ತನಿಖಾ ತಂಡ ರಚನೆ ಕೋರಿ ಕಮಲ್ ಪಂತ್ ಪತ್ರ

ಲೋಕಾಯುಕ್ತದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡದ ನಾಯಕರಾಗಿ ನೇಮಕಗೊಂಡಿರುವ ಎಡಿಜಿಪಿ ಕಮಲ್ ಪಂತ್...
ಪೊಲೀಸ್ ಅಧಿಕಾರಿ ಕಮಲ್ ಪಂತ್
ಪೊಲೀಸ್ ಅಧಿಕಾರಿ ಕಮಲ್ ಪಂತ್

ಬೆಂಗಳೂರು: ಲೋಕಾಯುಕ್ತದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡದ ನಾಯಕರಾಗಿ ನೇಮಕಗೊಂಡಿರುವ ಎಡಿಜಿಪಿ ಕಮಲ್ ಪಂತ್ ಅವರು ಶೀಘ್ರವೇ ತಂಡ ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ತಂಡದಲ್ಲಿ ಯಾವ ಯಾವ ಅಧಿಕಾರಿಗಳು ಇರಬೇಕು ಎಂಬುದರ ಬಗ್ಗೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಸದ್ಯ ಬೆಳಗಾವಿ ಅಧಿವೇಶನ ಮುಕ್ತಾಯ ಆಗುವವರೆಗೂ ತಂಡ ರಚನೆ ಬಗ್ಗೆ ಅನುಮಾನವಿದೆ, ತಂಡಕ್ಕೆ ಸೂಚಿಸಿರುವ ಹೆಸರುಗಳನ್ನು ಬಹಿರಂಗಗೊಳಿಸಲು ಕಮಲ್ ಪಂತ್ ನಿರಾಕರಿಸಿದ್ದಾರೆ. ಆದರೆ, ಇಲಾಖೆಯಲ್ಲಿನ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸುವರೇ ಇಲ್ಲವೇ ಎಂಬ ಬಗ್ಗೆ ಸಂಶಯವಿದ್ದು, ಸಿಐಡಿ ಇಲ್ಲವೇ ಸಿಸಿಬಿಯಿಂದ ತನಿಖಾಧಿಕಾರಿಗಳನ್ನು ಕರೆಸಿಕೊಂಡು ತನಿಖೆ ನಡೆಸಬಹುದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ತರಬೇತಿಗಾಗಿ ಕಮಲ್ ಪಂತ್ ಅವರು 2 ತಿಂಗಳು ಹೈದ್ರಾಬಾದ್ ಹಾಗೂ ಅಮೆರಿಕಕ್ಕೆ ತೆರಳಬೇಕಿತ್ತು. ಆದರೆ, ಪ್ರಕರಣದ ತನಿಖೆ ಅವರ ಹೆಗಲ ಮೇಲೆ ಬಿದ್ದಿರುವ ಕಾರಣ ಪ್ರವಾಸ ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಿಯಾಜ್ ರಜೆ: ಭ್ರಷ್ಟಾಚಾರದ ಕಿಂಗ್‍ಪಿನ್ ಎಂದು ಗುರುತಿಸಿಕೊಂಡಿರುವ ಸಂಸ್ಥೆಯ ಜಂಟಿ ಆಯುಕ್ತ ಸೈಯದ್ ರಿಯಾಜ್ ರಜೆ ಮೇಲೆ ತೆರಳಿದ್ದಾರೆ. ಆದರೆ, ಅವರು ರಜೆ ಮೇಲೆ ತೆರಳಲು ನಿಖರ ಕಾರಣವೇನು ಅಥವಾ ಸರ್ಕಾರವೇ ಅವರನ್ನು ರಜೆ ಮೇಲೆ ತೆರಳುವಂತೆ ಸೂಚನೆ ನೀಡಿದೆಯೇ ಎಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಐಎಎಸ್ ಅಧಿಕಾರಿಗಳೇ ಗುರಿ: ಅಶ್ವಿನ್ ಹಾಗೂ ತಂಡದ ಸದಸ್ಯರು ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಹಣ ಪಡೆಯಲು ಮಾತುಕತೆ ನಡೆಸಿದ್ದಾರೆ.

ಆದರೆ, ಪ್ರಮುಖವಾಗಿ ಅವರು ಐಎಎಸ್ ಹಾಗೂ ಹಿರಿಯ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಹಿರಿಯ ಐಎಎಸ್ ಅಧಿಕಾರಿಗಳನ್ನು ಸಂಪರ್ಕಿಸಿ ಹಣ ನೀಡದಿದ್ದಲ್ಲಿ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಕೆಲ ದಿನಗಳ ಹಿಂದೆ ಬಿಬಿಎಂಪಿಯ ಹಣಕಾಸು ಮತ್ತು ನಗರ ಯೋಜನಾ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಅವರು, ಇದು ಕೇವಲ ಸ್ಯಾಂಪಲ್. ಹಣ ನೀಡದಿದ್ದಲ್ಲಿ ಮತ್ತೆ ದಾಳಿ ಮಾಡುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ದೂರುದಾರರಿಗೆ ಬೆದರಿಕೆ: ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದ ಜಿಲ್ಲಾ ಪಂಚಾಯತ್‍ನ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎನ್. ಕೃಷ್ಣಮೂರ್ತಿ ಅವರು ಈಗ ಜೀವಭಯದಲ್ಲಿದ್ದು, ಬೆದರಿಕೆ ಕರೆಗಳು ಬರುತ್ತಿವೆ. ದೂರು ಹಿಂಪಡೆಯುವಂತೆ ಒತ್ತಡ ಹೆಚ್ಚಿದೆ. ಭೂಗತ ಪಾತಕಿಗಳಿಂದ ಕರೆಗಳು ಬರುತ್ತಿದ್ದು, ಕುಟುಂಬ ಸದಸ್ಯರು ಜೀವ ಭಯದಲ್ಲಿ ಕಾಲಕಳೆಯುತ್ತಿದ್ದಾರೆ ಎನ್ನಲಾಗಿದೆ.

ಮೊಹಂತಿಗೆ ಪತ್ರ: ಅಶ್ವಿನ್‍ರಾವ್ ಅವರು ಐಜಿಪಿ ಪ್ರಣವ್ ಮೊಹಂತಿ ಅವರಿಗೆ ಪತ್ರ ಬರೆದಿದ್ದು, ತಾವು ಎರಡು ದಿನಗಳ ಹಿಂದೆ ಲೋಕಾಯುಕ್ತ ಕಟೇರಿಗೆ ಭೇಟಿ ನೀಡಿದ್ದಾಗಿ ಹಾಗೂ ಆ ವೇಳೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಿಯಾಜ್ ಅವರನ್ನು ಭೇಟಿ ಮಾಡಿದ್ದಾಗಿ ವರದಿಯಾಗಿದೆ ಆದರೆ, ನಾನು ಆ ದಿನ ಬೆಂಗಳೂರಿನಲ್ಲಿ ಇರಲಿಲ್ಲ. ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com