ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ

ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್
ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್

ಬೆಂಗಳೂರು: ಇಸಿಸ್ ಪರ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಶಂಕಿತ ಉಗ್ರ ಮೆಹ್ದಿ ಪ್ರಕರಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ  ಮಾಡಲಾಗಿದೆ.

ನಿಂಬಾಳ್ಕರ್ ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉಪ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ಚಂದ್ರಶೇಖರ್.ಎಂ ಅವರನ್ನು ನಿಯೋಜಿಸಲಾಗಿದೆ. ಇನ್ನು ಮಾನವ ಹಕ್ಕುಗಳ ವಿಭಾಗದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಮಲ್ ಪಂತ್ ಅವರನ್ನು ಬೆಂಗಳೂರು ಕಾರಾಗೃಹ ಅಡಿಷನಲ್ ಡಿಜಿಪಿಯಾಗಿ ನಿಯೋಜಿಸಲಾಗಿದೆ.

ಆ ಸ್ಥಾನದಲ್ಲಿದ್ದ ಗಗನ್ ದೀಪ್ ಅವರ ಮೇಲೆ ಕೆಲ ಗಂಭೀರ ಆರೋಪಗಳು ಬಂದ ಹಿನ್ನಲೆಯಲ್ಲಿ ಅವರಿಗೆ ತಾತ್ಕಾಲಿಕ ರಜೆ ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿನ ಜೈಲುಗಳಿಗೆ ಕೈದಿಗಳಿಗೆ ಬೇಕಾದ ವಸ್ತುಗಳು ಯಾವುದೇ ತಡೆಯಿಲ್ಲದೇ ರವಾನೆಯಾಗುತ್ತಿದ್ದರೂ ಗಗನ್‌ದೀಪ್ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.

ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಶಂಕಿತ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್ ಪ್ರಕರಣದ ಆರಂಭಿಕ ದಿನದಿಂದಲೂ ವಿಚಾರಣೆ ನಡೆಸುತ್ತಿದ್ದು, ಅವರ ದಿಢೀರ್ ವರ್ಗಾವಣೆ ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿವೆ. ವಿಚಾರಣೆಯಲ್ಲಿ ಸ್ಫೋಟಕ ಅಂಶಗಳು ಪತ್ತೆಯಾಗುತ್ತಿರುವ ಈ ವೇಳೆಯಲ್ಲಿ ನಿಂಬಾಳ್ಕರ್ ಅವರ ದಿಡೀರ್ ಎತ್ತಂಗಡಿ ಏಕೆ ಎಂಬ ಅನುಮಾನಗಳು ಮೂಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com