
ಬೆಂಗಳೂರು: ಮಹಿಳೆಯರ ಸುರಕ್ಷತೆ, ಅತ್ಯಾಚಾರ, ದೌರ್ಜನ್ಯದ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ನಡುವೆಯೇ ಬೆಂಗಳೂರಿನ ಸ್ಟಾರ್ ಹೋಟೆಲ್‍ವೊಂದರಲ್ಲಿ ಕೊಠಡಿ ಸೇವೆ ನೀಡುವ ಅಪ್ರಾಪ್ತ ವಯಸ್ಸಿನ ಕೆಲಸಗಾರನೊಬ್ಬ ಅಮೆರಿಕಾ ಮೂಲದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ನ್ಯೂಜೆರ್ಸಿ ಮೂಲದ ಮಹಿಳೆ ನೊಂದವರು. ಕೃತ್ಯ ಎಸಗಿದ ಮಂಡ್ಯ ಮೂಲದ ಅಪ್ರಾಪ್ತನನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದು ಮಂಡಳಿ ಆದೇಶದಂತೆ ಸರ್ಕಾರಿ ಬಾಲಕರ ಮಂದಿರಕ್ಕೆ ಬಿಡಲಾಗಿದೆ.
ಕೆಲಸದ ಮೇಲೆ ಬಂದಿದ್ದ ಮಹಿಳೆ, ಸ್ಟಾರ್ ಹೋಟೆಲ್‍ವೊಂದರಲ್ಲಿ ಉಳಿದುಕೊಂಡಿದ್ದಳು. ಬುಧವಾರ ಮಧ್ಯಾಹ್ನ ಅನುಮತಿ ಇಲ್ಲದೇ ಕೊಠಡಿಯೊಳಗೆ ನುಗ್ಗಿದ ಆರೋಪಿ, ಕಾಫಿ ನೀಡಲು ಬಂದಿದ್ದಾಗಿ ಹೇಳಿದ್ದಾನೆ. ಆದರೆ, ತಾನು ಏನನ್ನೂ ಆರ್ಡರ್ ಮಾಡಿಲ್ಲ. ಕೊಠಡಿಯಿಂದ ತೆರಳು ಎಂದು ಹೇಳಿದ್ದಾಳೆ.
ಈ ವೇಳೆ ಆರೋಪಿ ಪ್ಯಾಂಟ್‍ನ ಜಿಪ್ ಬಿಚ್ಚಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕೊಠಡಿಯಿಂದ ಓಡಿ ಹೋಗಿದ್ದಾನೆ. ಇದರಿಂದ ನೊಂದ ಮಹಿಳೆ ಹೋಟೆಲ್ ವ್ಯವಸ್ಥಾಪಕರಿಗೆ ದೂರು ನೀಡಿದ್ದಳು. ಕೂಡಲೇ ಸಿಬ್ಬಂದಿ ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಕಲಂ 354 ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪ್ರಾಪ್ತ ಎಂಬುದು ಗೊತ್ತಾಗಿದೆ.
ಹೀಗಾಗಿ, ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದು ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸುವಂತೆ ಮಂಡಳಿ ಆದೇಶಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಪ್ರಾಪ್ತ ವಯಸ್ಸಿ ನವನನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ಹೋಟೆಲ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement