ಬಿಬಿಎಂಪಿ ಆಡಳಿತಾಧಿಕಾರಿಯಿಂದ ಎರಡು ತಿಂಗಳಲ್ಲಿ ರೂ. 86 ಲಕ್ಷ ದಂಡ

ಬಿಬಿಎಂಪಿ ಆಡಳಿತಾಧಿಕಾರಿ ಟಿಎಂ ವಿಜಯಭಾಸ್ಕರ್, 2 ತಿಂಗಳಲ್ಲಿ ಗುತ್ತಿಗೆದಾರರಿಗೆ ರೂ 86 ಲಕ್ಷ ದಂಡ ವಿಧಿಸಿದ್ದಾರೆ.
ಬಿಬಿಎಂಪಿ(ಸಾಂದರ್ಭಿಕ ಚಿತ್ರ)
ಬಿಬಿಎಂಪಿ(ಸಾಂದರ್ಭಿಕ ಚಿತ್ರ)

ಬೆಂಗಳೂರು : ಬಿಬಿಎಂಪಿಯಲ್ಲಿ ಕಸ, ಬೀದಿ ದೀಪ, ರಸ್ತೆ ಗುಂಡಿ ಸಮಸ್ಯೆಗಳನ್ನು ದಂಡದ ಮೂಲಕವೇ ಪರಿಹರಿಸುತ್ತಿರುವ ಆಡಳಿತಾಧಿಕಾರಿ ಟಿ.ಎಂ ವಿಜಯಭಾಸ್ಕರ್, 2 ತಿಂಗಳಲ್ಲಿ ಗುತ್ತಿಗೆದಾರರಿಗೆ ರೂ 86 ಲಕ್ಷ ದಂಡ ವಿಧಿಸಿದ್ದಾರೆ. ಅಸ್ತಿ ತೆರಿಗೆ ಸೇರಿ ಆದಾಯ ಮೂಲಗಳಲ್ಲಿ ಕಠಿಣ ಕ್ರಮ ಜಾರಿಗೊಳಿಸುವುದರ ಮೂಲಕ ಆದಾಯ ಸಂಗ್ರಹ ಒಂದೆಡೆಯಾದರೆ, ದಂಡದ ಮೂಲಕವೂ ಬಿಬಿಎಂಪಿಯಲ್ಲಿ ಆದಾಯ ಸಂಗ್ರಹವಾಗುತ್ತಿದೆ. 2  ತಿಂಗಳಲ್ಲಿ ದಂಡದ ಮೂಲಕ ರೂ. 86 .52 ಲಕ್ಷ ದಂಡ ಸಂಗ್ರಹಿಸಲಾಗಿದೆ.

ಪ್ರತಿ ಶನಿವಾರ ತೀವ್ರ ಸ್ವಚ್ಛತಾ ಕಾರ್ಯಕ್ರಮ ಸೇರಿ ವಾರಕ್ಕೆ 2 ರಿಂದ 3 ಬಾರಿ ವಿವಿಧ ವಲಯಗಳಲ್ಲಿ ತಪಾಸಣೆ ನಡೆಸಿ ದಂಡ ವಿಧಿಸಲಾಗಿದೆ. ಇತ್ತೀಚೆಗೆ ರಸ್ತೆ ಗುಂಡಿಗಳ ಪರಿಶೀಲನೆ ನಡೆಸಿದ್ದು, ನಿರ್ವಹಣಾ ಅವಧಿಯಲ್ಲಿ ರಸ್ತೆಗುಂಡಿಗಳ ಬಗ್ಗೆ ಎಚ್ಚರ ವಹಿಸದ ಗುತ್ತಿಗೆದಾರರಿಗೆ ಒಟ್ಟು ರು. 25 ಲಕ್ಷ ದಂಡ ವಿಧಿಸಲಾಗಿತ್ತು. 52 ಅಧಿಕಾರಿಗಳ ತಂಡ ರಚಿಸಿದ್ದು ಒಟ್ಟು 4 , 649 ಗುಂಡಿ ಪತ್ತೆ ಮಾಡಲಾಗಿತ್ತು. ಗುತ್ತಿಗೆದಾರರು 3 ವರ್ಷಗಳ ನಿರ್ವಹಣಾ ಅವಧಿ ಹೊಂದಿರುವ 279 ರಸ್ತೆಗಳಲ್ಲಿ 906 ಗುಂಡಿಗಳನ್ನು ಅಧಿಕಾರಿಗಳ ತಂಡ ಗುರುತಿಸಿತ್ತು.  ಗುಂಡಿಗಳಿಗೆ ಏರಿಕೆ ಕ್ರಮದಲ್ಲಿ ದಂಡ ವಿಧಿಸಲಾಗಿತ್ತು.

ಇದಕ್ಕೂ ಮುನ್ನ ಎಲ್ಲಾ ವಲಯಗಳಲ್ಲಿ ಒಟ್ಟು 4 , 52 , 900 ಬೀದಿ ದೀಪಗಳ ತಪಾಸಣೆ ನಡೆಸಲಾಗಿತ್ತು. 16 498 ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದರಿಂದ ರೂ. 49 .52  ಲಕ್ಷ ದಂಡ ವಿಧಿಸಲಾಗಿತ್ತು.

ಕಸಕ್ಕೆ ರೂ 12 ಲಕ್ಷ: ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಸಂಸ್ಥೆ ಹಾಗೂ ಗುತ್ತಿಗೆದಾರರಿಗೆ ಎರಡು ತಿಂಗಳಲ್ಲಿ ರೂ. 12 ಲಕ್ಷ ದಂಡ ವಿಧಿಸಲಾಗಿದೆ. ಕಳೆದ ತಿಂಗಳು ಕಸ ಗುತ್ತಿಗೆ ಸಂಸ್ಥೆ ಬಿವಿಜಿ ಯಲಹಂಕ ಹಾಗೂ ಆರ್.ಆರ್ ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವುದಕ್ಕೆ ಎರಡು ಬಾರಿ ಒಟ್ಟು 4 ಲಕ್ಷ ದಂಡ ಹಾಕಲಾಗಿತ್ತು. ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಗುತ್ತಿಗೆದಾರರಿಂದ ಪಶ್ಚಿಮ ವಲಯದಲ್ಲಿ ರೂ.1 .4 ಲಕ್ಷ, ದಕ್ಷಿಣ ವಲಯ ರೂ.5 .87  ಲಕ್ಷ ಪೂರ್ವ ರೂ. 3 .50  ಲಕ್ಷ ದಂಡ ಸಂಗ್ರಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com