ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ..?

ರಾಜ್ಯದಲ್ಲಿ ಇನ್ನು ಮುಂದೆ ಬೈಕ್ ನ ಹಿಂಬದಿಯಲ್ಲಿ ಕೂರುವ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ (ಸಂಗ್ರಹ ಚಿತ್ರ)
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಬೈಕ್ ನ ಹಿಂಬದಿಯಲ್ಲಿ ಕೂರುವ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಹೆಲ್ಮೆಟ್ ಕಡ್ಡಾಯಕ್ಕೆ ಸಂಬಂಧಿಸಿದಂತೆ ಹೊಸ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆಸಿದೆ. ಈಗಾಗಲೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ ಈ ನಿಯಮ ಜಾರಿಗೆ ತರಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದ 7 ಪ್ರಮುಖ ನಗರಗಳಲ್ಲಿ ಬೈಕ್ ಚಾಲಕರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಇದೀಗ ಬೈಕ್ ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸಬೇಕು ಎಂಬ ನಿಯಮ ಜಾರಿಗೆ ತರಲು ಸಾರಿಗೆ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಸರ್ಕಾರದಿಂದ ಅನುಮತಿ ದೊರೆತ ಬಳಿಕ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ದೇಶದೆಲ್ಲೆಡೆ ಜಾರಿಗೆ ಸಮಿತಿ ಶಿಫಾರಸ್ಸು
ಇನ್ನು ಹೆಲ್ಮೆಟ್ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ನೇಮಕವಾಗಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಿತಿಯು ತನ್ನ ವರದಿಯಲ್ಲಿ, ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದರೆ ಅಪಘಾತದ ಪ್ರಮಾಣ ಕಡಿಮೆಯಾಗಲಿದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರಂತೆ, ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವಂತೆ ಆದೇಶಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಈಗಾಗಲೇ ಹಲವು ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಚರ್ಚೆ ನಡೆದಿದ್ದು, ಇತರೆ ರಾಜ್ಯಗಳಲ್ಲಿ ಈ ನಿಯಮ ಜಾರಿಯಾದ ಬಳಿಕ ಕರ್ನಾಟಕದಲ್ಲಿ ಜಾರಿಗೆ ತರುವ ಚಿಂತನೆಯಲ್ಲಿ  ರಾಜ್ಯ ಸರ್ಕಾರ ತೊಡಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬೇರೆ ರಾಜ್ಯಗಳಿಗಿಂತ ಮೊದಲು ನಮ್ಮಲ್ಲಿ ಜಾರಿಯಾದರೆ, ಹೆಲ್ಮೆಟ್ ತಯಾರಿಕಾ ಕಂಪನಿಯೊಂದಿಗೆ ಭಾಗಿಯಾಗಿ ಸರ್ಕಾರ ಈ ರೀತಿಯ ಕ್ರಮ ಕೈಗೊಂಡಿದೆ ಎಂಬ ಆರೋಪ ಬರುತ್ತದೆ ಎಂಬ ಒಂದೇ ಕಾರಣಕ್ಕಾಗಿ ರಾಜ್ಯ ಸರ್ಕಾರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ರಾಜ್ಯಾದ್ಯಂತ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದರೂ, ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡಗಳಲ್ಲಿ ಮಾತ್ರ ಈ ನಿಯಮವನ್ನು ಶಿಸ್ತುಬದ್ಧವಾಗಿ ಜಾರಿಗೆ ತರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com