ಲಿಫ್ಟ್ ಗುಂಡಿಗೆ ಬಿದ್ದು ವೃದ್ಧ ಸಾವು

ಲಿಫ್ಟ್ ಒಳಗಿನ ಕಾರ್ ಬರುವ ಮೊದಲೇ ಬಾಗಿಲು ತೆರೆದುಕೊಂಡ ಕಾರಣ ಅದರೊಳಗೆ ಕಾಲು ಹಾಕಿ, ಲಿಫ್ಟ್ ಗುಂಡಿಯೊಳಗೆ ಬಿದ್ದು ನಿವೃತ್ತ ಎಂಜಿನಿಯರ್ ಮೃತಪಟ್ಟಿರುವ ಘಟನೆ ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ...
ಲಿಫ್ಟ್ ಅಪಘಾತದಲ್ಲಿ ಸಾವನ್ನಪ್ಪಿದ ಸಚ್ಚಿದಾನಂದ ಮೂರ್ತಿ
ಲಿಫ್ಟ್ ಅಪಘಾತದಲ್ಲಿ ಸಾವನ್ನಪ್ಪಿದ ಸಚ್ಚಿದಾನಂದ ಮೂರ್ತಿ

ಬೆಂಗಳೂರು: ಲಿಫ್ಟ್ ಒಳಗಿನ ಕಾರ್ ಬರುವ ಮೊದಲೇ ಬಾಗಿಲು ತೆರೆದುಕೊಂಡ ಕಾರಣ ಅದರೊಳಗೆ ಕಾಲು ಹಾಕಿ, ಲಿಫ್ಟ್ ಗುಂಡಿಯೊಳಗೆ ಬಿದ್ದು ನಿವೃತ್ತ ಎಂಜಿನಿಯರ್ ಮೃತಪಟ್ಟಿರುವ ಘಟನೆ  ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.

ವಿಜಯನಗರದ ನಿವಾಸಿ ಸಚ್ಚಿದಾನಂದ ಮೂರ್ತಿ (80) ಮೃತಪಟ್ಟವರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪತ್ನಿ ಲವ್ಲಿ ದೇವಿ ಅವರಿಗೆ ಡಯಾಲಿಸಿಸ್ ಮಾಡಿಸಲು ಮೂರ್ತಿ ಅವರು ಬುಧವಾರ ಮಧ್ಯಾಹ್ನ ಫೋರ್ಟಿಸ್ ಆಸ್ಪತ್ರೆಗೆ ತೆರಳಿದ್ದರು. ಡಯಾಲಿಸಿಸ್ ಮುಗಿದ ನಂತರ ಬೇಸ್‍ಮೆಂಟ್‍ಗೆ ಬಂದಿದ್ದು ಕಾರಿನಲ್ಲಿ ಮನೆಗೆ ಹೋಗಲು ಮುಂದಾಗಿದ್ದರು. ಸಂಜೆ 4.15ರ ಸುಮಾರಿಗೆ ಚಿಕಿತ್ಸೆಗೆ  ಸಂಬಂಧಿಸಿದ ಯಾವುದೋ ಬಿಲ್ ಮರೆತ ಕಾರಣ ಅದನ್ನು ತರಲು ಕಾರಿನಿಂದ ಇಳಿದು ವಾಪಸ್ ಆಸ್ಪತ್ರೆಯೊಳಗೆ ಪ್ರವೇಶಿಸಿದ್ದಾರೆ.

ಗ್ರೌಂಡ್ ಫ್ಲೋರ್‍ನಲ್ಲಿ ಬಿಲ್ಲಿಂಗ್ ಕೌಂಟರ್ ಇದೆ. ಅವರು ಬೇಸ್‍ಮೆಂಟ್‍ನಲ್ಲಿದ್ದ ಲಿಫ್ಟ್ ಬಟನ್ ಅನ್ನು ಹಲವು ಬಾರಿ ಒತ್ತಿದ್ದಾರೆ. ಕೆಲ ಹೊತ್ತಿನ ಬಳಿಕ ಲಿಫ್ಟ್ ಬಾಗಿಲು ತೆರೆದುಕೊಂಡಿದೆ. ಆದರೆ, ಜನರ  ಕರೆದೊಯ್ಯುವ ಕಾರ್ ಬಂದಿರಲಿಲ್ಲ. ಅದು ಮೂರನೇ ಮಹಡಿಯಲ್ಲೇ ಸಿಲುಕಿತ್ತು. ಇದನ್ನು ಅರಿಯದ ಮೂರ್ತಿಯವರು, ಲಿಫ್ಟ್ ಕಾರ್ ಬಂದಿದೆ ಎಂದು ಭಾವಿಸಿ ಒಳಗೆ ಕಾಲಿಟ್ಟಿದ್ದಾರೆ. ತಕ್ಷಣ ಅವರು  ನಾಲ್ಕೈದು ಅಡಿ ಆಳವಿರುವ ಲಿಫ್ಟ್ ಗುಂಡಿಯೊಳಗೆ ಬಿದ್ದಿದ್ದಾರೆ. ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಗಾಗಿ ಕಾಯುತ್ತಿದ್ದ ದೇವಿ ಹಾಗೂ ಚಾಲಕ ಎಷ್ಟೋತ್ತಾದರೂ ಮೂರ್ತಿ ಅವರು ಬಾರದ ಕಾರಣ ಅನುಮಾನಗೊಂಡು ಕಾರಿನಿಂದ ಕೆಳಗಿಳಿದು ಬೇಸ್‍ಮೆಂಟ್ ಹಾಗೂ ಆಸ್ಪತ್ರೆಯ ಆವರಣದಲ್ಲಿ  ಹುಡುಕಾಡಿದ್ದಾರೆ. ಎಲ್ಲಿಯೂ ಪತ್ತೆಯಾಗದಿದ್ದಾಗ ಅಂತಿಮವಾಗಿ ಆಸ್ಪತ್ರೆಯ ಸಿಬ್ಬಂದಿಗೆ ಹೇಳಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಸಿಸಿ ಕ್ಯಾಮೆರಾ ವಿಡಿಯೋ ಪರಿಶೀಲಿಸಿದಾಗ ಮೂರ್ತಿ ಅವರು  ಬೇಸ್ ಮೆಂಟ್‍ನ ಲಿಫ್ಟ್ ಗುಂಡಿಯಲ್ಲಿ ಬೀಳುತ್ತಿರುವುದು ಕಂಡುಬಂದಿದೆ. ಕೂಡಲೇ ಲಿಫ್ಟ್ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಸೆಕ್ಯುರಿಟಿ ಗಾರ್ಡ್‍ಗಳ ಮೂಲಕ ಮೂರ್ತಿ ಅವರನ್ನು ಗುಂಡಿಯಿಂದ ಹೊರ ತೆಗೆದಿದ್ದಾರೆ. ತುರ್ತು ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಮೂರ್ತಿ ಮೃತಪಟ್ಟಿದ್ದರು ಎಂದು ಜ್ಞಾನಭಾರತಿ ಪೊಲೀಸರು ಹೇಳಿದ್ದಾರೆ.

ಜನರನ್ನು ಸಾಗಿಸುವ ಲಿಫ್ಟ್ ಕಾರ್ ಬರುವ ಮೊದಲೇ ಬಾಗಿಲು ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ಲಿಫ್ಟ್ ಬಾಗಿಲು ತೆರೆದುಕೊಂಡಿರುವ ಬಗ್ಗೆ ಅನುಮಾನವಿದೆ. ಮತ್ತೊಂದೆಡೆ ಲಿಫ್ಟ್  ಕಾರು ಕೂಡ  3ನೇ ಮಹಡಿಯಲ್ಲೇ ಸಿಲುಕಿತ್ತು. ಹೀಗಾಗಿ, ಲಿಫ್ಟ್ ದೋಷದ ಬಗ್ಗೆ ಅನುಮಾನವಿದೆ. ಮೃತಪಟ್ಟಿರುವ ಮೂರ್ತಿ ಕುಟುಂಬದವರ ಪ್ರಕಾರ, ಅವರಿಗೆ ಸ್ವಲ್ಪ ಮರೆವು, ಜತೆಗೆ ಕಣ್ಣು ಕೂಡ ಸ್ಪಷ್ಟವಾಗಿ  ಕಾಣಿಸುವುದಿಲ್ಲ. ಹೀಗಾಗಿ, ಲಿಫ್ಟ್ ಬಾಗಿಲು ತೆಗೆದುಕೊಂಡಾಗ ಸರಿಯಾಗಿ ಗಮನಿಸದೆ ಕಾಲಿಟ್ಟಿದ್ದಾರೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಮೃತ ಮೂರ್ತಿ ಅವರ ಪುತ್ರ ಸುಹಾಸ್ ಎಂಬುವರು ಆಸ್ಪತ್ರೆ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಟ್ಟಡ ಮಾಲೀಕರು, ಲಿಫ್ಟ್ ನಿರ್ವಹಣೆ ಬಗ್ಗೆ  ವರದಿ ನೀಡುವಂತೆ ಆಸ್ಪತ್ರೆಗೆ ಕೋರಲಾಗಿದೆ. ಅದರ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜ್ಞಾನಭಾರತಿ ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com