ಬೆಂಕಿ ಹಚ್ಚಿ ಬಲೆಗೆ ಬಿದ್ದರು ಅಕ್ಕ-ತಂಗಿ

ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೆ ಆಟ ಆಡಿಸುತ್ತಿದ್ದ ಅಕ್ಕ-ತಂಗಿಯರು, ಇದೀಗ ಅವರೇ ಜಗಳ ಮಾಡಿಕೊಂಡು ತಾವಿದ್ದ ಮನೆಯೊಳಗೆ ಬೆಂಕಿ ಹಚ್ಚಿ ಸಿಕ್ಕಿಬಿದ್ದಿದ್ದಾರೆ...
ಬೆಂಕಿ ಹಚ್ಚಿ ಬಲೆಗೆ ಬಿದ್ದರು ಅಕ್ಕ-ತಂಗಿ (ಸಾಂದರ್ಭಿಕ ಚಿತ್ರ)
ಬೆಂಕಿ ಹಚ್ಚಿ ಬಲೆಗೆ ಬಿದ್ದರು ಅಕ್ಕ-ತಂಗಿ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೆ ಆಟ ಆಡಿಸುತ್ತಿದ್ದ ಅಕ್ಕ-ತಂಗಿಯರು, ಇದೀಗ ಅವರೇ ಜಗಳ ಮಾಡಿಕೊಂಡು
ತಾವಿದ್ದ ಮನೆಯೊಳಗೆ ಬೆಂಕಿ ಹಚ್ಚಿ ಸಿಕ್ಕಿಬಿದ್ದಿದ್ದಾರೆ.

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮ ರೆಸಿಕೊಂಡಿದ್ದ ಗೋವಾ ಮೂಲದ ಇಬ್ಬರು ವಕೀಲ ಸಹೋದರಿಯರಾದ ಮೇರಿ (30) ಮತ್ತು ಸ್ಟೆಲ್ಲಾ (28) ಅವರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಸಹಕಾರನಗರದಲ್ಲಿನ ಸ್ಟೆರ್ಲಿಂಗ್ ಪಾರ್ಕ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. 2014ರಲ್ಲಿ ನೆರೆಮನೆಯ ರಾಜು ಖುರಾನ ಎಂಬುವರ ಕೊಲೆಗೆ ಯತ್ನಿಸಿದ್ದು, ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಫ್ಲಾಟ್ ಖಾಲಿ ಮಾಡಿಕೊಂಡು ತಲೆಮರೆಸಿ ಕೊಂಡಿದ್ದ ಆರೋಪಿಗಳು, ಇತ್ತೀಚೆಗೆ ಮತ್ತೆ ನಗರಕ್ಕೆ ವಾಪಸಾಗಿದ್ದರು.

ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಸಹೋದರಿಯರು ಜಗಳ ಮಾಡಿಕೊಂಡಿದ್ದಾರೆ. ಆಗ, ಒಬ್ಬಾಕೆ ಮನೆಯಲ್ಲಿದ್ದ ಪೇಪರ್ ಮತ್ತು ಹಳೆಯ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾಳೆ. ಮತ್ತೊಬ್ಬಾಕೆ ಮನೆ ಬಾಗಿಲು ಮುಂದೆ ಮ್ಯಾಟ್ ಬಿಸಾಡಿ ಬೆಂಕಿ ಹಚ್ಚಿದ್ದಳು. ಅಪಾರ್ಟ್‍ಮೆಂಟ್‍ನಿಂದ ಭಾರಿ ಹೊಗೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿ ಮತ್ತು ಕೊಡಿಗೇಹಳ್ಳಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬಾಗಿಲು ಬಡಿದಿದ್ದಾರೆ. ಆದರೆ, ಒಳಗಿದ್ದ ಸಹೋದರಿಯರು ಬಾಗಿಲು ತೆಗೆಯಲು ನಿರಾಕರಿಸಿದ್ದರಿಂದ ಬಲ ಪ್ರಯೋಗಿಸಿ ಬಾಗಿಲು ಮುರಿದು ಒಳ ಪ್ರವೇಶಿಸಿ ಬೆಂಕಿ ನಂದಿಸಿದರು.

ಉದ್ದೇಶಪೂರ್ವಕ ಕೃತ್ಯ:

ಅಪಾರ್ಟ್ ಮೆಂಟ್‍ನ 4ನೇ ಮಹಡಿಯಲ್ಲಿ ವಾಸವಿರುವ ಸಹೋದರಿಯರು ನೆರೆಹೊರೆಯವರಿಗೆ ಉದ್ದೇಶಪೂರ್ವಕವಾಗಿ ತೊಂದರೆ  ನೀಡುತ್ತಿದ್ದರು. ಮನೆ ಮುಂದೆ ಕಸ ಹಾಕುವುದನ್ನು ಪ್ರಶ್ನಿಸಿದ ಕಾರಣಕ್ಕೆ ರಾಜು ಖಾರಾನ ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಅಷ್ಟೇ ಅಲ್ಲದೆ ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡಲು ಕಾಪಾಳಕ್ಕೆ ಹೊಡೆದಿದ್ದರು. ಸಹೋದರಿಯರ ಉಪಟಳ ತಾಳಲಾ ರದೆ ಹಲವರು ಫ್ಲಾಟ್ ಖಾಲಿ ಮಾಡಿದ್ದಾರೆ ಎಂದು ಫ್ಲಾಟ್ ನಲ್ಲಿ ವಾಸವಿರುವ ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜು ಖಾರಾನ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ವಾರೆಂಟ್ ಜಾರಿ ಯಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಬೆಂಕಿ ಹಚ್ಚಿದ ಪ್ರಕರಣದ ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com