ಇಸ್ರೇಲ್‍ನ ರಫೆಲ್ ಜತೆ ಶಸ್ತ್ರಾಸ್ತ್ರ ಉತ್ಪಾದನೆ ಒಪ್ಪಂದ

ಇಸ್ರೇಲ್‍ನ ರಫೆಲ್
ಇಸ್ರೇಲ್‍ನ ರಫೆಲ್

ಬೆಂಗಳೂರು: ಮಿಸೈಲ್ ತಂತ್ರಜ್ಞಾನ, ರಿಮೋಟ್ ಆಧರಿತ ಶಸ್ತ್ರಾಸ್ತ್ರ ವ್ಯವಸ್ಥೆ ಹಾಗೂ ಸುಧಾರಿತ ಶಸ್ತ್ರಾಸ್ತ್ರಗಳ ಬಗ್ಗೆ ದೇಶಿಯ ಸಂಶೋಧನೆ ಹಾಗೂ ಉತ್ಪಾದನೆಗೆ ಸ್ಥಳೀಯ ಪ್ರತಿಭೆಗಳು ಹಾಗೂ ಶೀಘ್ರ ನಿರ್ಧಾರ ಅಗತ್ಯವಾಗಿದೆ ಎಂದು ಕಲ್ಯಾಣಿ ಸಮೂಹದ ಅಧ್ಯಕ್ಷ ಬಾಬಾ ಕಲ್ಯಾಣಿ ಹೇಳಿದರು.

ಭಾರತದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ ಉತ್ಪಾದನೆಗಾಗಿ ರಕ್ಷಣಾ ಕ್ಷೇತ್ರದ ಮುಂಚೂಣಿಯಲ್ಲಿರುವ ಇಸ್ರೇಲ್‍ನ ರಫೆಲ್ ಜತೆ ಜಂಟಿ ಒಪ್ಪಂದಕ್ಕೆ ರಫಯಲ್ ಅಧ್ಯಕ್ಷ ಇಜಾಕ್ ಗ್ಯಾಟ್ ಅವರೊಂದಿಗೆ ಗುರುವಾರ ಸಹಿ ಹಾಕಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಳವಾದ ಬಳಿಕ ಮೊದಲ ಮಹತ್ವದ ಒಪ್ಪಂದ ಇದಾಗಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಶಸ್ತ್ರಾಸ್ತ್ರಗಳ ಸಂಶೋಧನೆ ಹಾಗೂ ಅಭಿವೃದ್ಧಿ ಹೊಂದುವ ಗುರಿಯನ್ನು ಕಲ್ಯಾಣಿ ಸಮೂಹ ಸಂಸ್ಥೆ ಹೊಂದಿದೆ. 20 ವರ್ಷಗಳಿಂದ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ 'ರಫೆಲ್  ಅಡ್ವಾನ್ಸಡ್ ಡಿಫೆನ್ಸ್ ಸಿಸ್ಟಮ್ಸ್ ಲಿ' ಜತೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಸಂತೋಷದ ವಿಷಯ. ಬರುವ ಏಪ್ರಿಲ್ ವೇಳೆಗೆ ಹೈದರಾಬಾದ್‍ನಲ್ಲಿ ಕಾರ್ಖಾನೆ ಆರಂಭಿಸುವ ಉದ್ದೇಶವಿದೆ.

ತಂತ್ರಜ್ಞಾನ ಸಲಹೆ ನೀಡಲು ರಫೆಲ್ ಸಿದ್ಧವಿದೆ ಎಂದರು. ಪ್ರಧಾನಿ ಮೋದಿ ಕನಸಿನ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗ ಇದಾಗಿದ್ದು ಜಂಟಿ ಒಪ್ಪಂದದಲ್ಲಿ ಶೇ.51ರಷ್ಟು ಪಾಲನ್ನು ಕಲ್ಯಾಣಿ ಹೊಂದಿದ್ದರೆ, ಶೇ.49ರಷ್ಟು ಪಾಲನ್ನು ರಫೆಲ್ ಹೊಂದಿರಲಿದೆ. ಆದರೆ, ಇದರಿಂದ ಎಷ್ಟು ಜನರಿಗೆ ಉದ್ಯೋಗ ಸಿಗಲಿದೆ, ಪ್ರಯೋಜನ ಎಷ್ಟು ಹಾಗೂ ಹೂಡಿಕೆಯಾಗುತ್ತಿರುವ ಹಣ ಎಷ್ಟು ಎಂದು ಹೇಳಲು ಬಾಬಾ ಕಲ್ಯಾಣಿ ನಿರಾಕರಿಸಿದರು. ಭಾರತೀಯ ರಕ್ಷಣಾ ಪಡೆಗಳ ಬೇಡಿಕೆ ಪೂರೈಕೆ ನಂತರ ವಿದೇಶಗಳಿಗೂ ಶಸ್ತ್ರಾಸ್ತ್ರ ಮಾರಾಟ ಮಾಡುವ ಉದ್ದೇಶವಿದೆ ಎಂದರು. ಆಧುನಿಕ ಶಸ್ತ್ರಾಸ್ತ್ರ ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆಗೆಗಾಗಿ ಕಲ್ಯಾಣಿ ಸಂಸ್ಥೆ 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com