ಮೇಘರಿಕ್ ನಗರ ಪೊಲೀಸ್ ಆಯುಕ್ತ

ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಎನ್.ಎಸ್.ಮೇಘರಿಕ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ...
ಎನ್ ಎಸ್ ಮೇಘರಿಕ್ ಗೆ ಅಧಿಕಾರ ಹಸ್ತಾಂತರಿಸಿದ ಎಂಎನ್ ರೆಡ್ಡಿ
ಎನ್ ಎಸ್ ಮೇಘರಿಕ್ ಗೆ ಅಧಿಕಾರ ಹಸ್ತಾಂತರಿಸಿದ ಎಂಎನ್ ರೆಡ್ಡಿ
Updated on

ಬೆಂಗಳೂರು: ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಎನ್.ಎಸ್.ಮೇಘರಿಕ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ನಗರ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್. ರೆಡ್ಡಿ ಅವರನ್ನು ಅಗ್ನಿಶಾಮಕ, ಪೌರರಕ್ಷಣೆ ಹಾಗೂ ಗೃಹರಕ್ಷಕದಳದ ಪೊಲೀಸ್ ಮಹಾ ನಿರ್ದೇಶಕರಾಗಿ ಸರ್ಕಾರ ಬಡ್ತಿ ನೀಡಿ ನೇಮಿಸಿದೆ. ಈ   ಹಿನ್ನೆಲೆಯಲ್ಲಿ ತೆರವಾದ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್.ಎಸ್. ಮೇಘರಿಕ್ ಅವರನ್ನು ನೇಮಿಸಲಾಗಿದೆ. ಶುಕ್ರವಾರ  ಸಂಜೆ ರಾಜ್ಯ ಸರ್ಕಾರದ ಆದೇಶ ಹೊರಬಿದ್ದ ಬಳಿಕ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಎಂ.ಎನ್.ರೆಡ್ಡಿ ಅವರು ಎನ್.ಎಸ್.ಮೇಘರಿಕ್ ಅವರಿಗೆ `ದಂಡ' ಹಸ್ತಾಂತರಿಸುವ ಮೂಲಕ ಎನ್. ಎಸ್.  ಮೇಘರಿಕ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಘರಿಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ. ಬೇರುಮಟ್ಟದಿಂದಲೇ ಕೆಲಸ ಆರಂಭಿಸಲಾಗುವುದು. ಕೆಳವರ್ಗದ ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸಿದಲ್ಲಿ ಅಪರಾಧ ನಿಯಂತ್ರಣ ಸಾಧ್ಯ. ಹಾಗಾಗಿ ತಳಮಟ್ಟದಿಂದಲೇ ಕೆಲಸ ಬಿಗಿಗೊಳಿಸಲಾಗುವುದು. ಈ ಮೂಲಕ ಸರ್ಕಾರ ನನ್ನ ಮೇಲಿಟ್ಟಿರುವ ಭರವಸೆ ಉಳಿಸಿಕೊಳ್ಳುತ್ತೇವೆ. ಜನರ ಹಿತ ಕಾಪಾಡುತ್ತೇನೆ ಎಂದರು. ಆದರೆ, ಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ಸಹಕಾರ ಅಗತ್ಯ. ಪೊಲೀಸರು ಕೆಲಸ ಮಾಡದಿದ್ದಲ್ಲಿ ತಮ್ಮನ್ನು ಎಚ್ಚರಿಸುವ ಕೆಲಸವೂ ಆಗಬೇಕಿದೆ ಎಂದ ಮೇಘರಿಕ್, ನಗರದಲ್ಲಿ ನಡೆಯುತ್ತಿರುವ ಸರಗಳ್ಳತನ, ಲೈಂಗಿಕ ದೌರ್ಜನ್ಯ  ಸೇರಿದಂತೆ ಎಲ್ಲ ರೀತಿಯ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ತಮಗೆ ಹೊಸದಲ್ಲ. ಈ ಹಿಂದೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ, ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿಯೂ ಕೆಲಸ ನಿರ್ವಹಿಸಿರುವ ಅನುಭವ ಇದೆ.  ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆಗೆ ಸಜ್ಜು
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಪೊಲೀಸರು ಉತ್ತಮ ಕೆಲಸ ನಿರ್ವಹಿಸಿ ಸರ್ಕಾರದಿಂದ ಶಹಬ್ಬಾಸ್‍ಗಿರಿ ಪಡೆದಿದ್ದಾರೆ. ಅದೇ ರೀತಿ ಮುಂಬರುವ ಬಿಬಿಎಂಪಿ  ಚುನಾವಣೆಯನ್ನು ಸಹ ಸಮರ್ಥವಾಗಿ ಎದುರಿಸಲು ಪೊಲೀಸರು ಸಿದ್ಧ. ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು.  ಶಾಂತಿಯುತ ಚುನಾವಣೆ ನಡೆಯುವಂತೆ ನೋಡಿ ಕೊಳ್ಳಲಾಗುವುದು ಎಂದರು.

ದೂರು ನೀಡಲು ಮುಂದಾಗಿ
ಜನರು ಪೊಲೀಸರಿಗೆ ಆಪ್ತರಾಗಬೇಕು ಹಾಗೂ ದೂರು ನೀಡಲು ಮುಂದಾಗ ಬೇಕು. ಆಗ ಮಾತ್ರ ಅಪರಾಧ ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ನಿರ್ಗಮಿತ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಅಭಿಪ್ರಾಯಪಟ್ಟರು. ಅಗ್ನಿಶಾಮಕ, ಪೌರರಕ್ಷಣೆ ಹಾಗೂ ಗೃಹರಕ್ಷಕ ದಳದ ಡಿಜಿಪಿ ಆಗಿ ಅಧಿಕಾರವಹಿಸಿಕೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ಜನಸ್ನೇಹಿ ಪೊಲೀಸ್  ಆಗಬೇಕು. ಪೊಲೀಸರೆಂಬ ಅವರಲ್ಲಿ ಭಯ ದೂರ ವಾಗಬೇಕು.

ಇಲ್ಲವಾದಲ್ಲಿ ಆರೋಪಿಗಳ ಪತ್ತೆ ಹಾಗೂ ಅಪರಾಧ ನಿಯಂತ್ರಣ ಎರಡೂ ಕಷ್ಟವಾಗುತ್ತದೆ. ಹಾಗಾಗಿ ನಗರದ ಜನತೆ ಇನ್ನಾದರೂ ಪೊಲೀಸರ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.  ಆಯುಕ್ತರಾಗಿ ಸಲ್ಲಿಸಿದ ಸೇವೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದು, ತೃಪ್ತಿ ತಂದಿದೆ. ಆದರೆ, ಈ ವೇಳೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ, ಸರಣಿ ಸರಗಳ್ಳತನ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪೊಲೀಸರಿಗೆ ಸವಾಲಾಗಿದ್ದವು. ಇವೆಲ್ಲವನ್ನೂ  ಸಿಬ್ಬಂದಿ ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರು. ತಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ. ಸರಿಯಾಗಿ ಕೆಲಸ ಮಾಡಿದ ತೃಪ್ತಿ ಇದೆ. ಸಹೋದ್ಯೋಗಿಗಳು ಉತ್ತಮ ಸಹಕಾರ  ನೀಡಿದ್ದಾರೆ ಎಂದ ಅವರು, ನಗರದ ಜನತೆಗೆ ವಂದನೆ ಸಲ್ಲಿಸಿದರು.

ಮೇಘರಿಕ್ ಹಿನ್ನೆಲೆ
ರಾಜಸ್ಥಾನ ಮೂಲದ ನಿಮಾಜ್ ಪ್ರದೇಶದ ಮೇಘರಿಕ್ ಅವರು 1960ರ ಜು.10ರಂದು ಜನಿಸಿದರು. ಎಂ.ಕಾಂ. ನಂತರ ಇವರು 1983ರ ಜು.15 ರಂದು ಐಪಿಎಸ್ ಕರ್ನಾಟಕ ಕೇಡರ್‍ನ ಅಧಿಕಾರಿಯಾಗಿ ಆಯ್ಕೆಯಾದರು. ಕೊಡಗು ಜಿಲ್ಲೆಯ ಎಎಸ್‍ಪಿಯಾಗಿ ವೃತ್ತಿ ಜೀವನ ಆರಂಭ. ನಂತರ ಸಿಬಿಐ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಪಿ ಆಗಿ, ಬೆಂಗಳೂರಿನ ಸಿಎಆರ್ (ಪೂರ್ವ, ದಕ್ಷಿಣ) ಡಿಸಿಪಿಯಾಗಿ, ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಸಿಐಡಿ, ಮಾನವ ಹಕ್ಕುಗಳ ಆಯೋಗದ ಐಜಿಪಿಯಾಗಿ, ಕೆಎಸ್‍ಆರ್‍ಟಿಸಿ ನಿರ್ದೇಶಕರಾಗಿ,  ಅಪರಾಧ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ನೂತನ ಪೊಲೀಸ್ ಆಯುಕ್ತರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಎನ್.ಎಸ್. ಮೇಘರಿಕ್ ಅವರು ನಿರ್ಗಮಿತ ಆಯುಕ್ತ ಎಂ.ಎನ್. ರೆಡ್ಡಿ ಅವರನ್ನು ಆಲಿಂಗನ ಮಾಡಿ ಬೀಳ್ಕೊಡುಗೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com