಯದ ಸಾಕಷ್ಟು ಕಂಪನಿಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಆದರೆ ಸೇನೆ, ರಕ್ಷಣಾ ಇಲಾಖೆ ಹಾಗೂ ರಕ್ಷಣಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಆ ಮೂಲಕ ಹೆಚ್ಚುವರಿ ಆರ್ಥಿಕ ಹೊರೆ ಇಳಿಸಬಹುದು, ನಿಗದಿತ ಸಮಯದಲ್ಲಿ ಯೋಜನೆ ಮುಗಿಸಬಹುದು ಎಂದು ಅವರು ಹೇಳಿದರು. ಮೇಕ್ ಇನ್ ಇಂಡಿಯಾ ಯೋಜನೆ ಯಶಸ್ವಿಯಾಗಬೇಕಾದರೆ ರಕ್ಷಣಾ ಸಾಮಾಗ್ರಿಗಳ ಸಂಶೋಧನೆ ಹಾಗೂ ವಿನ್ಯಾಸವೂ ಭಾರತದಲ್ಲಿಯೇ ಆಗಬೇಕು.
ಆದ್ದರಿಂದ ಪರವಾನಗಿ ಹಾಗೂ ಪೇಟೆಂಟ್ ಸಮಸ್ಯೆ ಇರುವುದಿಲ್ಲ. ಜತೆಗೆ ಭಾರತ ಸುಲಭವಾಗಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಹಾಗೂ ರಫ್ತು ಮಾಡಬಹುದು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ನೀತಿ ರೂಪಿಸಲಿದೆ, ಜತೆಗೆ ಡಿಆರ್ ಡಿಒ ನೆರವನ್ನು ಖಾಸಗಿ ಕಂಪನಿಗಳು ಪಡೆಯುವ ಬಗ್ಗೆ ಸ್ಪಷ್ಟ ನಿಲುವು ತಿಳಿಸಲಾಗುವುದು ಎಂದು ಅವರು ಹೇಳಿದರು.
Advertisement