
ಬೆಂಗಳೂರು: ಸೂರು ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನದ ಹಣವನ್ನು ವಿಜಯನಗರ ವಿಭಾಗದ ಎಂಜಿನಿಯರ್‍ಗಳು ದುರ್ಬಳಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಮತ್ತು ಮೈನಾರಿಟಿ ಸೇನೆ ಸಂಘಟನೆ ಕಾರ್ಯಕರ್ತರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಪಾಲಿಕೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ವಿಜಯನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ವಾರ್ಡ್ 134ರ ಸಹಾಯಕ ಎಂಜಿನಿಯರ್ ರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಬೆಂಗಳೂರು ಜಿಲ್ಲಾ ಯುವಘಟಕದ ಅಧ್ಯಕ್ಷ ರಂಗಸ್ವಾಮಿ ಆಗ್ರಹಿಸಿದರು. ರಾಜಕಾಲುವೆಯ ಪಕ್ಕದಲ್ಲೇ 33 ನಿವೇಶನಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳು ವಾಸಕ್ಕೆ ಯೋಗ್ಯವಿಲ್ಲ. ಈಗಾಗಲೇ 6 ಅಡಿ ಅಗಲ, 7 ಅಡಿ ಉದ್ದದ 14 ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಫಲಾನುಭವಿಗಳಿಗೆ ಕಾರ್ಯಾದೇಶ ಪ್ರತಿಯನ್ನು ನೀಡಲು ಅಲೆದಾಡಿಸುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ರಾಜಕಾಲುವೆ ಪಕ್ಕದಲ್ಲಿ ಮನೆ ನಿರ್ಮಾಣ ಕಾನೂನು ಬಾಹಿರ.
ಈ ಸಂಬಂಧ ಹಾಲಿ ಸದಸ್ಯ ಹಾಗೂ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಟಿ.ವಿ. ಕೃಷ್ಣ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ ಎಂದು ಅವರು ದೂರಿದರು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Advertisement