
ಬೆಂಗಳೂರು: 2003ರ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನದಲ್ಲಿ ರಾಜ್ಯ ಮಾದರಿ ಎನಿಸಿದ್ದು, ತಂಬಾಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಬಲಿಷ್ಠವಾದ ಕಾನೂನಿದೆ. ತಂಬಾಕು ಬಳಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸೂಚನೆ ನೀಡಿರುವುದರಿಂದ 2.4 ಲಕ್ಷ ಮಂದಿ ದೂರು ನೀಡಿದ್ದಾರೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ವಿಶ್ವ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಗೃಹ ಮತ್ತು ಕುಟುಂಬ ಕಲ್ಯಾಣ ಆರೋಗ್ಯ ಇಲಾಖೆ ವಿಕಾಸಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಯಾನ್ಸರ್ ಅನ್ನು `ಅಧಿಸೂಚಿತ ಕಾಯಿಲೆ' ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಈ ತಂತ್ರಾಂಶವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಸೋಮವಾರ ಬಿಡುಗಡೆ ಮಾಡಿದರು. ನಿಯಮದ ಪ್ರಕಾರ, ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಇನ್ನು ಎಲ್ಲ ಆಸ್ಪತ್ರೆಗಳು ಸರ್ಕಾರಕ್ಕೆ ಮಾಹಿತಿ ನೀಡಬೇಕು. ರೋಗಿಗಳ ಸಂಪೂರ್ಣ ಮಾಹಿತಿಯನ್ನು ಐಸಿಎಂಆರ್‍ನ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್) ಆನ್‍ಲೈನ್ ಸಾಫ್ಟ್ ವೇರ್‍ಗೆ ಅಳವಡಿಸಬೇಕಾಗುತ್ತದೆ.
ಧೂಮಪಾನ ಮಾಡುವವರೂ ಹಾಗೂ ಅವರ ಸುತ್ತಮುತ್ತಲಿನವರಿಗೆ ಉಂಟಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ದುಶ್ಚಟದಿಂದ ಉಂಟಾಗುವ ರೋಗದ ತಪಾಸಣೆ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರು ರೋಗ ಪತ್ತೆ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ವರದಿ ಬಂದ ನಂತರ ಸೂಕ್ತ ನೀತಿ ರೂಪಿಸಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು. ರಾಜ್ಯದ 15 ಜಿಲ್ಲೆಗಳಲ್ಲಿ ಪ್ರತಿ ವರ್ಷ 50 ಸಾವಿರ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರತಿ 12 ಮಂದಿಯಲ್ಲಿ ಒಬ್ಬರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದಾಗ ಗುಣಪಡಿಸಬಹುದು. ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ ಅನ್ವಯ ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಸೂಕ್ತ ಯೋಜನೆ, ನಿಯಂತ್ರಣಾ ನೀತಿ ಮತ್ತು ಸಂಶೋಧನೆಗಳನ್ನು ನಡೆಸುವ ಉದ್ದೇಶದಿಂದ ಇದನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ. ಈ ಘೋಷಣೆ ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದರು.
ಕ್ಯಾನ್ಸರ್ ಅಥವಾ ಶಂಕಿತ ಕ್ಯಾನ್ಸರ್ ಪ್ರಕರಣಗಳ ಕುರಿತ ಮಾಹಿತಿಯನ್ನು ಐಸಿಎಂಆರ್‍ನ ವೆಬ್‍ಸೈಟ್ www.hbccrindia.orgನಲ್ಲಿ ಲಭ್ಯವಿರುವ ಆನ್‍ಲೈನ್ ಸಾಫ್ಟ್ ವೇರ್ ನಲ್ಲಿ ಅಳವಡಿಸಬೇಕು. ಕ್ಯಾನ್ಸರ್‍ಗೆ ಸೂಕ್ತ ಚಿಕಿತ್ಸೆ ದೊರಕಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಬೇರು ಮಟ್ಟದಲ್ಲೇ ಕ್ಯಾನ್ಸರ್‍ನ ರೀತಿಗಳನ್ನು ತಿಳಿದು ಅದಕ್ಕೆ ಪರಿಹಾರ ಒದಗಿಸುವುದರ ಜತೆಗೆ ಎಚ್ಚರಿಕೆ ವಹಿಸಬೇಕಾದ ಕಾಯಿಲೆ ಎಂಬ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಾಜರಿದ್ದ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ) ಅನುಷ್ಠಾನದ ಬಗ್ಗೆ ನಿಗಾ ಇಡುವ ಸಾಫ್ಟ್ ವೇರ್‍ಗೆ ಚಾಲನೆ ನೀಡಿದರು.
Advertisement