ಮೇಳೈಸಿದ ಕರಾವಳಿ ಸಂಸ್ಕೃತಿ

ರಾಜಧಾನಿ ಬೆಂಗಳೂರಿನ ಜಯನಗರ 5ನೇ ಬ್ಲಾಕ್‍ನ ಶಾಲಿನಿ ಮೈದಾನದಲ್ಲಿ ನಡೆದ 2 ದಿನಗಳ ಕರಾವಳಿ ಉತ್ಸವ..
ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜಯನಗರ 5ನೇ ಬ್ಲಾಕ್‍ನ ಶಾಲಿನಿ ಮೈದಾನದಲ್ಲಿ ನಡೆದ  2 ದಿನಗಳ ಕರಾವಳಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್ ನಗರದಲ್ಲಿರುವ ಕರಾವಳಿ ಜನತೆಯನ್ನು ಒಟ್ಟಿಗೆ ಕಲೆಹಾಕಿ ನಡೆಸಿದ ಬಹುದೊಡ್ಡ ಉತ್ಸವ ಅದಾಗಿತ್ತು. ಅಪ್ಪಟ ಸಾಂಪ್ರದಾಯಿಕವಾಗಿ ವ್ಯವಸ್ಥೆ ಮಾಡಿದ್ದ ಎರಡು ದಿನಗಳ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿಯ ಸಂಪ್ರದಾಯದಂತೆ ಪಂಚಭೂತಗಳ ನೃತ್ಯ ಪ್ರಸ್ತುತಿಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವದ ಮೊದಲ ದಿನ ಶನಿವಾರ ಇಡೀ ಮೈದಾನದಲ್ಲಿ ಬರೀ ಕರಾವಳಿ ತಿಂಡಿ ತಿನಿಸುಗಳದ್ದೇ ಜಾತ್ರೆ. ಅಷ್ಟೇ ಅಲ್ಲ. ಕರಾವಳಿಯನ್ನು ಬೆಂಗಳೂರಿನಗೆ ತಂದಿಟ್ಟಂತೆ ಯಕ್ಷಗಾನ, ಕರಾವಳಿ ಸಂಪ್ರದಾಯದ ನೃತ್ಯಗಳು, ಹಾಡುಗಳು ದಿನವಿಡೀ ರಂಜಿಸಿದವು.

ಇಡೀ ಮೈದಾನದಲ್ಲಿ ಕರಾವಳಿ ತಿನಿಸುಗಳ ಮಳಿಗೆಗಳನ್ನು ತೆರಿದ್ದರಿಂದ ಎಲ್ಲೆಡೆ ಮೀನಿನ ಬಿಸಿಬಿಸಿ ತಿನಿಸು ಬಾಯಲ್ಲಿ ನೀರೂರುವಂತೆ ಮಾಡುತ್ತಿತ್ತು. ಅದರಲ್ಲೂ ಕರಾವಳಿಯ  ಮಾಂಸಾಹಾರ ತಿನಿಸುಗಳಾದ ಕೋಳಿ ರೊಟ್ಟಿ, ನೀರು ದೋಸೆ, ಬೈಗಿ ,ಪುಳಿಮುಣ್ಜಿ ತಿನಿಸುಗಳನ್ನು ತಿನ್ನಲು ಜನರ ನೂಕನುಗ್ಗಲಿತ್ತು. ಅದೇರೀತಿ ಸಸ್ಯಾಹಾರಿ ತಿನಿಸುಗಳಾದ ಪೋಡಿ, ಅತ್ಸಾಸ್, ಸುಕ್ಕಿನ್ ಉಂಡೆ, ಕೊಟ್ಟೆ ಕಡುಬುಗಳನ್ನು ತಿನ್ನಲು ಜನರ ಮುಗಿ ಬೀಳುತ್ತಿದ್ದರು.

ಇದರೊಂದಿಗೆ ಪ್ರಸಿದ್ಧ ಮಯ್ಯಾಸ್ ಸಂಸ್ಥೆಯ 50ಕ್ಕೂ ಹೆಚ್ಚು ತಿಂಡಿ ತಿನಿಸುಗಳು ಎಲ್ಲರನ್ನೂ ಆಕರ್ಷಿಸಿದವು. ಕರಾವಳಿ ಜನ ಬಳಸುವ ಕಾಡು ಸೊಪ್ಪು, ತರಕಾರಿಗಳು ಮತ್ತು ಅಲಂಕಾರಿಕ ವಸ್ತುಗಳ ಮಾರಾಟ ಮಳಿಗಗಳು ಜನರಿಂದ ಕಿಕ್ಕಿರಿದಿದ್ದವು. ಇದೇವೇಳೆ ಬೃಹತ್ ವೇದಿಕೆಯಲ್ಲಿ ಸರಳಿ ಹಾಡುಗಳು ಮತ್ತು ನೃತ್ಯಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ರಂಜಿಸುತ್ತಿದ್ದವು. ಭಾರ್ಗವಿ ತಂಡದ ಕುಂಬ ನೃತ್ಯ, ನಾರಾಯಣ ಶಂಭುರಾಯರ ಯಕ್ಷಗಾನ ರೂಪಕ ಹಾಗೂ ನಾಗಶ್ರೀ ತಂಡದ ಭಾವಯೋಗ ನೃತ್ಯ ನೋಡುಗರನ್ನು ರಂಜಿಸಿತು.

ಉತ್ತಮ ಊಟಕ್ಕೆ ಕರಾವಳಿ ಜನತೆಯೇ ಕಾರಣ ಸಿಎಂ
ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಜನರಿಗೆ ರುಚಿಯಾದ ಉತ್ತಮ ಊಟ ಸಿಗುತ್ತದೆ ಎಂದರೆ ಅದಕ್ಕೆ ಕರಾವಳಿ ಜನತೆಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮೂರು ಹಬ್ಬ ಕರಾವಳಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರಾವಳಿ ಭಾಗದ ಜನರು ಉದ್ಯೋಗ ಮತ್ತು ಉದ್ಯಮಕ್ಕಾಗಿ ಬೆಂಗಳೂರು ಮತ್ತು ಇತರ ನಗರಗಳಿಗೆ ಬಂದಿದ್ದಾರೆ. ಅವರಿಲ್ಲದೆ ಇದ್ದರೆ ಜನರಿಗೆ ಒಳ್ಳೆ ತಿಂಡಿ, ತಿನಿಸುಗಳು ಸಿಗುತ್ತಿರಲಿಲ್ಲ. ಆದ್ದರಿಂದ ಕರಾವಳಿ ಜನರ ಕೊಡುಗೆ ಅಪಾರ ಎಂದರು. ಕರಾವಳಿ ಉತ್ಸವ ಎಂದೊಡನೆ ಕರಾವಳಿಯ ನೀರ್ ದೋಸೆ,

ಕೋಳಿ ಸಾರು ಇತ್ಯಾದಿ ಖಾದ್ಯ ಎಲ್ಲರನ್ನೂ ಆಕರ್ಷಿಸುತ್ತದೆ. ಉತ್ಸವ ಎಂದೊಡನೆ ಸಾವಿರಾರು ಸಂಖ್ಯೆ ಜನ ಸೇರುತ್ತಾರೆ ಏಕೆಂದರೆ, ಅವರಿಗೆ ಪ್ರದೇಶ, ಸಂಸ್ಕೃತಿ ಮತ್ತು ಊಟೋಪಚಾರದ ಬಗ್ಗೆ ಅಭಿಮಾನ ಹೆಚ್ಚು. ಕರಾವಳಿ ಜನರ ಭಾಷೆ, ಸಂಸ್ಕೃತಿಯೇ ಒಂದು ರೀತಿ ವಿಭಿನ್ನ, ವಿಶಿಷ್ಟ. ಆದರೂ ಕೆಲವು ಕಡೆ ತುಳು ಮಾತನಾಡುತ್ತಾರೆ. ಇದರೊಂದಿಗೆ ಕನ್ನಡವನ್ನೂ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಆ ಕೆಲಸವನ್ನು ಅನೇಕ ಕರಾವಳಿ ಜನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ಅವರು ಉತ್ಸವದ ಕೇಂದ್ರ ಬಿಂದುವಾದ ಕಿರೀಟ ಪ್ರಶಸ್ತಿಯನ್ನು ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಬೆಂಗಳೂರಿನ ಯಕ್ಷ ದೇಗುಲ ಸಂಸ್ಥೆ ಸಂಸ್ಥಾಪಕ ಮೋಹನ್ ಹೊಳ್ಳ ಅವರಿಗೆ ಪ್ರದಾನ ಮಾಡಿ ಅಭಿನಂದಿಸಿದರು. ಇದೇ ವೇಳೆ ಗಣೇಶ್ ಸ್ವೀಟ್ ಅವರು ಡಾ.ರಾಜ್ ಹೆಸರಿನಲ್ಲಿ ಹೊರತಂದಿರುವ ವಿಶೇಷ ಲಡ್ಡು ವನ್ನು ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಶಾಸಕ ಬಿ.ಎನ್.ವಿಜಯಕುಮಾರ್, ನೆಹರು ಬಾಲ ಭವನ ಅಧ್ಯಕ್ಷೆ ಭಾವನಾ, ಲೋಕಸಭಾ ಮಾಜಿ ಸದಸ್ಯ ಜಯಪ್ರಕಾಶ್ ಹೆಗ್ಡೆ, ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಬೆಂಗಳೂರಿನ ಯಕ್ಷ ದೇಗುಲ ಸಂಸ್ಥೆ ಸಂಸ್ಥಾಪಕ ಮೋಹನ್ ಹೊಳ್ಳ, ಖ್ಯಾತ ಉದ್ಯಮಿ ಡಾ.ಪಿ. ಸದಾನಂದ ಮಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್, ಸಂಜೀವ್ ಶೇಟ್ ಜ್ಯೂವೆಲ್ಲರ್ಸ್‍ನ ಎಸ್. ಸುರೇಶ್ ಶೇಟ್, ದಕ್ಷಿಣ ಕನ್ನಡಿಕಗರ ಸಂಘದ ಬಾ.ರಾಮಚಂದ್ರ ಉಪಾಧ್ಯಾಯ, ಮೊಗವೀರ ಸಂಘದ ಎಲ್.ಬಿ.ಕಾಂಚನ್, ತುಳುವೆರೆಂಕ್ಲುನ ಕೆ.ಎನ್.ಅಡಿಗ, ಪಾಲಿಕೆ ಸದಸ್ಯ ಬಿ. ಸೋಮಶೇಖರ್ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com