ಸರಗಳ್ಳರ ಹುಡುಕಾಟ ತೀವ್ರ (ಸಾಂದರ್ಭಿಕ ಚಿತ್ರ)
ಸರಗಳ್ಳರ ಹುಡುಕಾಟ ತೀವ್ರ (ಸಾಂದರ್ಭಿಕ ಚಿತ್ರ)

ಸರಗಳ್ಳರ ಹುಡುಕಾಟ ತೀವ್ರ

ಸರಗಳ್ಳರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿರುವ ಒಂದು ತಂಡ ಬೆಳಗಾವಿಗೆ ತೆರಳಿ ಸರಗಳ್ಳರ ಗ್ಯಾಂಗ್‍ನ ಪ್ರಮುಖ ಸದಸ್ಯ, ಈ ಹಿಂದೆ ಸರಗಳ್ಳತನ ಪ್ರಕರಣದಲ್ಲಿಬಂಧಿತನಾಗಿ ಜೈಲಿನಲ್ಲಿರುವ ಮಹಮ್ಮದ್ ಇರಾನಿ ಎಂಬಾತನನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ...

ಬೆಂಗಳೂರು: ಸರಗಳ್ಳರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿರುವ ಒಂದು ತಂಡ ಬೆಳಗಾವಿಗೆ ತೆರಳಿ ಸರಗಳ್ಳರ ಗ್ಯಾಂಗ್‍ನ ಪ್ರಮುಖ ಸದಸ್ಯ, ಈ ಹಿಂದೆ ಸರಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಮಹಮ್ಮದ್ ಇರಾನಿ ಎಂಬಾತನನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಸಿಸಿಬಿ ಪೊಲೀಸರ ಎರಡು ತಂಡ ಹಾಗೂ ನಗರ ಪೊಲೀಸರ ನಾಲ್ಕು ತಂಡಗಳು ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುರುವಾರ ನಗರದಲ್ಲಿ ಸಂಭವಿಸಿದ ಸರಣಿ ಸರಗಳ್ಳತನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಬೆಳಗಾವಿಗೆ ತೆರಳಿರುವ ವಿಶೇಷ ತಂಡಗಳು ಇರಾನಿ ಗ್ಯಾಂಗ್‍ನ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ನಡುವೆ ಮಹಮ್ಮದ್ ಇರಾನಿಯನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ವಿಜಯನಗರದಲ್ಲಿ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ವೇಳೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಆರೋಪಿಗಳಿಬ್ಬರ ಫೋಟೋ ತೋರಿಸಿ ಮಾಹಿತಿ ಕೋರಿದ್ದಾರೆ.

ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿರುವ ಇರಾನಿ ಗ್ಯಾಂಗ್‍ನ ಸದಸ್ಯರು ಎಲ್ಲೆಲ್ಲಿ ಚದುರಿದ್ದಾರೆ. ಹಳೇ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿರುವವರು, ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಇರುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅವರು ವಾಸವಿದ್ದ ಪ್ರದೇಶಗಳಿಗೆ ತೆರಳಿ ಪೊಲೀಸರ ತಂಡಗಳು ನೆರೆ ಹೊರೆಯವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕೋರಿದ್ದಾರೆ. ಈ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೇವಲ ಮಹಾರಾಷ್ಟ್ರ ಮಾತ್ರವಲ್ಲದೇ ಬೇರೆ ಬೇರೆ ಕಡೆಯು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಆ ಸ್ಥಳಗಳ ಹೆಸರು ಹೇಳುವಂತಿಲ್ಲ. ಒಂದು ವೇಳೆ ಮಾಹಿತಿ ನೀಡಿದರೆ ಆರೋಪಿಗಳು ಪರಾರಿಯಾಗಲು ನೆರವಾಗಬಹುದು. ಹೀಗಾಗಿ, ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ಹುಡುಕಾಟ ನಡೆದಿದೆ ಎಂದು ಹೇಳಲಾಗದು ಎಂದು ಪೊಲೀಸರು ತಿಳಿಸಿದ್ದಾರೆ.

ಕಪ್ಪು ಪಲ್ಸರ್ ಬಗ್ಗೆ ಮಾಹಿತಿ ನೀಡಿ: ಕಪ್ಪು ಪಲ್ಸರ್ ಬೈಕ್ ಸಂಖ್ಯೆ `7920' ಹಾಗೂ ಅನುಮಾನಾಸ್ಪದವಾಗಿ ಓಡಾಡುವ ಕಪ್ಪು ಪಲ್ಸರ್‍ಗಳು ಕಂಡು ಬಂದರೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಶನಿವಾರ ಕೂಡಾ ನಸುಕಿನಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿಕೊಂಡು ವಾಹನಗಳ ತೀರ್ವ ತಪಾಸಣೆಯಲ್ಲಿ ಪೊಲೀಸರು ತೊಡಗಿದ್ದರು. ಅದರಲ್ಲೂ ಕಪ್ಪು ಬಣ್ಣದ ಪಲ್ಸರ್ ಬೈಕ್‍ಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಕಪ್ಪು ಪಲ್ಸರ್ ಬೈಕ್‍ನಲ್ಲಿ ಓಡಾಡುವವ ರನ್ನು ತಡೆದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ವೇಳೆ, ಅನುಮಾನಾಸ್ಪದವಾಗಿರುವ ಅಥವಾ ಸೂಕ್ತ ದಾಖಲೆಗಳನ್ನು ಹೊಂದಿರದ ವ್ಯಕ್ತಿಗಳ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತಿದ್ದು, ಸೂಕ್ತ ದಾಖಲೆಗಳನ್ನು ತೋರಿಸಿದ ಬಳಿಕವೇ ವಾಹನಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ ಅಪಹರಣಕಾರರು ಕಪ್ಪು ಪಲ್ಸರ್ ಬೈಕ್‍ಗಳಲ್ಲಿ ಬಂದು ದುಷ್ಕೃತ್ಯ ಎಸಗುತ್ತಿರುವುದು ಇದೇ ಮೊದಲೇನಲ್ಲ.ನಗರದಲ್ಲಿ ಸಂಭವಿಸುವ ಸರಗಳ್ಳತನಗಳ ಪೈಕಿ ಹೆಚ್ಚಿನ
ಆರೋಪಿಗಳು ಪಲ್ಸರ್ ಬೈಕ್‍ಗಳಲ್ಲೇ ಬಂದು ಕೃತ್ಯ ಎಸಗುತ್ತಾರೆ. ಅದರಲ್ಲೂ ಕಪ್ಪು ಪಲ್ಸರ್ ಬೈಕ್‍ಗಳು ಅವರ ಫೇವರೇಟ್. ಅಷ್ಟೇ ಅಲ್ಲದೇ ಯಮಹಾ ಆರ್‍ಎಕ್ಸ್ ವಾಹನ ಹಾಗೂ ಹೊಂಡಾ ಆ್ಯಕ್ಟಿವಾ ವಾಹನಗಳಲ್ಲೂ ಕೂಡಾ ದುಷ್ಕರ್ಮಿಗಳು ಕೃತ್ಯ ಎಸಗಿರುವ ಪ್ರಕರಣಗಳಿವೆ. ಒಳ್ಳೆಯ ಪಿಕಪ್, ರೋಡ್ ಗ್ರಿಪ್, ವೇಗಕ್ಕಾಗಿ ಈ ವಾಹನಗಳು ಸರಗಳ್ಳರ ಹಾಟ್ ಫೇವರೇಟ್ ಆಗಿವೆ ಎನ್ನುತ್ತಾರೆ ನಗರ ಪೊಲೀಸರು.

ಪೊಲೀಸರು ನಾಕಾಬಂದಿ ಹಾಕಿಕೊಂಡು ತಪಾಸಣೆ ನಡೆಸುತ್ತಿರುವ ಕಡೆ ಹೋಗಿ ಸರಗಳ್ಳರು ಸಿಕ್ಕಿ ಬೀಳಲು ಸಾಧ್ಯವೇ ಇಲ್ಲ. ಏಕೆಂದರೆ, ಯಾವ ಪ್ರದೇಶದಲ್ಲಿ ಕೃತ್ಯ ಎಸಗಬೇಕು. ತಮಗೆ ವೇಗವಾಗಿ ತಪ್ಪಿಸಿಕೊಳ್ಳಲು ಅನುಕೂಲಕರವಾದ ಜಾಗ ಯಾವುದು ಎನ್ನುವುದನ್ನು ಸುತ್ತು ಹಾಕಿ ಸಮೀಕ್ಷೆ ಮಾಡಿದ ನಂತರವೇ ಕೃತ್ಯ ಎಸಗುತ್ತಾರೆ. ನಾಕಾ ಬಂಧಿಯಿಂದ ಕೃತ್ಯ ಎಸಗುವ ಆರೋಪಿಗಳಿಗೆ ನಿಯಂತ್ರಣ ಹೇರಬಹುದೇ ವಿನಃ ಆರೋಪಿಗಳನ್ನು ಅಲ್ಲಿ ಬಂಧಿಸಲಾಗದು ಎಂದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್‍ವೊಬ್ಬರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com