
ಬೆಂಗಳೂರು: ನಗರದ ಕೆಲವು ಬಾರ್, ಪಬ್ ಮತ್ತು ರೆಸ್ಟೋರೆಂಟ್‍ಗಳು ಅಪ್ರಾಪ್ತ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಮದ್ಯಸರಬರಾಜು ಮಾಡುತ್ತಿರುವ ಬಗ್ಗೆ ಸಂಸದ ರಾಜೀವ್ ಚಂದ್ರಶೇಖರ್ ಕಿಡಿಕಾರಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿರುವ ಅವರು ಕೂಡಲೇ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕೆಲವು ಬಾರ್, ಪಬ್‍ಗಳು ಅಪ್ರಾಪ್ತ ಮಕ್ಕಳಿಗೆ ಮದ್ಯ ಪೂರೈಸುತ್ತಿರುವ ಬಗ್ಗೆ ವಿದ್ಯಾರ್ಥಿ ಪೋಷಕರು ಮತ್ತು ಶಿಕ್ಷಕರಿಂದ ದೂರು ಬಂದಿದ್ದು, ಇದನ್ನು ತಪ್ಪಿಸಲು ಅಬಕಾರಿ ಖಾತೆ ಹೊತ್ತ ಮುಖ್ಯಮಂತ್ರಿ ಅವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಬ್ರ್ಯೂ ವರ್ಕ್ಸ್, ದಿ ಗ್ಲಾಸ್ ಹೌಸ್, ಸೈ ಮತ್ತು ದಿ ಸೋಷಿಯಲ್ ಎಂಬ ಹೆಸರಿನ ಬಾರ್, ರೆಸ್ಟೋರೆಂಟ್‍ಗಳು 21ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ ಕಾನೂನು ಬಾಹಿರವಾಗಿ ಮದ್ಯ ಪೂರೈಕೆ ಮಾಡುತ್ತಿವೆ. ಈ ಬಗ್ಗೆ ದೂರುಗಳು ಬರುತ್ತಿರುವುದರಿಂದ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಪರಿಶೀಲನೆ ನಡೆಸಬೇಕು. ಹಾಗೆಯೇ ಇಂಥ ಸ್ಥಳದಲ್ಲಿ ಕಾನೂನಿನ ಅನುಷ್ಠಾನ ಆಗತ್ತಿದೆಯೇ ಎಂದು ದೃಢಪಡಿಸಿಕೊಳ್ಳಬೇಕು. ಹಾಗೊಂದು ವೇಳೆ ಮಕ್ಕಳಿಗೆ ಮದ್ಯಮಾರಾಟ ಮಾಡುತ್ತಿರುವುದು ಖಾತರಿಯಾದರೆ ಸಂಬಂಧಿಸಿದವರನ್ನು
ಶಿಕ್ಷೆಗೆ ಗುರಿಪಡಿಸಬೇಕು. ಹಾಗೆಯೇ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಸರ್ಕಾರ ಇಂಥ ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಮಕ್ಕಳಿಗೆ ಮದ್ಯ ಪೂರೈಕೆಯಾಗುತ್ತಿರುವುದನ್ನು ತಪ್ಪಿಸಲು ಬೇರೆ ರೀತಿಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರಾಜೀವ್ ಚಂದ್ರಶೇಖರ್ ಎಚ್ಚರಿಸಿದ್ದಾರೆ.
Advertisement